ADVERTISEMENT

ಎಚ್‌.ಕೆ.ಪಾಟೀಲ ಗದಗ ಜಿಲ್ಲೆಯ ಟೂಲ್‌ಕಿಟ್ ಅಭಿಯಾನದ ಪ್ರಮುಖ ರೂವಾರಿ: ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಮೇ 2021, 13:30 IST
Last Updated 20 ಮೇ 2021, 13:30 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ಗದಗ: ‘ಗದಗ ಜಿಲ್ಲೆಯಲ್ಲಿ ಟೂಲ್‌ಕಿಟ್‌ ಅಭಿಯಾನದ ಪ್ರಮುಖ ರೂವಾರಿ ಶಾಸಕ ಎಚ್‌.ಕೆ.ಪಾಟೀಲ. ಉಸ್ತುವಾರಿ ಸಚಿವರು ಹೋಗಿ ಅವರ ಮನೆ ಮುಂದೆ ಕೂರಬೇಕೇ? ಎಚ್‌.ಕೆ.ಪಾಟೀಲ ಹೇಳಿದ್ದೆಲ್ಲವೂ ವೇದವಾಕ್ಯವೇ?’ ಎಂದು ಸಚಿವ ಸಿ.ಸಿ.ಪಾಟೀಲ ವ್ಯಗ್ರರಾದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ವಿಶ್ವಾಸ ಇಲ್ಲದ ಕಾರಣ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದಾರೆ ಎಂಬ ಶಾಸಕ ಎಚ್‌.ಕೆ.ಪಾಟೀಲರ ಹೇಳಿಕೆಗೆ ಸಚಿವರು ಮೇಲಿನ ರೀತಿ ಪ್ರತಿಕ್ರಿಯೆ ನೀಡಿದರು.

‘ಗದಗ ಜಿಲ್ಲೆಯಲ್ಲಿನ ಕೋವಿಡ್‌ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದೇವೆ. ಜಿಲ್ಲೆಯಲ್ಲಿನ ಆಮ್ಲಜನಕ ಕೊರತೆ ನೀಗಿಸಿದ್ದೇವೆ. ವೆಂಟಿಲೇಟರ್‌ ಅಳವಡಿಸಿದ್ದೇವೆ. ಹೆಚ್ಚುವರಿ ಹಾಸಿಗೆ ವ್ಯವಸ್ಥೆ, ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸಿದ್ದೇವೆ. ಇದಕ್ಕಿಂತ ಇನ್ನೂ ಹೆಚ್ಚಿನದ್ದೇನು ಮಾಡಲು ಸಾಧ್ಯ? ಅವರು ಅಧಿಕಾರದಲ್ಲಿ ಇದ್ದಿದ್ದರೆ ಕೃಷಿ ವಿಜ್ಞಾನ ಕೇಂದ್ರದೊಳಗೆ ಕದ ಹಾಕಿಕೊಂಡು ಕುಳಿತಿರುತ್ತಿದ್ದರು’ ಎಂದು ಛೇಡಿಸಿದರು.

ADVERTISEMENT

‘ಪಿಎಂ ಕೇರ್ಸ್‌ನಿಂದ ಬಂದಿರುವ ವೆಂಟಿಲೇಟರ್‌ಗಳನ್ನು ಡಬ್ಬಾ ಎಂದು ಕರೆದಿದ್ದಾರೆ. ಒಬ್ಬ ಹಿರಿಯ ನಾಯಕ, ಪ್ರಭಾವಿ ರಾಜಕಾರಣಿಯಾಗಿ ಮಾತನಾಡುವ ಮಾತೇ ಅದು? ಇವರು ಹೇಳಿದಂತೆ ಕುಣಿದರೆ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರು ಛಲೋ.. ಕೇಳದಿದ್ದರೆ ಈ ರೀತಿ ಆರೋಪ ಮಾಡುವುದೇ ಅವರ ಚಾಳಿ’ ಎಂದು ತಿವಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಅಧಿಕಾರಿಗಳ ಮಾತು ಕೇಳಬಾರದು ಎನ್ನುತ್ತಾರೆ. ಆದರೆ, ಕೆಲಸ ಮಾಡಲು ಜಿಲ್ಲಾಧಿಕಾರಿ, ಎಸ್‌ಪಿ, ಸಿಇಒ ಮಾತುಗಳನ್ನೇ ಕೇಳಬೇಕು. ಇವರು ಅಧಿಕಾರದಲ್ಲಿ ಇದ್ದಾಗೇನು ಬ್ರಹ್ಮ ಬಂದು ಹೇಳುತ್ತಿದ್ದನೇ’ ಎಂದು ಕಿಡಿಕಾರಿದರು.

‘ಅಧಿಕಾರಿಗಳನ್ನು ಹುರಿದುಂಬಿಸಿ ಕೆಲಸ ತೆಗೆದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳನ್ನು ಹುರಿದುಂಬಿಸಿ ಮಾತನಾಡಿದ್ದಾರೆ. ಸರ್ಕಾರ ಹೇಳಿದ್ದನ್ನು ಅನುಷ್ಠಾನಕ್ಕೆ ತರುವವರೇ ಅಧಿಕಾರಿಗಳು. ಇಷ್ಟು ದೊಡ್ಡ ರಾಜಕಾರಣಿ ಸರ್ಕಾರದ ಜತೆಗೆ ಕೈಜೋಡಿಸಿ ಕೆಲಸ ಮಾಡಬೇಕು. ನೂನ್ಯತೆ ಇದ್ದರೆ ತಿಳಿಹೇಳಬೇಕು. ಅದು ಬಿಟ್ಟು ಇಲ್ಲ ಸಲ್ಲದ ಆರೋಪಗಳನ್ನು ಮಾಡಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.