ADVERTISEMENT

ಲಕ್ಕುಂಡಿ | ನಿಧಿ ಸಿಕ್ಕಲ್ಲಿ ಉತ್ಖನನ ಆರಂಭ: ಪ್ರಾಚ್ಯಾವಶೇಷಗಳು ಸಿಗುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 16:18 IST
Last Updated 16 ಜನವರಿ 2026, 16:18 IST
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಲಕರಣೆಗೆಳಿಗೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಉತ್ಖನನಕ್ಕೆ ಚಾಲನೆ ನೀಡಿದರು
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಲಕರಣೆಗೆಳಿಗೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಉತ್ಖನನಕ್ಕೆ ಚಾಲನೆ ನೀಡಿದರು   

ಗದಗ: ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಉತ್ಖನನ ಕಾರ್ಯ ಆರಂಭವಾಯಿತು. ಕಳೆದ ವರ್ಷ ಜೂನ್‌ನಲ್ಲಿ ಮುಖ್ಯಮಂತ್ರಿಯವರು  ಉತ್ಖನನಕ್ಕೆ ಚಾಲನೆ ನೀಡಿದ್ದರು. ಆದರೆ, ಮಳೆಗಾಲ ಕಾರಣಕ್ಕೆ ಮುಂದೂಡಲಾಗಿತ್ತು.

ರಾಜ್ಯ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಮತ್ತು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಗುರುತಿಸಿರುವ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಾಲ್ಕು ತಿಂಗ‌ಳು ಉತ್ಖನನ ನಡೆಯಲಿದೆ

‘ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದ 10X10 ಸ್ಥಳದಲ್ಲಿ ಉತ್ಖನನ ನಡೆಯಲಿದೆ. ತಗ್ಗು ಪ್ರದೇಶದ ಮಣ್ಣನ್ನು ತೆರವುಗೊಳಿಸಿದ್ದಲ್ಲಿ, ದೇವಸ್ಥಾನದ ತಳಪಾಯ ಗೊತ್ತಾಗಲಿದೆ. ನಂತರದ ಹಂತದಲ್ಲಿ ಸೂಕ್ಷ್ಮ ರೀತಿ ಉತ್ಖನನ ನಡೆಯಲಿದೆ. ದೇವಸ್ಥಾನದ ಕುರುಹು, ಶಿಲ್ಪಕಲಾಕೃತಿಗಳು ಸಿಗುವ ನಿರೀಕ್ಷೆ ಇದೆ’ ಎಂದು ಉತ್ಖನನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಬಳಿಕ ತಿಳಿಸಿದರು.

ADVERTISEMENT

‘ಲಕ್ಕುಂಡಿಯ ಇತಿಹಾಸವನ್ನು 11ನೇ ಶತಮಾನಕ್ಕೆ ಸೀಮಿತಗೊಳಿಸಲಾಗದು. ಈಚೆಗೆ ರಿತ್ತಿ ಕುಟುಂಬಕ್ಕೆ ನಿಧಿ ಸಿಕ್ಕಿದ್ದು ಕಾಕತಾಳೀಯ. ಭೂಮಿಯಲ್ಲಿ ನಿಧಿಯಿದ್ದರೆ, ಉತ್ಖನನ ವೇಳೆ ಸಿಗಲೆಂದು ಪ್ರಾರ್ಥಿಸುವೆ’ ಎಂದು ಹೇಳಿದರು. 

ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ‘ಭಾರತ ಪುರಾತತ್ವ ಇಲಾಖೆಯು 33X33 ಜಾಗದಲ್ಲಿ ಉತ್ಖನನಕ್ಕೆ ಅನುಮತಿ ನೀಡಿದೆ. ನಾಲ್ಕು ಭಾಗವಾಗಿ 10 ರಿಂದ 12 ಅಡಿ ಆಳದಲ್ಲಿ ಉತ್ಖನನ ನಡೆಸಲಾಗುವುದು’ ಎಂದು ಹೇಳಿದರು.

ಲಕ್ಕುಂಡಿ ಗ್ರಾಮ ಸ್ಥಳಾಂತರ ವಿಷಯ ಉತ್ಖನನದಲ್ಲಿ ಸಿಗುವ ‍ಪ್ರಾಚ್ಯಾವಶೇಷಗಳ ಮಹತ್ವವನ್ನು ಆಧರಿಸಿ ನಿರ್ಧಾರವಾಗಲಿದೆ. ಆಗ ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು
–ಸಿ.ಎನ್‌.ಶ್ರೀಧರ್ ಜಿಲ್ಲಾಧಿಕಾರಿ
ಈಗ ಆರಂಭಿಸಿರುವ ಉತ್ಖನನದ ಸ್ಥಳ ಪ್ರಜ್ವಲ್‌ ರಿತ್ತಿಗೆ ನಿಧಿ ಸಿಕ್ಕ ಜಾಗದಿಂದ 200 ಮೀಟರ್‌ ದೂರಲ್ಲಿದೆ. ಟಂಕಸಾಲೆ ಇದ್ದ ಜಾಗದಿಂದ 60 ಮೀಟರ್‌ ದೂರದಲ್ಲಿದೆ. ಹಾಗಾಗಿ ಈ ಉತ್ಖನನ ಹೆಚ್ಚು ಮಹತ್ವ ಪಡೆದಿದೆ.
ಶರಣು ಗೋಗೇರಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.