ADVERTISEMENT

ಪ್ರಾಮಾಣಿಕ ರೈತ ಸಂಘಟನೆಯನ್ನು ಬೆಂಬಲಿಸಿ: ಅಲ್ಲಮಪ್ರಭು ಬೆಟದೂರ

ನರಗುಂದ: ಹುತಾತ್ಮ ರೈತ ದಿನಾಚರಣೆಯಲ್ಲಿ ರೈತರ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:10 IST
Last Updated 22 ಜುಲೈ 2022, 5:10 IST
ಗದಗ ಜಿಲ್ಲೆ ನರಗುಂದಲ್ಲಿ ಗುರುವಾರ ನಡೆದ ಹುತಾತ್ಮ ರೈತ ದಿನಾಚರಣೆ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ರೈತ ವೀರಗಲ್ಲಿನ ಬಳಿ ಬಂದಾಗ ನೂಕು ನುಗ್ಗಲು ಉಂಟಾಯಿತು
ಗದಗ ಜಿಲ್ಲೆ ನರಗುಂದಲ್ಲಿ ಗುರುವಾರ ನಡೆದ ಹುತಾತ್ಮ ರೈತ ದಿನಾಚರಣೆ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ರೈತ ವೀರಗಲ್ಲಿನ ಬಳಿ ಬಂದಾಗ ನೂಕು ನುಗ್ಗಲು ಉಂಟಾಯಿತು   

ನರಗುಂದ (ಗದಗ ಜಿಲ್ಲೆ): ‘ರೈತರ ಹೆಸರಿನಲ್ಲಿ ರಾಜಕಾರಣ ನಡೆದು ಪ್ರಾಮಾಣಿಕ ಸಂಘಟನೆಗಳಿಗೆ ಬೆಲೆ ಇಲ್ಲದಂತಾಗಿದೆ. ರಾಜಕಾರಣ ರೈತ ಕುಲವನ್ನೇ ನಾಶ ಮಾಡುತ್ತಿದೆ’ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಆಕ್ರೋಶ ವ್ಯಕ್ತಪಡಿಸಿದರು.

42ನೇ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಸೇನಾ ಕರ್ನಾಟಕದ ಆಶ್ರಯದಲ್ಲಿ ‘ಮಹದಾಯಿ ಹೋರಾಟ ವೇದಿಕೆ’ಯಲ್ಲಿ ಗುರುವಾರ ನಡೆದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಸಿರು ಶಾಲು ಹಾಕಿಕೊಂಡು ರಾಜಕಾರಣ, ರೈತರಿಗೆ ವಂಚನೆ ಮಾಡುವುದಾದರೆ ಅವರು ರೈತ ಸಂಘಟನೆಯಿಂದ ಹೊರಹೋಗಬೇಕು. ರೈತರು ಪ್ರಾಮಾಣಿಕ ರೈತ ಸಂಘಟನೆಗಳನ್ನು ಮಾತ್ರ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ, ‘ರೈತರ ಹೆಸರಿನಲ್ಲಿ ಪಕ್ಷಗಳು ರಾಜಕಾರಣ ಕೈಬಿಡಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ 19 ನಿರ್ಣಯಗಳನ್ನು ಮಂಡಿಸಿ, ಈ ನಿರ್ಣಯಗಳಿಗೆ ಸರ್ಕಾರ ಬದ್ಧವಾಗಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜೆ.ಎಂ.ವೀರಸಂಗಯ್ಯ, ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದರು.

ಸಮಾವೇಶದಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರು. ರೈತ ವೀರಗಲ್ಲು ಬಳಿ ದಿ.ವೀರಪ್ಪ ಕಡ್ಲಿಕೊಪ್ಪರ ಸ್ಮಾರಕಕ್ಕೆ ಆಗ್ರಹಿಸಿ ಪ್ರತಿಭಟನೆಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.