ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ | ಸ್ಪಂದಿಸಿದ ಸರ್ಕಾರ; ಉಪವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:40 IST
Last Updated 22 ನವೆಂಬರ್ 2025, 4:40 IST
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿನ ಪ್ರತಿಭಟನಾ ವೇದಿಕೆಯಲ್ಲಿ ಕುಮಾರ ಮಹಾರಾಜರು ಶುಕ್ರವಾರ ಎಳೆನೀರು ಸೇವಿಸಿ, ಉಪವಾಸ ಅಂತ್ಯಗೊಳಿಸಿದರು
ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿನ ಪ್ರತಿಭಟನಾ ವೇದಿಕೆಯಲ್ಲಿ ಕುಮಾರ ಮಹಾರಾಜರು ಶುಕ್ರವಾರ ಎಳೆನೀರು ಸೇವಿಸಿ, ಉಪವಾಸ ಅಂತ್ಯಗೊಳಿಸಿದರು   

ಲಕ್ಷ್ಮೇಶ್ವರ: ಎರಡ್ಮೂರು ದಿನದಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಎನ್. ಶ್ರೀಧರ ಅವರು ಶುಕ್ರವಾರ ಘೋಷಿಸಿದ ಹಿನ್ನೆಲೆಯಲ್ಲಿ ಕುಮಾರ ಮಹಾರಾಜರು ಒಂದು ವಾರದಿಂದ ಕೈಗೊಂಡಿದ್ದ ಉಪವಾಸವನ್ನು ಅಂತ್ಯಗೊಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್. ಶ್ರೀಧರ ಮಾತನಾಡಿ, ‘10 ಲಕ್ಷ ಟನ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಎರಡ್ಮೂರು ದಿನಗಳಲ್ಲಿ ಖರೀದಿ ಕೇಂದ್ರ ಆರಂಭವಾಗಲಿದೆ’ ಎಂದು ಹೇಳಿದರು.

ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ ಹಾಗೂ ನಾಗರಾಜ ಚಿಂಚಲಿ ಮಾತನಾಡಿ, ‘ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ, ಕುಮಾರ ಮಹಾರಾಜರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಅವರ ಪ್ರಾರ್ಥನೆ ಫಲವಾಗಿ ಸರ್ಕಾರ ಖರೀದಿ ಕೇಂದ್ರ ತೆರೆಯಲು ಒಪ್ಪಿಗೆ ನೀಡಿದೆ. ಈ ಜಯ ಮಹಾರಾಜರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ADVERTISEMENT

ವಕೀಲರಾದ ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ ಮಾತನಾಡಿ, ‘ಒಂದು ವಾರ ನಿರಂತರವಾಗಿ ರೈತರು ನಡೆಸಿದ ಧರಣಿಯು ಸರ್ಕಾರದ ಕಣ್ಣು ತೆರೆಸಿದೆ. ಅನ್ನದಾತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಜಯ ಸಿಗುತ್ತದೆ ಎಂಬುದಕ್ಕೆ ಈ ಹೋರಾಟವೇ ಸಾಕ್ಷಿ’ ಎಂದು ತಿಳಿಸಿದರು.

ಸ್ವಾಮೀಜಿ ಅವರೊಂದಿಗೆ ಉಪವಾಸ ಕೈಗೊಂಡಿದ್ದ ಬಸಣ್ಣ ಬೆಂಡಿಗೇರಿ ಹಾಗೂ ಪೂರ್ಣಾಜಿ ಖರಾಟೆ ಮಾತನಾಡಿ, ‘ರೈತರು ಹೋರಾಟಕ್ಕಿಳಿಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು, ಅವರ ಸಮಸ್ಯೆ ಪರಿಹರಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಮುಂದುವರಿಯಲಿದೆ ಧರಣಿ’: ಮುಖಂಡರಾದ ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ ಮಾತನಾಡಿ, ‘ಖರೀದಿ ಕೇಂದ್ರ ತೆರೆಯುವ ಕುರಿತು ಆದೇಶ ಪ್ರತಿ ನೀಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದೇ ವೇದಿಕೆಯಲ್ಲಿ ಮೊದಲ ಖರೀದಿ ಕೇಂದ್ರ ಆರಂಭವಾಗಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗಂಗಪ್ಪ, ಕುಂದಗೋಳದ ಬಸವಣ್ಣಜ್ಜನವರು, ಮಾಜಿ ಶಾಸಕ ರಾಮಣ್ಣ ಲಮಾಣಿ, ವೀರೇಂದ್ರಗೌಡ ಪಾಟೀಲ, ಟಾಕಪ್ಪ ಸಾತಪುತೆ, ಸೋಮಣ್ಣ ಡಾಣಗಲ್ಲ, ಸುರೇಶ, ಅಭಯ ಜೈನ್, ದಾದಾಪೀರ್ ಮುಚ್ಛಾಲೆ, ಶಿವಾನಂದ ಲಿಂಗಶೆಟ್ಟಿ, ಗುರಪ್ಪ ಮುಳಗುಂದ, ವಿರುಪಾಕ್ಷಪ್ಪ ಮುದಕಣ್ಣವರ ಇದ್ದರು.

ಹೋರಾಟ ವೇದಿಕೆಯಲ್ಲಿ ಉಪವಾಸ ಅಂತ್ಯ

ವಿವಿಧ ರೈತಪರ ಸಂಘಟನೆಗಳೊಂದಿಗೆ ರೈತರು ನಡೆಸಿದ ಧರಣಿ ಬೆಂಬಲಿಸಿ ಆದರಹಳ್ಳಿಯ ಕುಮಾರ ಮಹಾರಾಜರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಗುರುವಾರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ಕಾರವು ಖರೀದಿ ಕೇಂದ್ರ ತೆರೆಯಲು ಒಪ್ಪಿಗೆ ನೀಡಿದ್ದು ಉಪವಾಸ ಕೈ ಬಿಡುವಂತೆ ಜಿಲ್ಲಾಧಿಕಾರಿ ಎನ್. ಶ್ರೀಧರ ಅವರು ಶುಕ್ರವಾರ ಜಿಲ್ಲಾಸ್ಪತ್ರೆಗೆ ತೆರಳಿ ಸ್ವಾಮೀಜಿಗೆ ಮನವಿ ಮಾಡಿದರು.

‘ನಾನು ಪ್ರತಿಭಟನೆ ನಡೆಸಿದ್ದ ವೇದಿಕೆಯಲ್ಲೇ ಉಪವಾಸ ನಿಲ್ಲಿಸುತ್ತೇನೆ. ಅಲ್ಲಿಗೆ ಕರೆದುಕೊಂಡು ಹೋಗಿ’ ಎಂದು ಸ್ವಾಮೀಜಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರಿಂದ ಅವರನ್ನು ಹೋರಾಟದ ವೇದಿಕೆಗೆ ಕರೆತರಲಾಯಿತು. ಎಲ್ಲ ಹೋರಾಟಗಾರರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನೀಡಿದ ಎಳೆನೀರು ಸೇವಿಸಿ ‘ಓಂ ನಮಃ ಶಿವಾಯ’ ಮಂತ್ರ ಪಠಿಸುವ ಮೂಲಕ ಸ್ವಾಮೀಜಿ ಉಪವಾಸ ನಿಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಗಳ ಪೂರ್ವಾಶ್ರಮದ ತಂದೆ ನಾಗಪ್ಪ ತಾಯಿ ಶಂಕ್ರವ್ವ ಹಾಗೂ ಕುಟುಂಬ ಸದಸ್ಯರು ಭಾವುಕರಾಗಿದ್ದರು. ಆರೋಗ್ಯ ಸಮಸ್ಯೆಯಿದ್ದ ಕಾರಣ ಶ್ರೀಗಳನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಮರಳಿ ಕರೆತರಲಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.