ಲಕ್ಕುಂಡಿಯಲ್ಲಿ ದೊರೆತ ಚಿನ್ನಾಭರಣ
ಗದಗ: ‘ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಅವರು ಮನೆ ಕಟ್ಟಿಸಲು ಅಡಿಪಾಯ ತೆಗೆಯುವಾಗ ಸಿಕ್ಕಿದ್ದು ನಿಧಿಯಲ್ಲ. ಅವು ಹಿಂದಿನ ಕಾಲದಲ್ಲಿ ಜನರು ಸುರಕ್ಷತೆ ದೃಷ್ಟಿಯಿಂದ ಅಡುಗೆ ಮನೆಯಲ್ಲಿ ಹುಗಿದು ಇಟ್ಟಿದ್ದ ಆಭರಣಗಳಾಗಿವೆ’ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದರು.
ಇಲಾಖೆಯ ಧಾರವಾಡ ವಲಯದ ಅಧೀಕ್ಷಕ ರಮೇಶ್ ಮೂಲಿಮನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಚಿನ್ನದ ನಾಣ್ಯಗಳು ಸಿಕ್ಕಿದ್ದರೆ ಇತಿಹಾಸ ತಿಳಿಯಲು ಆಧಾರವಾಗುತ್ತಿತ್ತು. ಆದರೆ, ಶನಿವಾರ ಸಿಕ್ಕ ತಾಮ್ರದ ತಂಬಿಗೆಯಲ್ಲಿದ್ದ ಚಿನ್ನಾಭರಣಗಳು ಮುರಿದಿವೆ. ಹಿಂದೆ ಅಜ್ಜ, ಮುತ್ತಜ್ಜರು ಸುರಕ್ಷತೆ ದೃಷ್ಟಿಯಿಂದ ಒಲೆ ಬಳಿ ಆಭರಣಗಳನ್ನು ಹುಗಿದು ಇಡುತ್ತಿದ್ದರು. ಇವು ಅಂತಹದ್ದೇ ಆಭರಣಗಳೇ ಹೊರತು ನಿಧಿ ಅಲ್ಲ’ ಎಂದರು.
ಅಡಿಪಾಯ ತೆಗೆಯುವ ವೇಳೆ ಸಿಕ್ಕ ಚಿನ್ನಾಭರಣಗಳು ಈಗ ಜಿಲ್ಲಾಡಳಿತದ ಸುಪರ್ದಿಯಲ್ಲಿದೆ. ಆ ಜಾಗದಲ್ಲಿ ಇನ್ನೂ ಹೆಚ್ಚಿನದ್ದು ಏನಾದರೂ ಸಿಗಬಹುದು ಎಂದು ಜಿಲ್ಲಾಡಳಿತ ಜನರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
‘ಪ್ರಾಮಾಣಿಕವಾಗಿ ಆಭರಣ ಹಿಂದಿರುಗಿಸಿದ್ದಕ್ಕೆ ಜಿಲ್ಲಾಡಳಿತ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದೆ. ನಮಗೆ ಚಿನ್ನ ಬೇಡ. ಸರ್ಕಾರ ಮನೆ ಕಟ್ಟಿಸಿಕೊಡತಗ. ಅದು ಆಗದಿದ್ದರೆ ನಿಧಿ ಅಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳ ಮಾತಿನಂತೆ ಅಜ್ಜ, ಮುತ್ತಜ್ಜರ ಆಭರಣವನ್ನು ಕೊಡಲಿ’ ಎಂದು ಕುಟುಂಬದವರು ಕೋರಿದ್ದಾರೆ.
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನಾಭರಣಗಳ ಮಾಹಿತಿಯನ್ನು ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರಿಗೆ ನೀಡಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ಜಿಲ್ಲಾ ಎಸ್‌ಪಿ ರೋಹನ್ ಜಗದೀಶ್ ಅವರಿಂದ ಮಾಹಿತಿ ಪಡೆದುಕೊಂಡು, ‘ಸಿಕ್ಕಿರುವ ಆಭರಣಗಳನ್ನು ತೆಗೆದಿರಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಬಂದ ಮೇಲೆ ತೋರಿಸಿ’ ಎಂದು ಸೂಚನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.