ADVERTISEMENT

ಲಕ್ಷ್ಮೇಶ್ವರ: ಶೀಘ್ರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:35 IST
Last Updated 22 ನವೆಂಬರ್ 2025, 4:35 IST
ಬೆಂಗಳೂರಿನಲ್ಲಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಶಾಸಕ ಡಾ. ಚಂದ್ರು ಲಮಾಣಿ  ಮನವಿ ಸಲ್ಲಿಸಿದರು
ಬೆಂಗಳೂರಿನಲ್ಲಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಶಾಸಕ ಡಾ. ಚಂದ್ರು ಲಮಾಣಿ  ಮನವಿ ಸಲ್ಲಿಸಿದರು   

ಲಕ್ಷ್ಮೇಶ್ವರ: ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಶೀಘ್ರ ತೆರೆಯುವಂತೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಅವರು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ದರ ಕುಸಿತದ ಕಾರಣ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬೆಂಬಲ ಬೆಲೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಶೀಘ್ರ ಆರಂಭಿಸಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಎಥೆನಾಲ್ ಉತ್ಪಾದನೆ, ಜಾನುವಾರುಗಳಿಗೆ ಮೇವು, ಡಿಸ್ಟಿಲರಿ ಮತ್ತಿತರ ಕೈಗಾರಿಕೆಗಳಲ್ಲಿ ಮೆಕ್ಕಜೋಳಕ್ಕೆ ಬೇಡಿಕೆ ಇದೆ. ಕಳೆ ಆರ್ಥಿಕ ವರ್ಷದಲ್ಲಿ ಎಥೆನಾಲ್ ತಯಾರಿಕೆಗಾಗಿ ಕೇಂದ್ರ ಸರ್ಕಾರವು ನಾಫೆಡ್ ಮೂಲಕ ರಾಜ್ಯದಿಂದ 410 ಟನ್ ಮೆಕ್ಕೆಜೋಳ ಖರೀದಿಸಿತ್ತು. ಈ ಬಾರಿಯೂ ಖರೀದಿಸಲು ಅವಕಾಶವಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಪಡಿತರ ಮತ್ತು ಜೈವಿಕ ಇಂಧನ ಸಚಿವಾಲಯಗಳ ಅಧೀನದ ಎಫ್‌ಸಿಐ, ನಾಫೆಡ್, ಎನ್‌ಸಿಎಫ್‌ಗಳ ಮೂಲಕ ಮೆಕ್ಕೆಜೋಳ ಖರೀದಿಸಲು ಅವಕಾಶ ಇದೆ. ಪ್ರತಿ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಖರೀದಿ ಕೇಂದ್ರದೊಂದಿಗೆ ಬೆಳೆ ಹಾನಿ ಮತ್ತು ಬೆಳೆ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.