
ಲಕ್ಷ್ಮೇಶ್ವರ: ‘ಭಾರತೀಯರಿಗೆ ಅಡುಗೆ ಮನೆಯೇ ಔಷಧಾಲಯ ಇದ್ದಂತೆ. ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಪಾರಂಪರಿಕ ವೈದ್ಯ ಹನಮಂತ ಮಳಲಿ ಹೇಳಿದರು.
ಪಟ್ಟಣದ ಚಂಬಣ್ಣ ಬಾಳಿಕಾಯಿ ಅವರ ಜಿನ್ನಿಂಗ್ ಕಾರ್ಖಾನೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
‘ಈ ಹಿಂದೆ ಭಾರತೀಯರು ನೈಸರ್ಗಿಕ ವಸ್ತುಗಳನ್ನು ಬಳಸಿ ಆಹಾರ ತಯಾರಿಸುವ ಕಾರಣ ಕಾಯಿಲೆ ಬರುತ್ತಿರಲಿಲ್ಲ. ಇದೀಗ ನಮ್ಮ ಆಹಾರ ಪದ್ಧತಿ ಬೇರೆ ಆದ ರೋಗಗಳಿಂದ ಬಳಲಬೇಕಾಗಿದೆ. ಪ್ರಕೃತಿಯಲ್ಲಿ 21 ಲಕ್ಷಕ್ಕೂ ಹೆಚ್ಚು ಔಷಧೀಯ ಗುಣವುಳ್ಳ ಸಸ್ಯಗಳಿದ್ದು, ಅತಿಬಲ ಮತ್ತು ಮಹಾಬಲ ಸಸ್ಯಗಳು ನಮ್ಮ ಆರೋಗ್ಯ ಕಾಪಾಡುತ್ತವೆ’ ಎಂದರು.
‘ಮನುಷ್ಯ ಆರೋಗ್ಯಯುತವಾಗಿರಲು ಪಚನ ಕ್ರಿಯೆ ಮುಖ್ಯ. ಪ್ರತಿದಿನ ಯಾವುದೇ ರೂಪದಲ್ಲಾದರೂ ನಾಲ್ಕು ಕಾಳು ಮೆಣಸು, ಅರ್ಧ ಲಿಂಬೆಹಣ್ಣು ಹಾಗೂ ತುಳಸಿ ಸೇವಿಸಿದರೆ ಆರೋಗ್ಯವಂತರಾಗಲು ಸಾಧ್ಯ’ ಎಂದು ತಿಳಿಸಿದರು.
ಹಿರಿಯ ನಾಗರಿಕರು ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ‘ಹಿರಿಯ ನಾಗರಿಕ ಅನುಕೂಲಕ್ಕಾಗಿ ಸಂಘದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕ ಸಮಸ್ಯೆಗಳ ಪರಿಹಾರಕ್ಕೂ ಸಂಘದಿಂದ ಹೋರಾಟ ಮಾಡಲಾಗುವುದು’ ಎಂದರು.
ಚಂಬಣ್ಣ ಬಾಳಿಕಾಯಿ, ಚನ್ನಪ್ಪ ಕೋಲಕಾರ, ಐ.ಎಸ್. ಮಡಿವಾಳರ, ರೇವಣಸಿದ್ದಯ್ಯ ಬಾಳಿಹಳ್ಳಿಮಠ, ಡಿ.ಬಿ. ಬಳಿಗಾರ, ನೀಲಪ್ಪ ಕರ್ಜೆಕಣ್ಣವರ, ಪ್ರಕಾಶ ಉಪನಾಳ, ಸುರೇಶ ರಾಚನಾಯಕರ. ಎಸ್.ಸಿ. ಅಳಗವಾಡಿ, ಪಾರವ್ವ ಧರಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.