
ಗದಗ: ‘ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವೆ’ ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಮಾತನಾಡಿದರು.
‘ಪ್ರಾಚೀನ ಸ್ಮಾರಕಗಳ ಬಗ್ಗೆ ನನಗೆ ವಿಶೇಷ ಆಸಕ್ತಿ ಇದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲಿನಂತೆ ಲಕ್ಕುಂಡಿ ಕೂಡ ಅದ್ಭುತ ಇತಿಹಾಸ ಹೊಂದಿದೆ. ಅದನ್ನು ಜಗತ್ತಿಗೆ ಪರಿಚಯಿಸಲು ಏನೇನು ಪ್ರಯತ್ನಗಳು ಆಗಬೇಕಿದೆಯೋ ಅದನ್ನು ಕೇಂದ್ರ ಸರ್ಕಾರದ ಮೂಲಕ ಮಾಡಲು ನೆರವಾಗುವೆ’ ಎಂದು ತಿಳಿಸಿದರು.
‘ಸಚಿವ ಎಚ್.ಕೆ.ಪಾಟೀಲ ಅವರು ವಿಶೇಷ ಮುತುವರ್ಜಿ ವಹಿಸಿ ಲಕ್ಕುಂಡಿ ಗತ ವೈಭವದ ಮರು ಅನ್ವೇಷಣೆಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರಂತೆ ಇಲ್ಲಿ ಉತ್ಖನನ ಕೆಲಸ ವೈಜ್ಞಾನಿಕವಾಗಿ ನಡೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಲಕ್ಕುಂಡಿಗೆ ಐತಿಹಾಸಿಕ ಮಹತ್ವ ಇದೆ. ನಾಲ್ಕು ರಾಜಮನೆತನಗಳು ಆಳ್ವಿಕೆ ನಡೆಸಿವೆ. ಹಿಂದೆ ಇದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಚಿನ್ನದ ಗದ್ಯಾಣಗಳನ್ನು ಟಂಕಿಸುವ ಟಂಕಸಾಲೆ ಇತ್ತು. 101 ದೇವಸ್ಥಾನ, 101 ಬಾವಿಗಳ ಉಲ್ಲೇಖವೂ ಇದೆ. ಲಕ್ಕುಂಡಿಯ ವೈಭವಯುತ ಇತಿಹಾಸಕ್ಕೆ ಮೆರುಗು ಬರಬೇಕಾದರೆ ಉತ್ಖನನ ಕಾರ್ಯ ಅವಶ್ಯಕವಾಗಿ ನಡೆಯಬೇಕಿದೆ. ಲಕ್ಕುಂಡಿಯಲ್ಲಿ ನಡೆದಿರುವ ಉತ್ಖನನದಿಂದ ದೊರೆಯುವ ಪ್ರಾಚ್ಯ ಅವಶೇಷಗಳಿಂದ ಇಲ್ಲಿನ ಶ್ರೀಮಂತಿಕೆ ಜಗತ್ತಿಗೆ ಗೊತ್ತಾಗಲಿದೆ’ ಎಂದರು.
ಪ್ರಾಚೀನ ಸ್ಮಾರಕಗಳು ಇರುವ ಸ್ಥಳದಲ್ಲಿ ನಿಧಿ ಇರುತ್ತದೆ. ಇಂತಹ ಜಾಗದಲ್ಲಿ ಕೆಲವರು ಕಳ್ಳತನದಿಂದ ನಿಧಿ ಹುಡುಕುತ್ತಾರೆ. ಆದರೆ, ಪ್ರಜ್ವಲ್ ರಿತ್ತಿ ಕುಟುಂಬದವರು ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದರು.
‘ಸರ್ಕಾರ ಈಗಾಗಲೇ ಅವರಿಗೆ ನಿವೇಶನ, ₹5 ಲಕ್ಷ ನಗದು ಘೋಷಣೆ ಮಾಡಿದೆ. ನಾನೂ ಕೂಡ ಈ ಕುಟುಂಬಕ್ಕೆ ವೈಯಕ್ತಿಕ ಸಹಾಯ ಮಾಡುವೆ’ ಎಂದು ಭರವಸೆ ನೀಡಿದರು.
ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್ ಮೂಲಿಮನಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಇದ್ದರು.
ಕೇಂದ್ರ ಪುರಾತತ್ವ ಇಲಾಖೆ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ಲಕ್ಕುಂಡಿ ಅಭಿವೃದ್ಧಿ ಕುರಿತು ಚರ್ಚೆ ಮಾಡಲಾಗಿದೆ. ಲಕ್ಕುಂಡಿ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರುವ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲವಿದೆಪಿ.ಸಿ.ಗದ್ದಿಗೌಡರ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.