
ಲಕ್ಷ್ಮೇಶ್ವರ: ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಲಕ್ಷ್ಮೇಶ್ವರ ಪಾತ್ರವಾಗಿದೆ. ಆದರೆ, ಪಟ್ಟಣ ಬೆಳೆದಷ್ಟೇ ವೇಗದಲ್ಲಿ ಮೂಲಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ತಾಲ್ಲೂಕಿನ ಜನರು ತೊಂದರೆ ಅನುಭವಿಸುವಂತಾಗಿದೆ.
ಲಕ್ಷ್ಮೇಶ್ವರ ತಾಲ್ಲೂಕು ಕೇಂದ್ರವಾಗಿ ಏಳು ವರ್ಷಳಾಗಿದೆ. ಆದರೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಹಾಗೂ ಉಪ ನೋಂದಣಿ ಕಚೇರಿಗಳನ್ನು ಹೊರತುಪಡಿಸಿದರೆ ಇತರೆ ಇಲಾಖೆಗಳ ಕಚೇರಿಗಳು ಇನ್ನೂ ಆರಂಭವಾಗಿಲ್ಲ. ಹೀಗಾಗಿ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕಿನ ಜನತೆ ಶಿರಹಟ್ಟಿಗೆ ಹೋಗುವುದು ತಪ್ಪಿಲ್ಲ.
ಲಕ್ಷ್ಮೇಶ್ವರ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಗೋವನಾಳ, ಹುಬ್ಬಳ್ಳಿ, ಶಿಗ್ಲಿ ಈ ಮೂರು ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಅದರಲ್ಲೂ ಶಿಗ್ಲಿ-ಗೋವನಾಳ ರಸ್ತೆ ಸ್ಥಿತಿಯಂತೂ ಅಯೋಮಯವಾಗಿದೆ. ಐದಾರು ವರ್ಷಗಳಿಂದ ಎರಡೂ ಗ್ರಾಮಗಳ ನಡುವೆ ಬಸ್ ಸಂಚಾರ ಕೂಡ ಬಂದ್ ಆಗಿದೆ.
ಹಾಗೆಯೇ ಸೂರಣಗಿ-ಬಾಲೆಹೊಸೂರು ರಸ್ತೆಯದ್ದೂ ಇದೇ ಪರಿಸ್ಥಿತಿ. ಈ ರಸ್ತೆಯಲ್ಲಿ ಹೆಜ್ಜೆ ಹಜ್ಜೆಗೂ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿದ್ದು ಮಳೆಗಾಲದಲ್ಲಿ ರಸ್ತೆ ಹಳ್ಳವಾಗುತ್ತದೆ. ಇನ್ನು ಲಕ್ಷ್ಮೇಶ್ವರ-ಮಾಗಡಿ ರಸ್ತೆ ಕೂಡ ತೆಗ್ಗುಗಳಿಂದ ಕೂಡಿದೆ.
ಲಕ್ಷ್ಮೇಶ್ವರ-ಅಡರಕಟ್ಟಿ-ಪುಟಗಾಂವ್‍ಬಡ್ನಿ-ಆದರಹಳ್ಳಿ, ಯಳವತ್ತಿ-ಮಾಡಳ್ಳಿ, ಯತ್ನಳ್ಳಿ-ಲಕ್ಷ್ಮೇಶ್ವರ, ಲಕ್ಷ್ಮೇಶ್ವರ-ಒಡೆಯರಮಲ್ಲಾಪುರ, ಲಕ್ಷ್ಮೇಶ್ವರ-ದುಂಡಿಬಸವೇಶ್ವರ, ಬಟ್ಟೂರು-ಶೆಟ್ಟಿಕೇರಿ, ಹುಲ್ಲೂರು-ಸೂರಣಗಿ ಕ್ರಾಸ್, ಶಿಗ್ಲಿ-ಹೂವಿನಶಿಗ್ಲಿ ರಸ್ತೆ ಹೀಗೆ ಇನ್ನೂ ಪ್ರಮುಖ ರಸ್ತೆಗಳೆಲ್ಲ ಹದಗೆಟ್ಟಿವೆ.
ಊರು ಬೆಳೆದಂತೆ ಅದಕ್ಕೆ ತಕ್ಕಂತೆ ಪೌರಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಬೇಕು. ಆದರೆ ಸದ್ಯ ಇರುವ ಕಾರ್ಮಿಕರಿಂದ ಊರನ್ನು ಸ್ವಚ್ಛವಾಗಿ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣುತ್ತಿದೆ.
ಲಕ್ಷ್ಮೇಶ್ವರ ತಾಲ್ಲೂಕು ಮೂಲ ಸೌಲಭ್ಯಗಳಿಂದ ನರಳುತ್ತಿದೆ. ಹೊಸ ತಾಲ್ಲೂಕಿಗೆ ಬರಬೇಕಾದ ಕಚೇರಿಗಳು ಬೇಗನೇ ಆರಂಭವಾದರೆ ಜನತೆಗೆ ಅನುಕೂಲವಾಗಲಿದೆ–ಬಿ.ಎಸ್. ಬಾಳೇಶ್ವರಮಠ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.