ADVERTISEMENT

ನೀರಿನ ವಿಷಯದಲ್ಲಿ ರಾಜಕಾರಣ ಸಲ್ಲ; ನಿಜಗುಣ ಶ್ರೀ

ಮಹದಾಯಿ ಹೋರಾಟ; ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಮನವಿ ಪತ್ರ ರವಾನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 13:59 IST
Last Updated 17 ಜುಲೈ 2018, 13:59 IST
ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1098ನೇ ದಿನವಾದ ಮಂಗಳವಾರ ನಿಜಗುಣಪ್ರಭು ಸ್ವಾಮೀಜಿ, ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿಗೆ ಅಂಚೆ ಮೂಲಕ ಪತ್ರ ರವಾನಿಸಿದರು
ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 1098ನೇ ದಿನವಾದ ಮಂಗಳವಾರ ನಿಜಗುಣಪ್ರಭು ಸ್ವಾಮೀಜಿ, ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿಗೆ ಅಂಚೆ ಮೂಲಕ ಪತ್ರ ರವಾನಿಸಿದರು   

ನರಗುಂದ:‘ನೀರು,ಗಾಳಿ,ಆಹಾರ ಮನುಷ್ಯನಿಗೆ ಬೇಕಾಗಿರುವ ಅಗತ್ಯ ವಸ್ತುಗಳು. ಈ ವಿಷಯಗಳಲ್ಲಿ ರಾಜಕಾರಣ ಸಲ್ಲದು’ ಎಂದು ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಮಹದಾಯಿ ಧರಣಿ ವೇದಿಕೆಯಲ್ಲಿ ರಾಷ್ಟ್ರಪತಿಗೆ ರವಾನಿಸಲು ಸಿದ್ಧಪಡಿಸಲಾದ ದಯಾಮರಣ ಮರಣ ಪತ್ರಕ್ಕೆ ಸಹಿ ಹಾಕಿ ಅವರು ಮಾತನಾಡಿದರು.

‘ಮಹದಾಯಿ ಹೋರಾಟ ಮೂರು ವರ್ಷ ಪೂರೈಸಿದರೂ, ಸರ್ಕಾರ ಇದನ್ನು ಬಹಳ ಲಘುವಾಗಿ ಪರಿಗಣಿಸಿದ್ದರಿಂದ ನೀರಿನ ಸಮಸ್ಯೆ ಬಗೆಹರಿದಿಲ್ಲ. ರೈತರಿಗೆ ಬೆಂಬಲವಾಗಿ ಮಠಾಧೀಶರೂ ದಯಾಮರಣಕ್ಕೆ ಸಿದ್ದರಾಗಿದ್ದೇವೆ. ರಾಷ್ಟ್ರಪತಿ ಇದನ್ನು ಮನಗಂಡು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು’ ಎಂದರು.

‘ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಸದರ ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡದಿದ್ದರೆ ರಾಜೀನಾಮೆಗೆ ಮುಂದಾಗಬೇಕು. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಲೇ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ’ ಎಂದರು.
‘ಕುಡಿಯುವ ನೀರಿಗಾಗಿ ನಡೆಯುತ್ತಿರುವ ಈ ಸುದೀರ್ಘ ಹೋರಾಟಕ್ಕೆ, ನೀರು ಮಾರಾಟ ಮಾಡುವ ಕಂಪೆನಿಗಳೂ ಬೆಂಬಲ ಸೂಚಿಸಿ, ರೈತರ ಜತೆಗೆ ಕೈಜೋಡಿಸಬೇಕು’ ಎಂದು ಆಗ್ರಹಿಸಿದರು.

‘ಮಹದಾಯಿ ಹೋರಾಟಕ್ಕೆ ಮಠಾಧೀಶರ ಬೆಂಬಲ ಹಿಂದೆಯೂ ಇತ್ತು. ಈಗ ಅದು ಮತ್ತಷ್ಟು ಹೆಚ್ಚಾಗಿದೆ’ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ವೀರಬಸಪ್ಪ ಹೂಗಾರ, ಎಚ್‌.ಎನ್‌.ಕೋರಿ, ಎಸ್‌.ಬಿ.ಜೋಗಣ್ಣವರ, ಈರಣ್ಣ ಗಡಗಿಶೆಟ್ಟರ, ಹನುಮಂತ ಸರನಾಯ್ಕರ, ಪರಶುರಾಮ ಜಂಬಗಿ ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.