
ಗದಗ: ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು, ಶನಿವಾರ ಕೂಡ ರೈತರು ತೊಂದರೆ ಅನುಭವಿಸಿದರು. ಗದಗ ಎಪಿಎಂಸಿ ಆವರಣದಲ್ಲಿ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.
ಒಬ್ಬ ರೈತರಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಬೇಕು ಎಂಬ ಆದೇಶ ಇದ್ದರೂ, 20 ಕ್ವಿಂಟಲ್ ಮಾತ್ರ ಖರೀದಿ ಮಾಡಲಾಗುತ್ತಿದೆ ಎಂದು ರೈತರು ಖರೀದಿ ಕೇಂದ್ರದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
‘ಮೆಕ್ಕೆಜೋಳವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ಎರಡು ದಿನಗಳಾಗಿವೆ. ರಾತ್ರಿ ಕೊರೆಯುವ ಚಳಿಯಲ್ಲಿ ಮಲಗಿ, ರಸ್ತೆ ಬದಿ ಊಟ–ತಿಂಡಿ ತಿನ್ನುವ ಪರಿಸ್ಥಿತಿ ಎದುರಾಗಿದೆ. ಕೆಎಂಎಫ್‌ನವರು ಸರ್ಕಾರದ ಆದೇಶ ಉಲ್ಲಂಘಿಸಿದ್ದು ರೈತರಿಂದ 20 ಕ್ವಿಂಟಲ್ ಮಾತ್ರ ಖರೀದಿಸುತ್ತಿದ್ದಾರೆ. ಅಲ್ಲದೆ, ಕ್ವಿಂಟಲ್‌ಗೆ 2 ಕೆ.ಜಿ. ಲೆಕ್ಕ ಕಡಿತ ಮಾಡುತ್ತಿದ್ದಾರೆ’ ಎಂದು ನೀಲಗುಂದದ ರೈತರೊಬ್ಬರು ಆರೋಪ ಮಾಡಿದರು.
‘ಟ್ರ್ಯಾಕ್ಟರ್ ಬಾಡಿಗೆ ದಿನಕ್ಕೆ ₹3 ಸಾವಿರ ಇದೆ. ಒಂದು ರಾತ್ರಿ ಇಲ್ಲೇ ಉಳಿದರೆ ಟ್ರ್ಯಾಕ್ಟರ್ ಬಾಡಿಗೆ ಡಬಲ್ ಆಗಲಿದೆ. ಜತೆಗೆ ಊಟ, ತಿಂಡಿ, ವಸತಿ ಖರ್ಚು ಮೈಮೇಲೆ ಬೀಳಲಿದೆ. ರೈತರು ಮೆಕ್ಕೆಜೋಳ ತಕ್ಷಣ ಖರೀದಿ ಮಾಡಿಕೊಳ್ಳಬೇಕು’ ಎಂದು ರೈತರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.