ಲಕ್ಷ್ಮೇಶ್ವರ: ಅಂತರ್ಜಲ ಹೆಚ್ಚಾಗಿ ರೈತರಿಗೆ ಉಪಯೋಗ ಆಗಲಿ ಎಂಬ ಉದ್ಧೇಶದಿಂದ ತಾಲ್ಲೂಕಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹತ್ತಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಆದರೆ ಇದೀಗ ಎಲ್ಲ ಚೆಕ್ ಡ್ಯಾಂಗಳ ಒಡಲು ಹೂಳಿನಿಂದ ಭರ್ತಿ ಆಗುವುದರೊಂದಿಗೆ ಅಂದಾಜು ಹತ್ತು ಹನ್ನೆರಡು ಅಡಿ ಎತ್ತರಕ್ಕೆ ಆಪು (ಕಸದ ಗಿಡ) ಚೆಕ್ ಡ್ಯಾಂಗಳಲ್ಲಿ ಬೆಳೆದಿದೆ. ಇದರಿಂದಾಗಿ ಮಳೆಗಾಲದಲ್ಲಿ ಹನಿ ನೀರು ನಿಲ್ಲದ ಪರಿಸ್ಥಿತಿ ಉದ್ಭವಿಸಿದೆ.
ಸಣ್ಣ ನೀರಾವರಿ ಇಲಾಖೆ ವತಿಯಿಂದ ತಾಲ್ಲೂಕಿನ ಮಾಗಡಿ ಗ್ರಾಮದ ಹತ್ತಿರ ಹರಿದಿರುವ ದೊಡ್ಡ ಹಳ್ಳಕ್ಕೆ ಒಟ್ಟು 18 ಕಡೆ ಸಿರೀಜ್ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈ ಹಳ್ಳ ಮಾಗಡಿಯಿಂದ ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು, ಪುಟಗಾಂವ್‍ಬಡ್ನಿ, ಹುಲ್ಲೂರು, ಬೂದಿಹಾಳ ಮೂಲಕ ಶಿರಹಟ್ಟಿ ತಾಲ್ಲೂಕಿನ ತಂಗೋಡದವರೆಗೆ ಹರಿದು ಮುಂದೆ ತುಂಗಭದ್ರಾ ನದಿ ಸೇರುತ್ತದೆ.
ಮಳೆಗಾಲದಲ್ಲಿ ಕುಂದಗೋಳ, ಗದಗ ತಾಲ್ಲೂಕಿನ ಕಡೆಯಿಂದ ಸಾಕಷ್ಟು ಪ್ರಮಾಣದ ನೀರು ಈ ಹಳ್ಳದ ಮೂಲಕ ಹರಿಯುತ್ತದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಾರೆ. ನೀರು ನಿಂತು ಬೇಸಿಗೆಯಲ್ಲಿ ರೈತರಿಗೆ ಅನುಕೂಲ ಆಗಬೇಕಾಗಿದ್ದ ಚೆಕ್ ಡ್ಯಾಂಗಳಲ್ಲಿ ಸದ್ಯ ಹೂಳು ತುಂಬಿರುವುದು ಮತ್ತು ಆಪು ಬೆಳೆದಿರುವುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಒಂದು ವೇಳೆ ಹೂಳು ಮತ್ತು ಆಪು ಕಸವನ್ನು ತೆಗೆಯದಿದ್ದರೆ ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲುವುದು ಕನಸಿನ ಮಾತು ಎಂದು ಗ್ರಾಮಸ್ಥರು ಹೇಳುತ್ತಾರೆ.
ನೀರೇ ನಿಲ್ಲದಿದ್ದರೆ ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನ ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಚೆಕ್ ಡ್ಯಾಂಗಳಲ್ಲಿನ ಹೂಳು ಮತ್ತು ಆಪು ತೆರವುಗೊಳಿಸಿದರೆ ನೀರು ನಿಂತು ಸಂಜೀವಿನ ರೂಪದಲ್ಲಿ ರೈತರಿಗೆ ವರದಾನ ಆಗಲಿದೆ. ಆದರೆ ಹೂಳು ತೆಗೆಯುವುದಕ್ಕೆ ಸಣ್ಣ ನೀರಾವರಿ ಇಲಾಖೆಯಲ್ಲಿ ಅವಕಾಶ ಇಲ್ಲ ಎನ್ನಲಾಗುತ್ತಿದೆ. ಆದರೆ ನರೇಗಾ ಯೋಜನೆಯಡಿ ಹೂಳು ತೆಗೆಯಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ಇದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳ ಆಡಳಿತ ಮಂಡಳಿ ಮುತುವರ್ಜಿ ವಹಿಸಿದರೆ ಚೆಕ್ ಡ್ಯಾಂಗಳಲ್ಲಿನ ಹೂಳು ತೆಗೆಯಲು ಸಾಧ್ಯ ಎಂದು ಹೇಳಿದ್ದಾರೆ.
‘ನರೇಗಾ ಯೋಜನೆಯಡಿ ಸಿರೀಜ್ ಚೆಕ್ ಡ್ಯಾಂ ಸೇರಿದಂತೆ ಇನ್ನಿತರ ಚೆಕ್ ಡ್ಯಾಂಗಳಲ್ಲಿನ ಹೂಳು ಮತ್ತು ಆಪು ಕಸ ತೆಗೆಯಲು ಅವಕಾಶ ಇದೆ. ಈ ಕುರಿತು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು’ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ತಿಳಿಸಿದ್ದಾರೆ.
ಚೆಕ್ ಡ್ಯಾಂಗಳಲ್ಲಿನ ಹೂಳು ಮತ್ತು ಆಪು ಕಸವನ್ನು ಮಳೆಗಾಲ ಬರುವುದರೊಳಗಾಗಿ ತೆಗೆಯಬೇಕು. ಅಂದರೆ ಅವುಗಳಿಂದ ರೈತರಿಗೆ ಅನುಕೂಲ ಆಗಲಿದೆಪರಶುರಾಮ ಇಮ್ಮಡಿ ಬಟ್ಟೂರು ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.