ಗದಗ: ‘ಮುಂಡರಗಿ ತಾಲ್ಲೂಕಿನ ಕಪ್ಪತ್ತಮಠದಲ್ಲಿ ಕಪ್ಪತ್ತಮಲ್ಲೇಶ್ವರನ ಪೂಜಾರಿಕೆಯಿಂದ ಬರುವ ಹಣ ಹಂಚಿಕೆ ವಿಚಾರದಲ್ಲಿ ತಾಯಿ ಮತ್ತು ಮಕ್ಕಳ ನಡುವೆ ಗಲಾಟೆ ನಡೆಯುತ್ತಿದ್ದು, ಈ ಬಿಕ್ಕಟ್ಟು ಪರಿಹರಿಸಲು ಭಕ್ತರೆಲ್ಲರೂ ಒಂದಾಗಿ ಪರಿಹಾರ ಹುಡುಕುವ ಅವಶ್ಯಕತೆ ಇದೆ’ ಎಂದು ಶಿವರಾಮಕೃಷ್ಣ ಸೇವಾ ಸಮಿತಿಯ ಅಧ್ಯಕ್ಷ ರಾಜು ಖಾನಪ್ಪನವರ ಹೇಳಿದರು.
‘ರಾಜ್ಯದ ವಿವಿಧೆಡೆ ಇರುವ ಮಠಗಳಲ್ಲೂ ಒಂದೊಂದು ತೆರನಾದ ಸಮಸ್ಯೆ, ಗೊಂದಲಗಳು ಇವೆ. ಅದೇ ರೀತಿ, ಕಪ್ಪತ್ತಮಠದಲ್ಲಿಯೂ ಸಮಸ್ಯೆ ಇದ್ದು ಎಲ್ಲ ಭಕ್ತರೂ ಸೇರಿ ಬಗೆಹರಿಸಬೇಕಿದೆ’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಪ್ಪತ್ತಮಠಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಅಲ್ಲಿರುವ ಕಪ್ಪತ್ತಮಲ್ಲೇಶ್ವರರನ್ನು ಪೂಜಿಸಿ ಮಠಕ್ಕೆ ಹಣ ಹಾಗೂ ಇನ್ನಿತರ ಸಹಾಯ ಮಾಡುತ್ತಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಅಲ್ಲಿಗೆ ಹೋಗಲು ಮುಜುಗರ ಪಡುವಂತಾಗಿದೆ. ಲಿಂಗೈಕ್ಯ ಶ್ರೀಗಳಾದ ವಿಶ್ವನಾಥ ಕಪ್ಪತ್ತಮಲ್ಲಯ್ಯ ಅವರ ಮೊದಲ ಮಗ, ಪ್ರಸ್ತುತ ಮಠದ ಸ್ವಾಮೀಜಿ ಆಗಿರುವ ಮಲ್ಲಿಕಾರ್ಜುನ ಶ್ರೀಗಳು ಪೂಜಾರಿಕೆಯಿಂದ ಸಿಗುವ ಹಣ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಹೋದರ ಶ್ರೀಕಾಂತ ಸ್ವಾಮೀಜಿಯನ್ನೂ ಹೊರಹಾಕಿದ್ದಾರೆ’ ಎಂದು ಆರೋಪ ಮಾಡಿದರು.
‘ದೇವಸ್ಥಾನದ ಜೀರ್ಣೋದ್ಧಾರ, ಅಭಿವೃದ್ಧಿಗೆಂದು ಭಕ್ತರು ಹಣ ಕೊಡುತ್ತಾರೆ. ಹಾಗಾಗಿ, ಕಪ್ಪತ್ತಮಲ್ಲೇಶ್ವರನಿಗೆ ನಡೆದುಕೊಳ್ಳುವ ಪ್ರತಿಯೊಬ್ಬರಿಗೂ ಮಠದ ಮೇಲೆ ಹಕ್ಕಿರುತ್ತದೆ. ಇದು ಅನುವಂಶಿಕ ಮಠವಾದ ಕಾರಣ ಲಿಂಗೈಕ್ಯ ಶ್ರೀಗಳ ಇಬ್ಬರೂ ಪುತ್ರರಿಗೂ ಮಠದ ಮೇಲೆ ಸಮಾನ ಹಕ್ಕಿದೆ. ಹಾಗಾಗಿ, ಮಠದಲ್ಲಿ ಸದ್ಯ ನಿರ್ಮಾಣವಾಗಿರುವ ಗೊಂದಲ ನಿವಾರಣೆಗೆ ಭಕ್ತರೆಲ್ಲರೂ ಕುಳಿತು, ಚರ್ಚಿಸಿ ಒಂದು ಟ್ರಸ್ಟ್ ನಿರ್ಮಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.
‘ಮಲ್ಲಿಕಾರ್ಜುನ ಸ್ವಾಮೀಜಿಯವರ ಅವಶ್ಯಕತೆಗೆ ತಕ್ಕಷ್ಟು ಹಣವನ್ನು ಪ್ರತಿ ತಿಂಗಳು ಕೊಟ್ಟು, ಉಳಿದ ಹಣವನ್ನು ಮಠದ ಅಭಿವೃದ್ಧಿಗೆ ಬಳಸಬೇಕು. ಬರುವ ಭಕ್ತರಿಗೆ ಸೌಕರ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಭಕ್ತರೆಲ್ಲರೂ ಒಂದಾಗಿ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ’ ಎಂದು ಹೇಳಿದರು.
ಸೇವಾ ಸಮಿತಿಯ ಮಹೇಶ ರೋಖಡೆ, ಕಿರಣ್ ಹಿರೇಮಠ, ವೆಂಕಟೇಶ ದೊಡ್ಡಮನಿ, ಕುಮಾರ್, ವಿಶಾಲ್ ಗೋಕಾವಿ ಇದ್ದರು.
ಕಪ್ಪತ್ತಮಠದಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದರೆ ಅಲ್ಲಿರುವ ಕೆಲವರು ದಬ್ಬಾಳಿಕೆ ಮಾಡುತ್ತಾರೆ. ಗದಗ ಜನರಿಗೂ ಮಠಕ್ಕೂ ಸಂಬಂಧವಿಲ್ಲ ಅಂತ ಹೇಳ್ತಾರೆ. ಹಾಗಾದರೆ ಗದಗ ಭಕ್ತರ ದೇಣಿಗೆಯನ್ನು ಸ್ವೀಕಾರ ಮಾಡುವುದೇಕೆ?– ರಾಜು ಖಾನಪ್ಪನವರ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.