ಗದಗ: ‘2026–27ನೇ ಸಾಲಿನ ರಾಜ್ಯ ಬಜೆಟ್ ಮಾರ್ಚ್‌ನಲ್ಲಿ ಮಂಡನೆ ಆಗಲಿದ್ದು, ಡಿಸೆಂಬರ್ ಒಳಗಾಗಿ ಗ್ರಾಮ ಪಂಚಾಯಿತಿ, ವಾರ್ಡ್ ಸಭೆ ನಡೆಸಿ, ಯೋಜನೆಗಳ ಕರಡು ಪ್ರತಿ ತಯಾರಿಸಿ ಅದಕ್ಕೆ ಅನುಮೋದನೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚಿಸಿದರು.
ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕಿತ್ತೂರು ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳ ಕರಡು ಪ್ರತಿ ತಯಾರಿಕೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆ ಸಭೆ ನಡೆಸಿ ಅಕ್ಟೋಬರ್ 10ಕ್ಕೆ ಕರಡು ಪ್ರತಿ ಸಲ್ಲಿಸುವಂತೆ ಗಡುವು ನೀಡಿದ್ದರು. ಆದರೆ, ಇನ್ನೂವರೆಗೂ ಸಿಎಂ ಆದೇಶ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಇಡೀ ವ್ಯವಸ್ಥೆಯೇ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಮಹಾತ್ಮ ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯ ನಿರ್ಮಾಣವಾಗಬೇಕಾದರೆ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಅಭಿವೃದ್ಧಿ ಆಗಬೇಕು. ಅದಕ್ಕೆ ತಳಮಟ್ಟದಿಂದಲೇ ಯೋಜನೆಗಳು ರೂಪುಗೊಳ್ಳಬೇಕು’ ಎಂದರು.
‘ವಿಕೇಂದ್ರೀಕರಣ ವ್ಯವಸ್ಥೆ ಬದಿಗೆ ಸರಿಸಿ ಕೇಂದ್ರೀಕರಣ ವ್ಯವಸ್ಥೆ ಬಂದರೆ ಅಲ್ಲಿ ಸರ್ವಾಧಿಕಾರತ್ವ ನೆಲೆಗೊಳ್ಳುತ್ತದೆ. ಕೇಂದ್ರೀಕರಣ ವ್ಯವಸ್ಥೆಯಿಂದ ಹಳ್ಳಿ ಮತ್ತು ನಗರಗಳ ನಡುವೆ ಕಂದಕ ಸೃಷ್ಟಿಯಾಗುತ್ತದೆ. ಹಳ್ಳಿಗಳಲ್ಲಿ ವಲಸೆ ಹೆಚ್ಚುತ್ತದೆ. ಇದನ್ನು ತಡೆಯಲು ವಿಕೇಂದ್ರೀಕರಣ ವ್ಯವಸ್ಥೆ ಬಲಿಷ್ಠಗೊಳಿಸಬೇಕಿದೆ. ಆದರೆ, ಕಾರಣಾಂತರಗಳಿಂದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆದಿಲ್ಲ’ ಎಂದರು.
‘ಮುಂದಿನ 15 ದಿನಗಳ ಒಳಗಾಗಿ ಜಿಲ್ಲಾ ಯೋಜನಾ ಸಮಿತಿಯು ಗ್ರಾಮ ಸಭೆ, ವಾರ್ಡ್ ಸಭೆ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿ ಯೋಜನೆಗಳ ಕರಡು ಪ್ರತಿಗಳನ್ನು ವಿಕೇಂದ್ರೀಕರಣ ಸಮಿತಿಗೆ ಸಲ್ಲಿಸಬೇಕು. ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಇದನ್ನು ತ್ವರಿತವಾಗಿ ಮಾಡಿದರೆ ಮಾತ್ರ ಮುಂದಿನ ಬಜೆಟ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮೀಸಲೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ ಮಾತನಾಡಿ, ‘ಪಂಚಾಯತ್‌ರಾಜ್ ಇಲಾಖೆ ಕಾನೂನಿನ ಪ್ರಕಾರ ವಿಕೇಂದ್ರೀಕರಣ ಅನುಷ್ಠಾನ ಪರಿಣಾಮಕಾರಿಯಾಗಿ ಆಗಬೇಕಿದೆ. ಈ ಮೊದಲು ಮೇಲಿನ ಹಂತದಿಂದ ಕರಡು ಯೋಜನೆ ಸಿದ್ಧಗೊಂಡು ಕೆಳಗಿನ ಹಂತದಲ್ಲಿ ಜಾರಿ ಆಗುತ್ತಿತ್ತು. ಆದರೆ ಈಗ, ಕೆಳಗಿನ ಹಂತದಿಂದ ಕರಡು ಯೋಜನೆ ಸಿದ್ದಗೊಂಡು ಮೇಲಿನ ಹಂತಕ್ಕೆ ಅನುಮೋದನೆಗಾಗಿ ಕಳುಹಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದ ಅಭಿವೃದ್ಧಿ ಯೋಜನೆಗಳಿಗಾಗಿ ಡಿಸೆಂಬರ್ ಒಳಗಾಗಿ ಯೋಜನೆಗಳಿಗೆ ಅನುಮೋದನೆ ಪಡೆಯಬೇಕಿದೆ’ ಎಂದರು.
ಹಿರಿಯ ನಿರ್ದೇಶಕ ಹಾಗೂ ಪದನಿಮಿತ್ತ ಸರ್ಕಾರದ ಕಾರ್ಯದರ್ಶಿ ಬಸವರಾಜ ಎಸ್. ಯೋಜನೆ ರೂಪಿಸುವಲ್ಲಿ ವಹಿಸಬೇಕಾದ ಅಂಶಗಳ ಬಗ್ಗೆ ತಿಳಿಸಿದರು.
ಕಿತ್ತೂರು ಕರ್ನಾಟಕ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳ ಸಿಇಒಗಳು, ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ.ನಾಡಗೌಡರ, ಯೋಜನಾ ಇಲಾಖೆ ಜಂಟಿ ಕಾರ್ಯದರ್ಶಿ ಬಿ. ಜಾನಕಿರಾಮ ಇದ್ದರು.
ಬುದ್ಧಿವಂತಿಕೆ ಹೃದಯವಂತಿಕೆ ಒಂದಾಗಲಿ: ಡಿ.ಆರ್. ಪಾಟೀಲ
‘ಅಧಿಕಾರಿಗಳ ಬುದ್ಧಿವಂತಿಕೆ ರಾಜಕಾರಣಿಗಳ ಹೃದಯಂತಿಕೆ ಒಟ್ಟಾಗಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು. ‘ಐಎಎಸ್ ಐಪಿಎಸ್ ಅಧಿಕಾರಿಗಳು ಬ್ರಿಟಿಷ್ ಅಧಿಕಾರಿಗಳೇನಲ್ಲ. ಸರ್ಕ್ಯುಲರ್ ಹೇಳಿದಂತೆ ಕೆಲಸ ಮಾಡುವುದನ್ನು ಬಿಟ್ಟು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು’ ಎಂದರು. ‘ರಾಜಕೀಯ ವ್ಯವಸ್ಥೆಯಲ್ಲಿ ಗ್ರಾಮೀಣ ಭಾಗದಿಂದ ಆಯ್ಕೆ ಆಗಿರುವುದು ನಮ್ಮದೇ ತಪ್ಪಾಗಿರಬಹುದು. ಬಹುತೇಕ ಐಎಎಸ್ ಅಧಿಕಾರಿಗಳು ನಗರ ಪ್ರದೇಶದಿಂದ ಬಂದಿರುತ್ತಾರೆ. ಅವರಿಗೆ ಗ್ರಾಮೀಣ ಜನರ ಕಷ್ಟಗಳ ಅರಿವು ಇರುವುದಿಲ್ಲ. ಹಾಗಾಗಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಮರ್ಪಕ ಯೋಜನೆಗಳನ್ನು ರೂಪಿಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒಗಳು ಗ್ರಾಮೀಣ ಭಾಗದ ಅಭಿವೃದ್ಧಿಗೆ ಕನ್ನಡಿಯಾಗಿರುತ್ತಾರೆ. ಮುಂಬರುವ 15 ದಿನಗಳ ಒಳಗಾಗಿ ತಮ್ಮ ವ್ಯಾಪ್ತಿಯ ಶಾಸಕರು ಸಚಿವರನ್ನು ಸಂಪರ್ಕಿಸಿ ಯೋಜನೆಯ ಕರಡು ಪ್ರತಿ ಸಿದ್ಧಪಡಿಸಬೇಕು.–ಬಿ.ಆರ್. ಪಾಟೀಲ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ
ಜಿಲ್ಲಾ ಹಣಕಾಸು ಖಾತೆಗಳಲ್ಲಿ ಇರುವ ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಜತೆಗೆ ಕೋವಿಡ್ ನಂತರ ಸ್ಥಗಿತಗೊಂಡಿದ್ದ ಮಾನವ ಅಭಿವೃದ್ಧಿ ಸೂಚ್ಯಂಕ ಸಮೀಕ್ಷೆಯನ್ನು ಮತ್ತೇ ಕೈಗೆತ್ತಿಕೊಳ್ಳಲಾಗಿದೆ.–ರಮಣ್‌ದೀಪ್ ಚೌಧರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.