
ಮುಂಡರಗಿ: ತಾಲ್ಲೂಕಿನ ಡಂಬಳ ಹೋಬಳಿಯ ಅತ್ತಿಕಟ್ಟಿ ಗ್ರಾಮದಲ್ಲಿ ಕೊಯ್ಲು ಮಾಡಲು ಸಂಗ್ರಹಿಸಿದ್ದ ನೂರಾರು ಕ್ವಿಂಟಲ್ ಮೆಕ್ಕೆಜೋಳದ ಫಸಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಮೆಕ್ಕೆಜೋಳ ರಾಶಿ ಸುಂಪೂರ್ಣ ಸುಟ್ಟುಹೋದ ಘಟನೆ ಶುಕ್ರವಾರ ನಡೆದಿದೆ.
ಗ್ರಾಮದ ರೈತರಾದ ಗೋಪಿ ಚವ್ಹಾಣ ಹಾಗೂ ಗಣೇಶ ಚವ್ಹಾಣ ಅವರು 100 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಒಕ್ಕಲು ಮಾಡಲು ಹತ್ತಿರದ ಬಯಲಿನಲ್ಲಿ ಸಂಗ್ರಹಿಸಿದ್ದರು. ಕಿಡಿಗೇಡಿಗಳಿಂದ ತೆನೆಗಳಿಗೆ ಬೆಂಕಿ ಹಚ್ಚಿದ್ದರಿಂದ, ಸಂಪೂರ್ಣ ಸುಟ್ಟುಹೋಗಿವೆ.
‘ಸ್ಥಳೀಯರ ಮಾಹಿತಿ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದೆ ಮೆಕ್ಕೆಜೋಳ ಸುಟ್ಟುಹೋಯಿತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಸುಮಾರು ₹20 ಲಕ್ಷ ಖರ್ಚು ಮಾಡಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಅಂದಾಜು ₹40 ಲಕ್ಷ ಮೌಲ್ಯದ ಫಸಲು ಬೆಂಕಿಗೆ ಆಹುತಿಯಾಗಿದೆ’ ಎಂದು ರೈತ ಗೋಪಿ ಚವ್ಹಾಣ ತಿಳಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಯರಿಸ್ವಾಮಿ ಪಿ.ಎಸ್., ಡಿವೈಎಸ್ಪಿ ಪ್ರಭುಗೌಡ, ಸಿಪಿಐ ವಿಜಯಕುಮಾರ, ಕೃಷಿ ಅಧಿಕಾರಿ ಎಸ್.ಬಿ.ರಾಮೇನಳ್ಳಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಎ.ಪಿ.ಎಂ.ಸಿ. ಕಾರ್ಯದರ್ಶಿ ರಾಘವೇಂದ್ರ, ಮುಖಂಡರಾದ ಮಿಥುನಗೌಡ ಪಾಟೀಲ, ಡಿ.ಡಿ.ಮೋರನಾಳ, ಗೋಣಿಬಸಪ್ಪ ಕೊರ್ಲಹಳ್ಳಿ, ಶಂಕರಗೌಡ ಜಾಯನಗೌಡ್ರ ಭೇಟಿ ನೀಡಿ ಪರಿಶೀಲಿಸಿದರು.
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.