ADVERTISEMENT

ಕೊಳಚೆಯ ಆಗರವಾದ ಕುರಹಟ್ಟಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 4:36 IST
Last Updated 11 ಫೆಬ್ರುವರಿ 2026, 4:36 IST
ಸಂಪೂರ್ಣ ಕೆಸರು ತುಂಬಿಕೊಂಡಿರುವ ಕುರಹಟ್ಟಿ ಗ್ರಾಮದ ಪ್ರಮುಖ ಚರಂಡಿ
ಸಂಪೂರ್ಣ ಕೆಸರು ತುಂಬಿಕೊಂಡಿರುವ ಕುರಹಟ್ಟಿ ಗ್ರಾಮದ ಪ್ರಮುಖ ಚರಂಡಿ   

ರೋಣ: ತಾಲ್ಲೂಕು ಕೇಂದ್ರವಾದ ರೋಣ ಪಟ್ಟಣದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಕುರಹಟ್ಟಿ ಗ್ರಾಮ ಗ್ರಾಮೀಣ ನೈರ್ಮಲ್ಯದ ಜವಾಬ್ದಾರಿ ಹೊತ್ತ ಗ್ರಾಮ ಪಂಚಾಯಿತಿಯ ದಿವ್ಯ ನಿರ್ಲಕ್ಷದಿಂದಾಗಿ ಗ್ರಾಮದ ಬಹುತೇಕ ವಠಾರಗಳು ಕೊಳೆಚೆಯ ಆಗರವಾಗಿ ಮಾರ್ಪಟ್ಟಿವೆ.

ಊರ ಮಧ್ಯದಲ್ಲಿರುವ ಚರಂಡಿಗಳು ಬಹುತೇಕ ಕೊಳಚೆಯಿಂದ ತುಂಬಿ ಹೋಗಿದ್ದು ಚರಂಡಿ ಹರಿಯುವ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆಲ್ಲ ಹರಡಿಕೊಂಡಿದ್ದು ಗ್ರಾಮದ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಚರಂಡಿಯ ಈ ಕೊಳಚೆ ನೀರನ್ನೇ ತುಳಿದುಕೊಂಡು ಗ್ರಾಮದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಊರಿನ ಪ್ರಮುಖ ಚರಂಡಿಗಳಲ್ಲಿ ಸಂಪೂರ್ಣ ಕೆಸರು ತುಂಬಿದ್ದು ಹಲವೆಡೆ ಆಪು ಸೇರಿದಂತೆ ಕಸಕಡ್ಡಿ ಬೆಳೆದು ಸಂಪೂರ್ಣ ಚರಂಡಿಗೆ ಮುಚ್ಚಿ ಹೋಗುವ ಸ್ಥಿತಿ ತಲುಪಿದ್ದರು ಸಂಬಂಧಿಸಿದ ಗ್ರಾಮ ಪಂಚಾಯಿತಿ ಮಾತ್ರ ಇವುಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಗ್ರಾಮದಲ್ಲಿ ಸಾಮೂಹಿಕ ಶೌಚಾಲಯಗಳು ಇಲ್ಲದ ಕಾರಣ ಬಯಲು ಬಹಿರ್ದೆಸೆ ಗ್ರಾಮಸ್ಥರಿಗೆ ಸಾಮಾನ್ಯವಾಗಿದ್ದು ಊರ ಮುಂದಿನ ಕೆರೆ ಹಾಗೂ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಹೋಗಿರುವ ಕೊತಬಾಳ ಒಳ ರಸ್ತೆಗಳು ಶೌಚದ ತಾಣಗಳಾಗಿದ್ದು ಶಾಲೆ ಹಾಗೂ ಊರಿನ ಆರೋಗ್ಯಯುತ ಪರಿಸರವನ್ನು ಹಾಳು ಮಾಡುತ್ತಿದೆ.

ಕುರಹಟ್ಟಿ ಗ್ರಾಮದಿಂದ ಮಾಡಲಗೇರಿ ಗ್ರಾಮಕ್ಕೆ ತೆರಳುವ ರಸ್ತೆ ಪಕ್ಕದಲ್ಲಿರುವ ಅಂಗನವಾಡಿ ಕಟ್ಟಡದಲ್ಲಿ ಗ್ರಾಮದ ಹಲವು ಪುಟ್ಟ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಟ್ಟಡದ ಮುಂಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು ಅಂಗನವಾಡಿಯ ಶೌಚಾಲಯ ಬಳಿ ಗ್ರಾಮದ ಮಹಿಳೆಯರು ಸಗಣಿಯ ಕುಳ್ಳುಗಳನ್ನು ಹಚ್ಚಿದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಇವುಗಳನ್ನು ತೆರವುಗೊಳಿಸಿ ಅಂಗನವಾಡಿಯ ಆವರಣವನ್ನು ಶುಚಿಯಾಗಿ ಇಟ್ಟುಕೊಳ್ಳುವ ಕನಿಷ್ಠ ಪ್ರಯತ್ನವನ್ನು ಮಾಡದಿರುವುದು ಖೇದಕರವಾಗಿದೆ. ಅಂಗನವಾಡಿಯ ಮುಂಭಾಗದಲ್ಲಿ ಇರುವ ಚರಂಡಿ ಕೂಡ ಸಂಪೂರ್ಣವಾಗಿ ಕಟ್ಟಿ ಹೋಗಿದ್ದು ಸೊಳ್ಳೆಗಳನ್ನು ಉತ್ಪಾದನೆ ಮಾಡುವ ತಾಣಗಳಾಗಿ ಮಾರ್ಪಾಡಾಗಿದ್ದು ಎಳೆಯ ಜೀವಗಳ ಆರೋಗ್ಯದ ಹಿತ ರಕ್ಷಣೆ ಸ್ಥಳೀಯ ಆಡಳಿತಕ್ಕೆ ಮುಖ್ಯವಾಗಿ ತೋರುತ್ತಿಲ್ಲ.

ಗ್ರಾಮದಲ್ಲಿ ಮದ್ಯದ ಅಕ್ರಮ ಮಾರಾಟ ಜೋರಾಗಿದ್ದು ಈ ಹಿಂದಿನಿಂದಲೂ ಗ್ರಾಮಸ್ಥರು ಇದಕ್ಕೆ ಕಡಿವಾಣ ಹಾಕುವಂತೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಸಾಲೆ ಹಾಗೂ ಅಂಗನವಾಡಿ ಪಕ್ಕದಲ್ಲಿಯೇ ಸಾರಾಯಿ ಮಾರಾಟ ಜೋರಾಗಿದ್ದು ಊರ ಮುಂದಿನ ಕೆರೆ ಸಾರಾಯಿ ತ್ಯಾಜ್ಯದಿಂದ ತುಂಬಿದ್ದು ಗಬ್ಬೆದ್ದು ನಾರುತ್ತಿದೆ. ತಹಶೀಲ್ದಾರ್ ಗ್ರಾಮ ವಾಸ್ತವದ ವೇಳೆ ಗ್ರಾಮದಲ್ಲಿ ಸಾರಾಯಿ ಮಾರಾಟ ತಡೆಯುವಂತೆ ಮನವಿ ಮಾಡಿದರು ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯಿತಿ ಗ್ರಾಮದಲ್ಲಿನ ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಇದರಿಂದಾಗಿ ಗ್ರಾಮದ ಪ್ರಮುಖ ವಠಾರಗಳಲ್ಲಿ ಚರಂಡಿ ನೀರು ಹರಿಯುತ್ತಿದ್ದು ಪ್ರಜ್ಞಾವಂತ ಜನ ಶಪಿಸುವಂತಾಗಿದೆ. ಗ್ರಾಮದ ಕೆರೆಯ ಅಂಗಳ ನೋಡಿದರೆ ಸಾಕು ಗ್ರಾಮದಲ್ಲಿ ಎಷ್ಟು ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತದೆ ಆದರೆ ಅಧಿಕಾರಿಗಳು ಮಾತ್ರ ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿಲ್ಲ
ಮಲ್ಲಣ್ಣ, ಗ್ರಾಮಸ್ಥರು
ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲು ಹಾಗೂ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಕ್ಷಣವೇ ಸೂಚಿಸಲಾಗುವುದು ಗ್ರಾಮದ ಕೆರೆಗೆ ಮುಂಬರುವ ಕ್ರಿಯಾ ಯೋಜನೆಯಲ್ಲಿ ತಂತಿ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು
ಚಂದ್ರಶೇಖರ ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ರೋಣ
ಗ್ರಾಮದ ಕೆರೆ ದಂಡೆಯಲ್ಲಿ ತಂದು ಸುರಿದಿರುವ ಸಾರಾಯಿ ತ್ಯಾಜ್ಯ
ಕುರಹಟ್ಟಿ ಗ್ರಾಮದ ಅಂಗನವಾಡಿ ಮುಂದಿನ ಚರಂಡಿ ಸಂಪೂರ್ಣವಾಗಿ ಕೊಳೆಚೆಯಿಂದ ಮುಚ್ಚಿ ಹೋಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.