
ಮುಳಗುಂದ: ಸಮೀಪದ ಸೊರಟೂರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿರುವ ಡಿಪಿಎಪಿ ಇಂಗ್ಲಿಷ್ ಮಾಧ್ಯಮ ಶಾಲೆಯು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಅಸುರಕ್ಷತೆ ನಡುವೆ ವಿದ್ಯಾರ್ಥಿಗಳ ಕಲಿಕೆ ಮುಂದುವರಿದಿದೆ.
1ರಿಂದ 7ನೇ ತರಗತಿವರೆಗೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆ ಮೂಲಸೌಲಭ್ಯಗಳು ಇಲ್ಲದಾಗಿದೆ. ಶಾಲೆಯು ಹಳೆ ಕಟ್ಟಡದಲ್ಲಿದ್ದು, ಮೆಟ್ಟಿಲು ಇರುವ ಜಾಗದಲ್ಲಿ ಸುರಕ್ಷತೆ ಗೋಡೆ (ಗ್ರಿಲ್) ಕಿತ್ತು ಹೋಗಿದೆ. ಮೇಲಿನ ಮಹಡಿಯಲ್ಲಿರುವ ಕೊಠಡಿಗಳಿಗೆ ವಿದ್ಯಾರ್ಥಿಗಳು ಭಯದಲ್ಲೇ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ ಮೂರು ವರ್ಷ ಕಳೆದಿದ್ದು, ಇದುವರೆಗೂ ಬಳಕೆಯಾಗಿಲ್ಲ. ಕೊಳವೆಬಾವಿ ನೀರನ್ನೇ ದಿನನಿತ್ಯ ವಿದ್ಯಾರ್ಥಿಗಳು ಕುಡಿಯಲು ಬಳಸುತ್ತಿದ್ದಾರೆ. ಶಾಲೆಯ ಅಕ್ಕಪಕ್ಕದ ಜಾಗದಲ್ಲಿ ಕಸ ಬೆಳೆದು ಕಲುಷಿತ ವಾತಾವರಣ ನಿರ್ಮಾಣವಾಗಿದೆ.
ಶಾಲಾ ಕೊಠಡಿ ಹಳೆದಾದ ಕಾರಣ ಮಳೆಗಾಲದಲ್ಲಿ ಚಾವಣಿ ಸೋರುತ್ತಿವೆ. ಶಾಲೆಯ ಆವರಣದಲ್ಲಿ ಹೈಮಾಸ್ಕ್ ವಿದ್ಯುತ್ ಕಂಬವಿದ್ದು, ಈಚೆಗೆ ಮುರಿದು ಬಿದ್ದಿದೆ. ಇದುವರೆಗೂ ಈ ಕುರಿತು ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಶಾಲೆಯಲ್ಲಿ ಪ್ರತ್ಯೇಕ ಶೌಚಾಲಯಗಳಿಲ್ಲ, ಇರುವ ಒಂದು ಶೌಚಾಲಯ ನಿರಂತರವಾಗಿ ಬೀಗ ಹಾಕಿರುತ್ತದೆ. ವಿದ್ಯಾರ್ಥಿಗಳು ಬಯಲಿನಲ್ಲಿಯೇ ಮೂತ್ರ ಮೂಸರ್ಜನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಅವಲತ್ತುಕೊಂಡರು.
‘ಪಾಲಕರು ಹಲವು ಬಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ಮುಖ್ಯ ಶಿಕ್ಷಕರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸೌಲಭ್ಯಗಳು ಮರೀಚಿಕೆಯಾಗುತ್ತಿವೆಯೇ ಹೊರತು ಅಭಿವೃದ್ಧಿ ಶೂನ್ಯವಾಗಿದೆ. ಶಾಲೆ ಅಭಿವೃದ್ಧಿ ಸಮಿತಿಯೂ ಈ ಕುರಿತು ಕ್ರಮ ವಹಿಸುತ್ತಿಲ್ಲ’ ಎಂದು ಜೈ ಕರ್ನಾಟಕ ಸಂಘಟನೆಯ ಗದಗ ತಾಲ್ಲೂಕು ಅಧ್ಯಕ್ಷ ಇಮಾಮಸಾಬ ಮಜ್ಜೂರ ಆರೋಪಿಸಿದರು.
ಗ್ರಾಮೀಣ ಭಾಗದ ಶಾಲೆ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರಕಬೇಕು. ಆದರೆ ಶಾಲೆ ಅಭಿವೃದ್ಧಿ ಅನುದಾನ ಇಲ್ಲಿ ಸದ್ಭಳಿಕೆ ಆಗುತ್ತಿಲ್ಲ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೌಲಭ್ಯ ಒದಗಿಸಲು ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಡಿಪಿಇಪಿ ಶಾಲೆ ನೂತನ ಕಟ್ಟಡ ಸಿದ್ದವಾಗಿದ್ದು ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸದ ಕಾರಣ ಇನ್ನೂ ಉದ್ಘಾಟನೆಯಾಗಿಲ್ಲ. ಹಳೇ ಕಟ್ಟಡ ದುರಸ್ತಿ ಮಾಡದ ಕಾರಣ ತೊಂದರೆ ಆಗುತ್ತಿದೆನೀಲವ್ವ ಮಾ.ಮಾದಣ್ಣವರ, ಎಸ್‌ಡಿಎಂಸಿ ಅಧ್ಯಕ್ಷರು ಡಿಪಿಇಪಿ ಶಾಲೆ ಸೊರಟೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.