ಗದಗ: ಬಸವಾದಿ ಶಿವಶರಣರು ಸಾರಿದ ಕಾಯಕ ದಾಸೋಹದ ಸಂದೇಶವನ್ನು ಸಾಕಾರಗೊಳಿಸುವ ಮೂಲಕ ನಿತ್ಯ ಶ್ರಮವಹಿಸಿ ದುಡಿಯುತ್ತಿರುವ ಕಾರ್ಮಿಕರ ಬದುಕು ನೆಮ್ಮದಿಯಿಂದ ಕೂಡಿರಲಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.
ನಗರದ ಕಾರ್ಮಿಕ ಕಲ್ಯಾಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಕಾರ್ಮಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ಕಾರ್ಮಿಕರ ಆದೇಶ ಪ್ರತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ, ನಿಜಸುಖಿ ಹಡಪದ ಅಪ್ಪಣ್ಣ ಅವರ ತತ್ವ ಸಂದೇಶಗಳನ್ನು ಪರಿಪಾಲಿಸಿ ಅವರ ಅನುಯಾಯಿಗಳಾಗಿರುವ ಸಮಸ್ತ ಕಾರ್ಮಿಕರ ಬದುಕು ಕಲ್ಯಾಣವಾಗಲಿ. ಕಾರ್ಮಿಕ ಕಲ್ಯಾಣ ಸಂಸ್ಥೆ ಹಿರಿಯ ಶ್ರಮಜೀವಿಗಳನ್ನು, ಕಾರ್ಮಿಕ ಮಕ್ಕಳ ಪ್ರತಿಭೆಯನ್ನು ಗೌರವಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯ. ಜತೆಗೆ ಕಾರ್ಮಿಕರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವುದು ಅಭಿನಂದನೀಯ ಎಂದರು.
ಗದಗ ಜಿಲ್ಲಾ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಹಡಪದ ಮಾತನಾಡಿ, ‘ಟ್ರಸ್ಟ್ ಹಡಪದ ಅಪ್ಪಣ್ಣನವರ ತತ್ವ ಸಂದೇಶಗಳನ್ನು ಅನುಷ್ಠಾನ ಮಾಡುವ ಜೊತೆಗೆ ಪ್ರಚಾರ, ಧರ್ಮ ಜಾಗೃತಿ ಕಾರ್ಯ ಮಾಡುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇರ್ಫಾನ್ ಡಂಬಳ ಮಾತನಾಡಿ, ‘ಕಾರ್ಮಿಕ ಕಲ್ಯಾಣ ಸಂಸ್ಥೆಯು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಜತೆಗೆ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಿಕೊಂಡು ಬಂದಿದೆ’ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕಾರ್ಮಿಕರಾದ ಬೆಳಧಡಿಯ ಶಂಕರಗೌಡ ಭರಮಗೌಡ್ರ, ಲಕ್ಕುಂಡಿಯ ಚನ್ನವೀರಗೌಡ ಪಾಟೀಲ, ನೀರಲಗಿಯ ಮೆಹಬೂಬಬೇಗ್ ಮುಲ್ಲಾ, ಮುಳಗುಂದದ ನಾಗಪ್ಪ ಭಂಗಿ ಹಾಗೂ ಮುಳಗುಂದದ ನಬೀಸಾಬ ಬೂದಿಹಾಳ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.
ಕಾರ್ಮಿಕರ ಪ್ರತಿಭಾವಂತ ಮಕ್ಕಳಾದ ಗಣೇಶ ವಂಕಲಕುಂಟಿ, ಪವಿತ್ರಾ ಹಾದಿಮನಿ, ಸನಾ ನಾಶೀರ ನರೇಗಲ್, ಪುಷ್ಪಾ ವಂಕಲಕುಂಟಿ, ಅಕ್ಕಮ್ಮ ಹಾದಿಮನಿ, ಮೂಬೀನ ಬೇಪಾರಿ ಹಾಗೂ ದಾದಾಪೀರ್ ಗುಳೇದಗುಡ್ಡ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಳಗುಂದ ಪಟ್ಟಣದ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಮ್ಮದ್ ಶಫಿ ಸಿದ್ಧಿ, ಗಣ್ಯರಾದ ಜಹಿರುದ್ಧೀನ್ ತಾಡಪತ್ರಿ, ಸರ್ಫರಾಜ ಬಬರ್ಚಿ, ಮೆಹಬೂಬಖಾನ ಪಠಾಣ, ಅಹ್ಮದ್‍ಹುಸೇನ ಖಾಜಿ, ಮೋಹನ ದೊಡಕುಂಡಿ ಇದ್ದರು.
ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ನಾಶೀರ್ ಚಿಕೇನಕೊಪ್ಪ ನಿರೂಪಿಸಿದರು. ಮೊಹ್ಮದ ಯೂಸೂಫ ಬೇಪಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.