ADVERTISEMENT

ಪ್ರವಾಹ: ಹರಿದುಬಂತು ನೆರವಿನ ಮಹಾಪೂರ

ಹೊಳೆ ಆಲೂರಿನಿಂದ ವಿಶೇಷ ರೈಲಿನಲ್ಲಿ ಗದುಗಿಗೆ ಬಂದ ಪ್ರವಾಹ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 14:30 IST
Last Updated 9 ಆಗಸ್ಟ್ 2019, 14:30 IST
ಗದುಗಿನ ತೋಂಟದಾರ್ಯ ಮಠದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತರು
ಗದುಗಿನ ತೋಂಟದಾರ್ಯ ಮಠದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತರು   

ಗದಗ: ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕುಗಳಲ್ಲಿ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳದಿಂದ ಉಂಟಾಗಿರುವ ಭೀಕರ ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ಸಾರ್ವಜನಿಕರು, ಸಂಸ್ಥೆಗಳು ಮಾನವೀಯ ಹಸ್ತ ಚಾಚುತ್ತಿದ್ದು, ನೆರವಿನ ಮಹಾಪೂರವೇ ಹರಿದುಬರುತ್ತಿದೆ.

ಪ್ರವಾಹಕ್ಕೆ ಸಿಲುಕಿದ್ದ ಗ್ರಾಮಗಳಿಂದ ಸ್ಥಳಾಂತರ ಮಾಡಲಾದ ಸುಮಾರು 500ಕ್ಕೂ ಹೆಚ್ಚು ಮಂದಿ ಗುರುವಾರ ಮಧ್ಯರಾತ್ರಿ ವಿಶೇಷ ರೈಲಿನಲ್ಲಿ, ಹೊಳೆ ಆಲೂರಿನಿಂದ ಗದುಗಿಗೆ ಬಂದರು. ಗದುಗಿನ ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮ ಮತ್ತು ಈದ್ಗಾ ಶಾದಿ ಮಹಲ್‌ನಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಶುಕ್ರವಾರ ಮಧ್ಯಾಹ್ನವೂ ವಿಶೇಷ ರೈಲಿನಲ್ಲಿ 500ಕ್ಕೂ ಹೆಚ್ಚು ಮಂದಿ ಮತ್ತೆ ಹೊಳೆ ಆಲೂರಿನಿಂದ ಗದುಗಿಗೆ ಸ್ಥಳಾಂತರಗೊಂಡಿದ್ದಾರೆ.

ಸಂತ್ರಸ್ತರು ಗದಗ ರೈಲು ನಿಲ್ದಾಣ ತಲುಪುತ್ತಿದ್ದಂತೆ, ಜೈನ ಸಮಾಜದ ಯುವಕರು ಅವರಿಗೆ ಹೊದಿಕೆಗಳನ್ನು ವಿತರಿಸಿದರು. ಮುಸ್ಲಿಂ ಸಮುದಾಯದವರು ಉಪಹಾರದ ವ್ಯವಸ್ಥೆ ಮಾಡಿದ್ದರು. ಡಿಜಿಎಂ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಉಮೇಶ ಪುರದ ನೇತೃತ್ವದಲ್ಲಿ ನಾಲ್ಕು ವೈದ್ಯರ ತಂಡ ಸಂತ್ರಸ್ತರ ವೈದ್ಯಕೀಯ ತಪಾಸಣೆ ನಡೆಸಿತು. ಆರೋಗ್ಯ ಇಲಾಖೆ ವೈದ್ಯರೂ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ನೆಗಡಿ, ಜ್ವರದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ADVERTISEMENT

ಇದರೊಂದಿಗೆ ಗದಗ ನಗರದ ಇನ್ನರ್‌ವೀಲ್‌ ಕ್ಲಬ್‌, ಸೇರಿ ವಿವಿಧ ಸಂಘ-ಸಂಸ್ಥೆಗಳು, ಕೆಲವರು ವೈಯಕ್ತಿಕವಾಗಿ ತಮಗಾದ ನೆರವನ್ನು ಪರಿಹಾರ ಕೇಂದ್ರಕ್ಕೆ ತಂದು ಕೊಡುತ್ತಿದ್ದಾರೆ. ತೋಂಟದಾರ್ಯ ಮಠದ ಕಲ್ಯಾಣ ಮಂಟಪದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಇಲ್ಲಿ 800ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದಾರೆ.

ಎಲ್ಲವೂ ನೀರು ಪಾಲಾದವು; ಸಂತ್ರಸ್ತರ ಕಣ್ಣೀರು
‘ಏಕಾಏಕಿ ನೀರು ನುಗ್ಗಿದ್ದರಿಂದ ಉಟ್ಟ ಬಟ್ಟೆಯಲ್ಲೇ ಬಂದಿದ್ದೇವೆ. ಮನೆಯಲ್ಲಿ ಸಂಗ್ರಹಿಸಿಟ್ಟ ಧಾನ್ಯಗಳು, ಬಟ್ಟೆಗಳು, ದಾಖಲೆಪತ್ರಗಳು ನೀರು ಪಾಲಾಗಿವೆ. ಬೆಳೆಗಳು ನೀರಿನಡಿ ಮುಳುಗಿವೆ. ಮುಂದೇನು ಮಾಡುವುದು ಎನ್ನುವುದರ ಕುರಿತು ದಿಕ್ಕೇ ತೋಚುತ್ತಿಲ್ಲ’ ಎಂದು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದರು.

ದಶಕದ ಹಿಂದೆ ಪ್ರವಾಹ ಬಂದಾಗ, ಅದು ಹೊಳೆಆಲೂರಿನ ಕೆಲವು ಭಾಗವನ್ನು ಮಾತ್ರ ಆವರಿಸಿಕೊಂಡಿತ್ತು. ಈ ಬಾರಿಯೂ ಅದೇ ಲೆಕ್ಕಾಚಾರದಲ್ಲಿ ಜನರಿದ್ದರು. ಆದರೆ, ನವಿಲುತೀರ್ಥ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಗೆ ಹರಿಸಿದ್ದರಿಂದ ಮಲಪ್ರಭಾ ನದಿ ಉಕ್ಕಿ ಹರಿಯಿತು.‘ಮಲಪ್ರಭಾ ನದಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನೀರನ್ನು ನಮ್ಮ ಜೀವಿತಾವಧಿಯಲ್ಲೇ ಇದೇ ಮೊದಲ ಬಾರಿಗೆ ನೋಡಿದ್ದು’ ಎಂದು 85 ವರ್ಷದ ವೃದ್ಧೆ ಅನಸೂಯ ಸಾವಳಗಿ ಆತಂಕದಿಂದ ಹೇಳಿದರು.

‘ಗುರುವಾರ ಮಧ್ಯಾಹ್ನದ ವೇಳೆಗೆ ಗ್ರಾಮ ತೊರೆಯುವಂತೆ ಡಂಗುರ ಸಾರಿದರು. ಕೈಗೆ ಸಿಕ್ಕ, ಬಟ್ಟೆ, ಪಾತ್ರೆಗಳನ್ನು ಹಿಡಿದುಕೊಂಡು ನಡುಮಟ್ಟದ ನೀರಿನಲ್ಲೇ ನಡೆದುಕೊಂಡು ಬಂದು ರೈಲ್ವೆ ನಿಲ್ದಾಣ ತಲುಪಿದೆವು. ಕೆಲವರು ತಮ್ಮ ಜತೆಗೆ ತಂದಿದ್ದ ಆಡುಗಳು, ಜಾನುವಾರುಗಳನ್ನು ಗ್ರಾಮದ ಹೊರಗಿರುವ ಜಮೀನುಗಳಲ್ಲಿ ಕಟ್ಟಿ ಬಂದಿದ್ದಾಗಿ ಕೆಲವರು ಪ್ರವಾಹದ ಭೀಕರತೆಯನ್ನು ವಿವರಿಸಿದರು.

ಗರ್ಭಿಣಿಯರ ಪರದಾಟ
ಪ್ರವಾಹದಿಂದ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ‘ಪ್ರವಾಹದಿಂದ ಮನೆ, ಜಮೀನು ಮುಳುಗಿದ್ದರಿಂದ ಗುರುವಾರ ತಡ ರಾತ್ರಿ ಉಟ್ಟ ಬಟ್ಟೆಯಲ್ಲೇ ರೈಲು ಹತ್ತಿಕೊಂಡು ಗದುಗಿಗೆ ಬಂದು ಇಲ್ಲಿನ ಪರಿಹಾರ ಕೇಂದ್ರದಲ್ಲಿದ್ದೇವೆ. ಮಗಳು, ಮೊಮ್ಮಗಳು ಇಬ್ಬರೂ ಗರ್ಭಿಣಿಯರು. ಇಂತಹ ಕಷ್ಟದ ಪರಿಸ್ಥಿತಿ ಯಾರಿಗೂ ಬರಬಾರದು’ಎಂದು ಹೊಳೆಆಲೂರಿನ ಗಿರಿಜವ್ವ ಹೊಸಮನಿ ಕಣ್ಣೀರು ಹಾಕಿದರು.‘ಪತಿ, ಮಾವ ಎಲ್ಲರೂ ರೋಣದ ‘ಆಸರೆ’ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ನಾವು ಇಲ್ಲಿಗೆ ಬಂದಿದ್ದೇವೆ. ನದಿಯಲ್ಲಿ ನೀರು ಕಡಿಮೆಯಾಗಿ ಆದಷ್ಟು ಬೇಗ ಊರಿಗೆ ಮರಳಿದರೆ ಸಾಕು’ಎಂದು ಗರ್ಭಿಣಿ ಹೇಮಾ ಹೊಸಮನಿ ಕಂಬನಿ ಮಿಡಿದರು. ಪ್ರವಾಹ ಸಂತ್ರಸ್ತರಲ್ಲಿ ಸಾಕಷ್ಟು ಜನರು ರೋಣ–ಹೊಳೆಆಲೂರು ರಸ್ತೆಯ ‘ಆಸರೆ’ಮನೆಗಳಲ್ಲಿ ಆಶ್ರಯ ಪಡೆದರೆ, ಇನ್ನು ಕೆಲವರು ತಮ್ಮ ಸಂಬಂಧಿಕರ, ಸ್ನೇಹಿತರ ಮನೆಗೆ ಹೋಗಿದ್ದಾರೆ.

*
ಹೊಳೆ ಆಲೂರಿನಲ್ಲಿ ಪ್ರತಿ ಮನೆಗೂ ನೀರು ನುಗ್ಗಿದೆ. ಒಂದೊಂದು ಮನೆಯಲ್ಲಿ ಕನಿಷ್ಟ 4 ರಿಂದ 8 ಅಡಿಯಷ್ಟು ನೀರು ನಿಂತಿದೆ. ರಸ್ತೆಗಳೆಲ್ಲ ನದಿಗಳಂತೆ ಕಾಣುತ್ತಿವೆ’
–ಕಮಲಸಾಬ ಗೊರವನಕೊಳ್ಳ, ಪ್ರಕಾಶ ಬಂಡಿ, ಪ್ರವಾಹ ಸಂತ್ರಸ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.