
ಲಕ್ಷ್ಮೇಶ್ವರ: ತಾಲ್ಲೂಕಿನಲ್ಲಿ ಮರಳು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು ಇದರಿಂದಾಗಿ ಮರಳನ್ನೇ ನಂಬಿರುವ ಕಟ್ಟಡ ಕಾರ್ಮಿಕರಿಗೆ ಕೆಲಸ ಸಿಗದೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.
ತಾಲ್ಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ನೂರಾರು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಆದರೆ ಸರಿಯಾದ ಸಮಯಕ್ಕೆ ಮರಳು ಸಿಗುತ್ತಿಲ್ಲ. ಈ ಕಾರಣಕ್ಕಾಗಿ ಕಟ್ಟಡಗಳ ಮಾಲೀಕರು ಕಂಗಾಲಾಗಿದ್ದಾರೆ. ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದು ಇದು ಕಟ್ಟಡ ಕಾರ್ಮಿಕರ ದಿನದ ಅನ್ನಕ್ಕೆ ಕೊಕ್ಕೆ ಹಾಕಿದೆ.
ಕಟ್ಟಡ ನಿರ್ಮಾಣಕ್ಕೆ ಮರಳು ಅವಶ್ಯಕ. ಪ್ರತಿದಿನ ನೂರಾರು ಟ್ರಿಪ್ ಮರಳು ಲಕ್ಷ್ಮೇಶ್ವರಕ್ಕೆ ಅಗತ್ಯ ಇದೆ. ಆದರೆ, ಮರಳು ಪೂರೈಕೆ ಮಾತ್ರ ಆಗುತ್ತಿಲ್ಲ. ಕಟ್ಟಡ ಕಟ್ಟಲು ತಾಲ್ಲೂಕಿನಲ್ಲಿ ಹರಿದಿರುವ ಹಳ್ಳ ಹಾಗೂ ತುಂಗಭದ್ರಾ ನದಿ ಮರಳು ಪೂರೈಕೆ ಆಗುತ್ತಿತ್ತು. ಆದರೆ ಕಾನೂನಿನ ಬಿಗಿ ಕ್ರಮದಿಂದಾಗಿ ಮರಳು ಪೂರೈಕೆಯಲ್ಲಿ ಸಾಕಷ್ಟು ಕೊರತೆ ಉಂಟಾಗಿದ್ದು ಇದು ಮರಳಿನ ಬೆಲೆ ಹೆಚ್ಚಾಗಲು ಪರೋಕ್ಷವಾಗಿ ಕಾರಣವಾಗಿದೆ.
ಈ ಮೊದಲು ₹3,000-₹4,500ಕ್ಕೆ ಒಂದು ಟ್ರ್ಯಾಕ್ಟರ್ ಮರಳು ಸಿಗುತ್ತಿತ್ತು. ಆದರೆ, ಎರಡು ತಿಂಗಳಿಂದ ಬೆಲೆ ₹5,000ರಿಂದ ₹6,000ಕ್ಕೆ ಏರಿದೆ. ಇದು ಕಟ್ಟಡ ಮಾಲೀಕರಿಗೆ ದೊಡ್ಡ ಹೊರೆಯಾಗಿದೆ. ಅದೂ ಸಹ ಕದ್ದುಮುಚ್ಚಿ ಮರಳು ಸಾಗಿಸುವವರು ಈ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಇನ್ನು ತಾಲ್ಲೂಕಿನಲ್ಲಿ ಎಂ.ಸ್ಯಾಂಡ್ ಪೂರೈಕೆ ಇದೆ. ಆದರೆ ಇದು ಎಲ್ಲ ಕೆಲಸಕ್ಕೆ ಬಳಕೆಗೆ ಸೂಕ್ತ ಅಲ್ಲ ಎಂದು ಹೇಳಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಮಾತ್ರ ಎಂ.ಸ್ಯಾಂಡ್ ಸೂಕ್ತ. ಆದರೆ ಪ್ಲಾಸ್ಟರಿಂಗ್ ಮಾಡಲು ನದಿ ಪಾತ್ರದ ಮರಳು ಹೆಚ್ಚು ಸೂಕ್ತ ಎಂದು ಕಟ್ಟಡ ನಿರ್ಮಣದ ಮೇಸ್ತ್ರಿಗಳು ಹೇಳುವ ಮಾತು. ಹೀಗಾಗಿ ಹಳ್ಳ ಮತ್ತು ನದಿ ಮರಳಿಗೆ ಬೇಡಿಕೆ ಇದೆ. ಆದರೆ ಕಾನೂನಿನ ತೊಡಕಿನಿಂದಾಗಿ ಮರಳು ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ.
ಮರಳು ಪೂರೈಕೆಯಲ್ಲಿ ಕೊರತೆ ಆದ ಪರಿಣಾಮ ಮಾಲೀಕರು ಕೆಲಸ ಬಂದ್ ಇಟ್ಟಿದ್ದಾರೆ. ಹೀಗಾಗಿ ಎಲ್ಲ ಕಾರ್ಮಿರಿಗೆ ಕೆಲಸ ಸಿಗುತ್ತಿಲ್ಲ. ಕಾರಣ ಅವರು ಕೆಲಸ ಹುಡುಕಿಕೊಂಡು ಬೇರೆ ಬೇರೆ ರಾಜ್ಯ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ.
‘ಸರಿಯಾಗಿ ಉಸುಕು ಪೂರೈಕೆ ಆಗದ ಕಾರಣ ಗೌಂಡಿ ಕೆಲಸ ಬಂದ್ ಆಗಿವೆ. ಕೆಲಸ ಸಿಗದೆ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ಉದ್ಯೋಗವನ್ನೇ ನಂಬಿ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ವಾರ ಬಂತೆಂದರೆ ಸಾಲದ ಕಂತು ಕಟ್ಟಬೇಕು. ಆದರೆ ಕೆಲಸ ಬಂದ್ ಆಗಿರುವುದರಿಂದ ಸಾಲದ ಕಂತು ಕಟ್ಟಲು ತೊಂದರೆ ಆಗಿದೆ. ಇನ್ನು ಕೆಲ ಕಾರ್ಮಿಕರು ಕೆಲಸ ಹುಡುಕಿಕೊಂಡು ಊರು ಬಿಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಸಾಯಬೇಕಾಗುತ್ತದೆ’ ಎಂದು ಕಟ್ಟಡ ಕಟ್ಟುವ ಮೇಸ್ತ್ರಿ ತಿರಕಪ್ಪ ಯಲಗಚ್ಚಿನ ವಾಸ್ತವ ಬಿಚ್ಚಿಟ್ಟರು.
ಮರಳು ಪೂರೈಸುವವರು ಕಾನೂನಿನ ಪ್ರಕಾರ ಅಧಿಕೃತ ಪರವಾನಗಿ ಪಡೆದುಕೊಂಡು ಪೂರೈಸಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹೆಚ್ಚಿನ ಲಾಭದಾಸೆಗಾಗಿ ಕದ್ದು ಮುಚ್ಚಿ ಪೂರೈಸಬಾರದುನಾಗರಾಜ ಗಡದ, ಪಿಎಸ್‍ಐ, ಲಕ್ಷ್ಮೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.