
ಮುಳಗುಂದ: ‘ಪ್ರತಿದಿನ ಸಿರಿಧಾನ್ಯದ ಆಹಾರ ಸೇವಿಸಿದಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸಿರಿಧಾನ್ಯದ ಆಹಾರ ಸೇವಿಸುತ್ತಿದ್ದ ನಮ್ಮ ಹಿರಿಯರು ಆರೋಗ್ಯವಂತರಾಗಿ ಜೀವನ ಸಾಗಿಸುತ್ತಿದ್ದರು. ಆಧುನಿಕತೆಯ ಭರಾಟೆಯಲ್ಲಿ ಸಿರಿಧಾನ್ಯ ಬಳಕೆ ಕಡಿಮೆಯಾಗಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದೇವೆ. ಸಿರಿಧಾನ್ಯ ಬಳಕೆಯಿಂದ ಚೇತರಿಕೆ ಕಾಣಬಹುದು’ ಎಂದರು.
ಗದಗ ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ ಮಾತನಾಡಿ, ‘ಸಿರಿಧಾನ್ಯಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಕೊರಲಿನಲ್ಲಿ ಹೇರಳವಾದ ಪೋಷಕಾಂಶಗಳು ಇವೆ. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಿಂದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.
ಅಧಿಕಾರಿಗಳಾದ ಎಸ್.ಎಂ. ನೀಲಗುಂದ, ಜಿ.ಎಸ್. ಸ್ಪೂರ್ತಿ, ಮಲ್ಲಯ್ಯ ಕೊರವಣ್ಣವರ ಇದ್ದರು.
‘ಸಿರಿಧಾನ್ಯದ ಖಾದ್ಯ ಪ್ರೋತ್ಸಾಹಿಸಿ’
‘ಜನರ ಆರೋಗ್ಯ ಕಾಪಾಡುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಸಿರಿಧಾನ್ಯದ ಖಾದ್ಯಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ಹೃದಯ ಆರೋಗ್ಯ ಮಧುಮೇಹ ನಿಯಂತ್ರಣ ಮತ್ತು ದೇಹದ ತೂಕ ಸಮತೋಲನಕ್ಕೆ ಸಹಕಾರಿಯಾಗಿವೆ’ ಎಂದು ಗದಗ ಜಂಟಿ ಕೃಷಿ ಅಧಿಕಾರಿ ಚೇತನಾ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.