
ರಾಶಿ ಹಾಕಿರುವ ಮೆಕ್ಕೆಜೋಳ
ಮುಂಡರಗಿ (ಗದಗ): ತಾಲ್ಲೂಕಿನ ಡಂಬಳ ಹೋಬಳಿಯ ಅತ್ತಿಕಟ್ಟಿ ಗ್ರಾಮದಲ್ಲಿ ಕೊಯ್ಲು ಮಾಡಲು ಸಂಗ್ರಹಿಸಿದ್ದ ನೂರಾರು ಕ್ವಿಂಟಲ್ ಮೆಕ್ಕೆಜೋಳದ ಫಸಲಿಗೆ ಶುಕ್ರವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಮೆಕ್ಕೆಜೋಳ ರಾಶಿ ಸುಂಪೂರ್ಣ ಸುಟ್ಟುಹೋಗಿದೆ.
‘ಗ್ರಾಮದ ರೈತರಾದ ಗೋಪಿ ಚವ್ಹಾಣ ಮತ್ತು ಗಣೇಶ ಚವ್ಹಾಣ ಅವರು 100 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಒಕ್ಕಲು ಮಾಡಲು ಹತ್ತಿರದ ಬಯಲಿನಲ್ಲಿ ಸಂಗ್ರಹಿಸಿದ್ದರು. ಕಿಡಿಗೇಡಿಗಳು ಮೆಕ್ಕೆಜೋಳ ತೆನೆಗಳಿಗೆ ಬೆಂಕಿ ಹಚ್ಚಿದ್ದಾರೆ. ವಿಷಯ ಗೊತ್ತಾದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಬೆಂಕಿ ತಕ್ಷಣವೇ ನಿಯಂತ್ರಣಕ್ಕೆ ಬರಲಿಲ್ಲ’ ಎಂದು ಮುಂಡರಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಸುಮಾರು ₹20 ಲಕ್ಷ ಖರ್ಚು ಮಾಡಿ ಮೆಕ್ಕೆಜೋಳ ಬೆಳೆಯಲಾಗಿತ್ತು. ₹40 ಲಕ್ಷ ಮೌಲ್ಯದ ಫಸಲು ಬೆಂಕಿಗೆ ಆಹುತಿಯಾಗಿದೆ’ ಎಂದು ರೈತ ಗೋಪಿ ಚವ್ಹಾಣ ತಿಳಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಯರಿಸ್ವಾಮಿ ಪಿ.ಎಸ್., ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.