
ಗದಗ: ‘ಬೊಜ್ಜು, ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಅಸಮತೋಲನ, ಮದ್ಯಸೇವನೆಯಿಂದಾಗಿ ಲಿವರ್‌ನ ಆರೋಗ್ಯ ಹದಗೆಡುತ್ತದೆ. ಯಕೃತ್ತು ಆರೋಗ್ಯವಾಗಿಡಲು ನಿಯಮಿತ ತಪಾಸಣೆಯೇ ಮದ್ದು’ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ಜಯಂತ್ ರೆಡ್ಡಿ ತಿಳಿಸಿದರು.
‘ಯಕೃತ್ತಿನ ರೋಗಗಳು ನಿಶ್ಯಬ್ದವಾಗಿ ಹಬ್ಬುತ್ತಿದ್ದು, ಸಾರ್ವಜನಿಕರ ಆರೋಗ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಆರಂಭದಲ್ಲೇ ಸಮಸ್ಯೆ ಗುರುತಿಸಿ, ಲಿವರ್ ಕಸಿ ಮಾಡಿದರೆ ರೋಗಿ ಬದುಕುಳಿಯುವ ಪ್ರಮಾಣ ಶೇ 90ಕ್ಕಿಂತ ಹೆಚ್ಚು ಇರುತ್ತದೆ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬಹುಕಾಲ ಮದ್ಯ ಸೇವಿಸುವವರಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸದೇ ಯಕೃತ್ತು ಹಾನಿಗೊಳಗಾಗುತ್ತದೆ. ಅಧ್ಯಯನಗಳ ಪ್ರಕಾರ, ಯಕೃತ್ತಿನ ರೋಗಗಳು ಸಾಮಾನ್ಯವಾಗಿ 10-15 ವರ್ಷಗಳ ಕಾಲ ಅಗೋಚರವಾಗಿಯೇ ಬೆಳೆಯುತ್ತವೆ. ಕೊಬ್ಬಿನ ಯಕೃತ್ತು ಹೊಂದಿರುವ ಶೇ 30ಕ್ಕಿಂತಲೂ ಹೆಚ್ಚಿನ ರೋಗಿಗಳು ಮೊದಲ ಮೌಲ್ಯಮಾಪನದ ಸಮಯದಲ್ಲೇ ಫೈಟ್ರೋಸಿಸ್‍ಗೆ ತುತ್ತಾಗಿರುತ್ತಾರೆ. ಇದರ ಪರಿಣಾಮವಾಗಿ, ಅನೇಕರು ವೈದ್ಯಕೀಯ ಸಲಹೆಯನ್ನು ವಿಳಂಬಿಸಿ, ರೋಗವು ಸಿರೋಸಿಸ್ ಹಂತಕ್ಕೆ ಮುಂದುವರಿದ ನಂತರವೇ ಚಿಕಿತ್ಸೆಗೆ ಮುಂದಾಗುತ್ತಾರೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿದೆ. ಆತಂಕಕಾರಿ ಸಂಗತಿಯೆಂದರೆ ಯಕೃತ್ತಿನ ಅನಾರೋಗ್ಯದಿಂದ ಚಿಕಿತ್ಸೆಗೆ ಬರುವ ರೋಗಿಗಳಲ್ಲಿ ಶೇ 55-60ರಷ್ಟು ಜನರಲ್ಲಿ ಈ ಸಮಸ್ಯೆ ಕಂಡುಬಂದಿದೆ. ಮದ್ಯ ಸೇವಿಸದವರೂ ಇದರಲ್ಲಿ ಸೇರಿದ್ದಾರೆ. ಯಕೃತ್ ರೋಗಗಳು ಸಾಮಾನ್ಯವಾಗಿ ಯಾವುದೇ ಎಚ್ಚರಿಕೆ ಲಕ್ಷಣಗಳಿಲ್ಲದೆ ಬೆಳೆಯುತ್ತವೆ. ಬೊಜ್ಜು, ಮಧುಮೇಹ, ರಕ್ತದೊತ್ತಡ ಹೆಚ್ಚಳ, ಕೊಲೆಸ್ಟ್ರಾಲ್ ಅಸಮತೋಲನದಿಂದ ಈ ರೋಗ ಹರಡುತ್ತಿದೆ’ ಎಂದು ಸಲಹೆ ನೀಡಿದರು.
ಯಕೃತ್ತಿನ ಸಮಸ್ಯೆ ಹೊಂದಿರುವ ಕಸಿಯ ಅಗತ್ಯ ಇರುವವರಿಗೆ ಕುಟುಂಬದ ಯಾವುದೇ ಸದಸ್ಯರು ಲಿವರ್ ಅನ್ನು ದಾನವಾಗಿ ನೀಡಬಹುದು. ಕಸಿಯನ್ನು ಬೆಂಗಳೂರಿನ ಹಳೆ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆಸಲಾಗುವುದು–ಡಾ.ಜಯಂತ ರೆಡ್ಡಿ, ಮಣಿಪಾಲ್ ಆಸ್ಪತ್ರೆ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.