
ಗಜೇಂದ್ರಗಡ: ‘ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಮಾಸಿಕ ಸಂತೆ ಸಹಕಾರಿಯಾಗಿದ್ದು, ಸಂತೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ, ಸ್ವಾವಲಾಂಬಿಗಳಾಗಿಸಲು ಸಹಕಾರಿಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಬಡಿಗೇರಿ ಹೇಳಿದರು.
ಸಮೀಪದ ಗೋಗೇರಿ ಗ್ರಾಮದಲ್ಲಿ ಸಂಜೀವಿನಿ ಯೋಜನೆಯಡಿ ಗುರುವಾರ ನಡೆದ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ತಾವು ತಯಾರಿಸುವ ತಿಂಡಿ, ತಿನಿಸುಗಳು ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಮಾಸಿಕ ಸಂತೆ ಮಾರಾಟ ಮಾಡಲು ಅನುಕೂಲವಾಗುತ್ತಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಉತ್ಪನ್ನದ ಗುಣಮಟ್ಟ, ಉತ್ತಮ ಪ್ಯಾಕೇಜಿಂಗ್, ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡರೆ ನಿಮ್ಮ ಉತ್ಪನ್ನ ಮಾರುಕಟ್ಟೆಯಲ್ಲಿ ಜನರಿಗೆ ಪ್ರಿಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ವಸ್ತುಗಳನ್ನು ತಯಾರಿಸಬೇಕು. ಇದರಿಂದ ಆರ್ಥಿಕವಾಗಿ ಬೆಳೆಯಲು ಸಹಕಾರಿಯಾಗಲಿದೆ’ ಎಂದರು.
ಮುಖಂಡರಾದ ಕೆ.ಕೆ.ಬಾಗವಾನ ಮಾತನಾಡಿ, ‘ಗೋಗೇರಿ ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ ನಡೆಯುತ್ತಿರುವುದು ಖುಷಿಯ ವಿಚಾರ. ಈ ಗ್ರಾಮದ ಸ್ವಸಾಹಾಯ ಸಂಘಗಳ ಮಹಿಳಾ ಸದಸ್ಯರು ಹೊಸ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಕಳಿಸುವುದರಿಂದ ಆರ್ಥಿಕ ಸಬಲತೆಗೆ ಸಹಕಾರಿಯಾಗಲಿದೆ’ ಎಂದರು.
ಎಂ.ಕೆ.ಬಾದಾಮಿ, ಕೆ.ಎಸ್.ಕೊಡತಗೇರಿ ಮಾತನಾಡಿದರು.
ಮಾಸಿಕ ಸಂತೆಯಲ್ಲಿ ಶೇಂಗಾ ಎಣ್ಣೆ, ಚಕ್ಕಲಿ, ಉಪ್ಪಿನಕಾಯಿ, ಟೊಮ್ಯಾಟೊ ಉಪ್ಪಿನಕಾಯಿ, ಕಸೂತಿ ವಸ್ತುಗಳು, ಶಾವಿಗೆ, ಕಾರದಪುಡಿ, ಸೀರೆ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟಕ್ಕಿಡಲಾಗಿತ್ತು.
ಎನ್.ಆರ್.ಎಲ್.ಎಂ ಘಟಕದ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ ಬಳಿಗೇರ, ಗ್ರಾಮದ ಮುಖಂಡರಾದ ಬಸಪ್ಪ ಕೆರಿ, ಇಮಾಮಸಾಬ ಬಾಗವಾನ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.