ಗಜೇಂದ್ರಗಡ: ‘ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ತ್ವರಿತವಾಗಿ ಸಾಗುವಳಿ ಚೀಟಿ ಮತ್ತು ಹಕ್ಕು ಪತ್ರ ನೀಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎಂ.ಎಸ್. ಹಡಪದ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಸೋಮವಾರ ನಡೆದ ಅನಿರ್ದಿಷ್ಟವಧಿ ಧರಣಿಯಲ್ಲಿ ಅವರು ಮಾತನಾಡಿದರು.
‘ಖಾಸಗಿ ಕಂಪನಿ ಹಾಗೂ ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಸರ್ಕಾರ, ರೈತರಿಗೆ ಸಾಗುವಳಿ ಹಕ್ಕುಪತ್ರ ನೀಡದಿರುವುದು ಖಂಡನೀಯ’ ಎಂದರು.
ಕರ್ನಾಟಕ ಕೃಷಿಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲು ರಾಠೋಡ ಮಾತನಾಡಿದರು. ಈ ವೇಳೆ ಮುಖಂಡರಾದ ರೂಪೇಶ ಮಾಳೋತ್ತರ, ಪೀರು ರಾಠೋಡ, ಚೆನ್ನಪ್ಪ ಗುಗಲೋತ್ತರ, ದಾವಲಸಾಬ ತಾಳಿಕೋಟಿ, ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ಗಣೇಶ ರಾಠೋಡ, ಅನಿಲ್ ರಾಠೋಡ, ರತ್ನವ್ವ ಮಾಳೋತ್ತರ, ವೀರಭದ್ರಪ್ಪ ಮಾಳೋತ್ತರ, ತಿರುಪತಿ ರಾಠೋಡ, ಅಂದಪ್ಪ ರಾಠೋಡ ಇದ್ದರು.
ಮಂಗಳವಾರವೂ ಮುಂದುವರೆದ ಧರಣಿ
ಬಗರ್ ಹುಕುಂ ಸಾಗುವಳಿದಾರರ ಸಾಗುವಳಿ ಹಾಗೂ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಸೋವಾರದಿಂದ ನಡೆಯುತ್ತಿರುವ ಧರಣಿ ಮಂಗಳವಾರವೂ ಮುಂದುವರೆಯಿತು.
ಕಾರ್ಮಿಕ ಮುಖಂಡ ಪೀರು ರಾಠೋಡ ಮಾತನಾಡಿ, ‘ರೈತರಿಗೆ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಸಹ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಕಾನೂನು ತೊಡಕುಗಳಿವೆ ಎಂದು ಉತ್ತರ ನೀಡಿ ರೈತರಿಗೆ ಹಕ್ಕುಪತ್ರ ನೀಡದ ಕಾರಣ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಂಡಿದೆ. ಸರ್ಕಾರ ಹಕ್ಕುಪತ್ರ ನೀಡದಿದ್ದಲ್ಲಿ ಶಾಸಕರ ಮನೆವರೆಗೂ ಪಾದಯಾತ್ರೆ ಮೂಲಕ ನಡೆಸುತ್ತೇವೆ’ ಎಂದರು.
ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಬಾಲು ರಾಠೋಡ, ದಲಿತ ಮುಖಂಡ ಉಮೇಶ ರಾಠೋಡ ಮಾತನಾಡಿದರು.
ಈ ವೇಳೆ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ, ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ, ರೈತರಾದ ವೀರಭದ್ರಪ್ಪ ಮಾಳೋತ್ತರ, ತಿರುಪತಿ ರಾಠೋಡ, ಅಂದಪ್ಪ ರಾಠೋಡ, ಯಂಕಪ್ಪ ಮಾಳೋತ್ತರ, ಶಿವಪ್ಪ ಮಾಳೋತ್ತರ, ದೀಪಲೆಪ್ಪ ಮಾಳೋತ್ತರ, ಬದ್ಯಪ್ಪ ಮಾಳೋತ್ತರ, ರೇಣವ್ವ ಗೂಗಲೋತ್ತರ, ಪಾರವ್ವ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.