ಲಕ್ಷ್ಮೇಶ್ವರ: ಒಂದು ವಾರದಿಂದ ಸುರಿಯುತ್ತಿರುವ ಮಳೆಯು ತಾಲ್ಲೂಕಿನಲ್ಲಿ ಹಲವು ಆತಂಕಗಳನ್ನು ಸೃಷ್ಟಿಸಿದೆ. ಮುಂಗಾರು ಹಂಗಾಮು ಬೆಳೆಗಳಾದ ಈರುಳ್ಳಿ, ಹೆಸರು, ಕಂಠಿಶೇಂಗಾ, ಹತ್ತಿ ಬೆಳೆಗಳು ಜಲಾವೃತಗೊಂಡು ಕೊಳೆಯುವ ಸ್ಥಿತಿ ತಲುಪಿವೆ.
ಹೆಸರು ಬೆಳೆ ಕಟಾವಿಗೆ ನಿರಂತರ ಮಳೆ ಅಡ್ಡಿಯಾಗಿದ್ದು, ಇದೇ ರೀತಿ ಒಂದು ವಾರ ಮಳೆ ಮುಂದುವರಿದರೆ ಹೆಸರು ಬೆಳೆ ಹೊಲದಲ್ಲಿಯೇ ಮೊಳಕೆ ಒಡೆಯುವ ಆತಂಕ ರೈತರನ್ನು ಕಾಡುತ್ತಿದೆ. ಇದರೊಂದಿಗೆ ಶೇಂಗಾ ಬೆಳೆಯು ಜಲಾವೃತಗೊಂಡ ಕಾರಣ ಬೇರು ಕೊಳೆಯುವ ರೋಗ ಕಾಣಿಸಿಕೊಂಡು ರೈತರಲ್ಲಿ ಮತ್ತೊಂದು ಆತಂಕ ಮೂಡಿಸಿದೆ. ಹದಿನೈದು ದಿನ ಮಳೆ ಬರದಿದ್ದರೆ ಬಂದಷ್ಟು ಇಳುವರಿ ರೈತರನ್ನು ಸೇರುತ್ತದೆ. ಇಲ್ಲದಿದ್ದರೆ ರೈತರಿಗೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಸತತ ಮಳೆಗೆ ಈರುಳ್ಳಿ ಬೆಳೆ ಶೇ 60ರಷ್ಟು ಹಾಳಾಗಿದ್ದು, ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಅದರೊಂದಿಗೆ ತೇವಾಂಶ ಹೆಚ್ಚಾದ ಕಾರಣ ಉಳಿದ ಬೆಳೆಗಳಿಗೂ ಅನೇಕ ರೋಗಗಳು ಕಾಡುತ್ತಿವೆ.
ನಿರಂತರ ಮಳೆಯಿಂದಾಗಿ ವಾತಾವರಣ ಸಾಕಷ್ಟು ತಂಪಾಗಿದ್ದು, ಜನರಿಗೆ ವಿವಿಧ ರೋಗಗಳನ್ನು ತರುತ್ತಿದೆ. ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರ ರೋಗಿಗಳಿಂದ ತುಂಬಿದೆ. ತಂಪು ವಾತಾವರಣ ಜನರಲ್ಲಿ ನೆಗಡಿ, ಕೆಮ್ಮು, ಚಳಿ ಜ್ವರ, ನೋವುಗಳಿಂದ ಜನರು ನರಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ತಂಪು ವಾತಾವರಣ ಹೆಚ್ಚಾಗಿದ್ದು ಜನರಲ್ಲಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ಜನರು ಆದಷ್ಟು ಕಾಯಿಸಿ ಆರಿಸಿದ ನೀರನ್ನು ಕುಡಿಯುವ ಜತೆಗೆ ತಂಪು ಆಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕುಡಾ.ಶ್ರೀಕಾಂತ ಕಾಟೆವಾಲೆ, ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.