ADVERTISEMENT

ರೋಣದಲ್ಲಿ ಮಳೆ ಆರ್ಭಟ | ಮನೆಗಳಿಗೆ ನುಗ್ಗಿದ ನೀರು

ಕೆರೆಯಂತಾದ ಉರ್ದು ಶಾಲೆಯ ಆವರಣ; ನಿವಾಸಿಗಳಿಂದ ಪುರಸಭೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:25 IST
Last Updated 18 ಸೆಪ್ಟೆಂಬರ್ 2019, 14:25 IST
ರೋಣದ ಉರ್ದು ಶಾಲೆಯ ಆವರಣದಲ್ಲಿ ನೀರು ನಿಂತಿರುವುದು
ರೋಣದ ಉರ್ದು ಶಾಲೆಯ ಆವರಣದಲ್ಲಿ ನೀರು ನಿಂತಿರುವುದು   

ಗದಗ/ರೋಣ: ಎರಡು ವಾರಗಳ ಬಿಡುವಿನ ನಂತರ ಗದಗ ಮತ್ತು ರೋಣದಲ್ಲಿ ಬುಧವಾರ ಸಂಜೆ ಸಾಮಾನ್ಯ ಮಳೆ ಸುರಿಯಿತು. ಮಂಗಳವಾರ ತಡರಾತ್ರಿಯೂ ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರ್ಭಟಿಸಿದೆ.

ಗದಗ–ಬೆಟಗೇರಿ ಅವಳಿ ನಗರದಲ್ಲಿ ಅರ್ಧಗಂಟೆ ಸಾಮಾನ್ಯ ಮಳೆಯಾಯಿತು. ನಗರ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿಗಾಗಿ ಹಲವೆಡೆ ರಸ್ತೆ ಅಗೆಯಲಾಗಿದ್ದು, ಮಳೆನೀರಿನಿಂದ ರಸ್ತೆ ಕೆಸರುಗದ್ದೆಯಂತಾಗಿ ವಾಹನ ಸವಾರರು ಪರದಾಡಿದರು. ಪಾಲಾ–ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ಕೆಸರು ನೀರು ನಿಂತು ಸವಾರರು ತೊಂದರೆ ಅನುಬವಿಸಿದರು. ಬೆಟಗೇರಿ ರೈಲ್ವೆ ಕೆಳಸೇತುವೆ ಬಳಿ ನೀರು ನಿಂತು ವಾಹನ ದಟ್ಟಣೆ ಉಂಟಾಯಿತು.

ಗದಗ ನಗರ ವ್ಯಾಪ್ತಿಯಲ್ಲಿ ಎರಡು ವಾರಗಳಿಂದ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಬಿಸಿಲು ಮತ್ತು ಧೂಳಿನಿಂದ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಮಳೆಯಾದ ಬೆನ್ನಲ್ಲೇ ವಾತಾವರಣ ತಂಪಾಗಿದೆ.

ADVERTISEMENT

ಶಾಲಾ ಆವರಣಕ್ಕೆ ನುಗ್ಗಿದ ನೀರು: ಮಂಗಳವಾರ ತಡರಾತ್ರಿ ಧಾರಾಕಾರ ಮಳೆಯಿಂದಾಗಿ ರೋಣ ಪಟ್ಟಣದ ಉರ್ದು ಶಾಲೆ ಆವರಣ ಮತ್ತು ಕೆಲವು ಮನೆಗಳಿಗೆ ನೀರು ನುಗ್ಗಿತು. ಸಂಜೆ 7 ಗಂಟೆಗೆ ಪ್ರಾರಂಭವಾದ ಮಳೆಯು 3 ಗಂಟೆ ನಿರಂತರ ಆರ್ಭಟಿಸಿತು. ಚರಂಡಿ ನೀರು ಉಕ್ಕಿ ರಸ್ತೆಗೆ ಹರಿದಿದ್ದರಿಂದ ತಗ್ಗು ಪ್ರದೇಶಗಳ ಜನತೆ ತೀವ್ರ ತೊಂದರೆ ಅನುಭವಿಸಿದರು.

ಪಟ್ಟಣದ 1ನೇ ವಾರ್ಡಿನಲ್ಲಿರುವ ಸರ್ಕಾರಿ ಉರ್ದುಶಾಲೆ ಆವರಣಕ್ಕೆ ನೀರು ನುಗ್ಗಿದ್ದರಿಂದ ಶಾಲೆಯ ಆವರಣವು ಸಂಪೂರ್ಣ ಕೆರೆಯಂತಾಗಿದೆ. ಅಲ್ಲದೇ, ಈ ಶಾಲೆಯ ಅಡುಗೆ ಕೋಣೆಗೆ ನೀರು ನುಗ್ಗಿದ್ದರಿಂದ ಕೊಠಡಿಯಲ್ಲಿದ್ದ ಅಕ್ಕಿ, ಬೇಳೆ, ಇನ್ನಿತರ ಬಿಸಿಯೂಟದ ಆಹಾರ ಸಾಮಗ್ರಿಗಳು ನೀರಿನಲ್ಲಿ ಸಿಕ್ಕು ನಾಶವಾಯಿತು. ಆವರಣದಲ್ಲಿನ ನೀರು ಹೊರಹಾಕಲು ಶಾಲೆಯ ಶಿಕ್ಷಕರು, ಸಿಬ್ಬಂದಿ ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.