ADVERTISEMENT

ಲಕ್ಷ್ಮೇಶ್ವರ | ಖರೀದಿ ಕೇಂದ್ರ ಆರಂಭ: ರೈತ ಹೋರಾಟಕ್ಕೆ ಸಂದ ಜಯ

ನಾಗರಾಜ ಎಸ್‌.ಹಣಗಿ
Published 3 ಡಿಸೆಂಬರ್ 2025, 5:33 IST
Last Updated 3 ಡಿಸೆಂಬರ್ 2025, 5:33 IST
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಲಕ್ಷ್ಮೇಶ್ವರದಲ್ಲಿ ರೈತರು ಹೋರಾಟದ ವೇದಿಕೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋಮ ನಡೆಸಿದ್ದರು
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಲಕ್ಷ್ಮೇಶ್ವರದಲ್ಲಿ ರೈತರು ಹೋರಾಟದ ವೇದಿಕೆಯಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋಮ ನಡೆಸಿದ್ದರು   

ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ತಾಲ್ಲೂಕಿನ ಸಮಗ್ರ ರೈತಪರ ಹೋರಾಟ ವೇದಿಕೆಯಡಿ ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕಿನ ರೈತರು ಇಲ್ಲಿನ ಶಿಗ್ಲಿ ಕ್ರಾಸ್‍ನಲ್ಲಿ ಬರೋಬ್ಬರಿ ಹದಿನೇಳು ದಿನಗಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿ ಯಶಸ್ಸು ಕಂಡಿದ್ದಾರೆ. ಇಷ್ಟು ದೀರ್ಘವಾದ ಹೋರಾಟ ಈ ಭಾಗದಲ್ಲಿ ಹಿಂದೆ ನಡೆದಿರಲಿಲ್ಲ.

ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ರವಿಕಾಂತ ಅಂಗಡಿ, ಟಾಕಪ್ಪ ಸಾತಪುತೆ, ಚನ್ನಪ್ಪ ಷಣ್ಮುಖಿ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ ಒಳಗೊಂಡಂತೆ ಇನ್ನೂ ನೂರಾರು ರೈತ ಮುಖಂಡರು ಹಾಗೂ ರೈತರಿಂದ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಯಿತು. ಅದರಲ್ಲೂ ಆದಹರಳ್ಳಿ ಗವಿಮಠದ ಕುಮಾರ ಮಹಾರಾಜರಂತೂ ಆಮರಣಾಂತ ಉಪವಾಸವನ್ನೇ ಕೈಗೊಂಡಿದ್ದರು.

ನಿರಂತರ ಉಪವಾಸದಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ಪಡೆದ ಎರಡು ದಿನಗಳ ನಂತರ ಮತ್ತೆ ಮಹಾರಾಜರು ಹೋರಾಟದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

ADVERTISEMENT

ಹೋರಾಟಗಾರರು ಹಗಲು ಹೊತ್ತಿನಲ್ಲಿ ಪಾಳಾ-ಬದಾಮಿ ರಾಜ್ಯ ಹೆದ್ದಾರಿ ತಡೆದು ಕೆಲ ಹೊತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮತ್ತೆ ವೇದಿಕೆಗೆ ಬರುತ್ತಿದ್ದರು. ನಂತರ ಇಡೀ ರಾತ್ರಿ ಭಜನೆ ಮಾಡುತ್ತಿದ್ದರು. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರೈತರು ಹೋರಾಟ ನಡೆಸಿದ್ದರು.

ಸರ್ಕಾರ ಮತ್ತು ಜಿಲ್ಲಾಡಳಿತದ ಗಮನ ಸೆಳೆಯುವ ನಿಟ್ಟಿನಲ್ಲಿ ವೇದಿಕೆಯಲ್ಲೇ ಹೋಮ ನಡೆಸಿದ್ದರು. ರಸ್ತೆಯಲ್ಲಿ ಬುತ್ತಿ ಊಟ ಮಾಡಿದ್ದರು. ಅಲ್ಲದೆ ಬಾರುಕೋಲು ಚಳವಳಿ, ಅರೆಬೆತ್ತಲೆ ಮೆರವಣಿಗೆ, ಮೆಕ್ಕೆಜೋಳ ರಸ್ತೆಗೆ ಸುರುವಿ ಪ್ರತಿಭಟನೆ ನಡೆಸಿದ್ದರಲ್ಲದೆ ಕೊನೆ ದಿನವಂತೂ ಟಯರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಕುಮಾರ ಮಹಾರಾಜರು, ‘ಖರೀದಿ ಕೇಂದ್ರ ಆರಂಭವಾಗುವವರೆಗೆ ನಾನು ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ಬಿಡುವುದಿಲ್ಲ. ರೈತರಿಗಾಗಿ ಉಪವಾಸ ಇದ್ದು ಪ್ರಾಣ ತ್ಯಾಗಕ್ಕೂ ಸಿದ್ಧ’ ಎಂದಿದ್ದರು.

ಮುಂಡರಗಿ, ಹಾವೇರಿ, ಶಿರಹಟ್ಟಿ, ಧಾರವಾಡಗಳಿಂದ ರೈತ ಮುಖಂಡರು ವೇದಿಕೆಗೆ ಬಂದು ಬೆಂಬಲ ವ್ಯಕ್ತಪಡಿಸಿದ್ದರು. ಅವರೊಂದಿಗೆ ನಾಡಿನ ಹಲವು ಮಠಾಧೀಶರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷ.

ಮೆಕ್ಕೆಜೋಳದ ಖರೀದಿ ಕೇಂದ್ರ ಆಗಬೇಕು ಎಂಬುದೊಂದೇ ಹೋರಾಟಗಾರರ ಮುಖ್ಯ ಬೇಡಿಕೆ ಆಗಿತ್ತು. ಈ ಮಧ್ಯೆ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದ್ದುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಜಿಲ್ಲಾಧಿಕಾರಿ ಜತೆಗೆ ಹೋರಾಟಗಾರರನ್ನು ಭೇಟಿ ಮಾಡಿ ಆದಷ್ಟು ಬೇಗನೇ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದರು. ಕುಮಾರ ಮಹಾರಾಜರು ಆಮರಣಾಂತ ಉಪವಾಸ ಕೈ ಬಿಡುವಂತೆ ಮನವಿ ಮಾಡಿದ್ದರು.

ಆದರೆ ಮಹಾರಾಜರು, ‘ರೈತರಿಗಾಗಿ ಸಾಯಲು ಸಿದ್ಧ. ಕೇಂದ್ರ ಶುರು ಆಗುವವರೆಗೆ ಉಪವಾಸ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಇದರಿಂದಾಗಿ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿತ್ತು.

ಲಕ್ಷ್ಮೇಶ್ವರ ಹೋರಾಟದ ಕಿಚ್ಚು ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವ್ಯಾಪಿಸಿದ್ದರಿಂದ ಸರ್ಕಾರ ಕೊನೆಗೂ ಎಚ್ಚರಗೊಂಡು ಇದೀಗ ಖರೀದಿ ಕೇಂದ್ರ ಆರಂಭಿಸಿದೆ. ಸೋಮವಾರ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಲಕ್ಷ್ಮೇಶ್ವರಕ್ಕೆ ಬಂದು ಹೋರಾಟದ ವೇದಿಕೆ ಮೇಲೆಯೇ ರೈತರ ನೋಂದಣಿ ಮಾಡುವ ಮೂಲಕ ಕೇಂದ್ರಕ್ಕೆ ಚಾಲನೆ ನೀಡಿದ್ದರು. ಇದು ರೈತರ ಸುದೀರ್ಘ ಹೊರಾಟಕ್ಕೆ ಸಂದ ಜಯವಾಗಿದೆ.

ಮಂಗಳವಾರದಿಂದ ಲಕ್ಷ್ಮೇಶ್ವರದ ಟಿಎಪಿಸಿಎಂಎಸ್‍ಗೆ ರೈತರು ನೋಂದಣಿ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಇಂದು ನೂರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಒಬ್ಬ ರೈತರಿಂದ ಐದು ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಅವಕಾಶ ಇದೆ. ಆದರೆ ಈ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರಿಂದ ಮುಂದಿನ ದಿನಗಳಲ್ಲಿ ನೋಂದಣಿ ಹೆಚ್ಚಾಗುವ ನಿರೀಕ್ಷೆ ಇದೆ. 

ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಲಕ್ಷ್ಮೇಶ್ವರದಲ್ಲಿ ರೈತರು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ದೀಡ್ ನಮಸ್ಕಾರ ಹಾಕಿದ್ದರು
ಒಗ್ಗಟ್ಟಿನಲ್ಲಿ ಬಲ ಇದೆ ಎಂಬುದಕ್ಕೆ ಲಕ್ಷ್ಮೇಶ್ವರದಲ್ಲಿ ನಡೆದ ರೈತ ಹೋರಾಟವೇ ಉದಾಹರಣೆ. ರೈತರು ಹೋರಾಟಕ್ಕೆ ಇಳಿಯುವ ಮುನ್ನವೇ ಬೆಂಬಲ ಖರೀದಿ ಕೇಂದ್ರ ಆರಂಭಿಸಿದರೆ ಹೆಚ್ಚಿನ ಅನುಕೂಲ ಆಗುತ್ತದೆ
ಸೊಲಮಣ್ಣ ಡಾಣಗಲ್ಲ ರೈತ ಶಿಗ್ಲಿ
ರೈತರಿಗೆ ಹೆಚ್ವಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಐದು ಕ್ವಿಂಟಲ್ ಬದಲಿಗೆ ಒಬ್ಬ ರೈತರಿಂದ 40 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು
ಮಹೇಶ ಹೊಗೆಸೊಪ್ಪಿನ ಪಕ್ಷಾತೀತ ರೈತ ಹೋರಾಟ ಸಂಘದ ಅಧ್ಯಕ್ಷ ಲಕ್ಷ್ಮೇಶ್ವರ
ವರ್ಷದ ಹನ್ನೆರಡು ತಿಂಗಳೂ ಬೆಂಬಲ ಬೆಲೆ ಖರೀದಿ ಕೇಂದ್ರ ಚಾಲೂ ಇರುವಂತೆ ವ್ಯವಸ್ಥೆ ಮಾಡಬೇಕು
ನೀಲಪ್ಪ ಶೆರಸೂರಿ ರೈತ ಮುಖಂಡ ಲಕ್ಷ್ಮೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.