
ಮುಂಡರಗಿ: ಸಾಂಪ್ರದಾಯಿಕ ಬೆಳೆ, ತೋಟಗಾರಿಕೆ, ಬೀಜೋತ್ಪಾದನೆ ಮೊದಲಾದ ಹಲವು ಕೃಷಿಯಾಧಾರಿತ ಕಾಯಕ ಮಾಡುತ್ತ ಲಕ್ಷಾಂತರ ರೂಪಾಯಿ ಆದಾಯ ಪಡೆದುಕೊಳ್ಳುತ್ತಿರುವ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಯುವ ರೈತ ಚಂದ್ರಶೇಖರ ಮಜ್ಜಿಗಿ ಅವರು ಯುವ ರೈತರಿಗೆ ಮಾದರಿಯಾಗಿದ್ದಾರೆ.
ಕೊರ್ಲಹಳ್ಳಿ ಗ್ರಾಮದ ತುಂಗಭದ್ರಾ ನದಿ ದಂಡೆಯಲ್ಲಿ ಫಲವತ್ತಾದ 40 ಎಕರೆ ಜಮೀನು ಹೊಂದಿರುವ ಚಂದ್ರಶೇಖರ ಅವರು ಅದರಲ್ಲಿ ವೈವಿಧ್ಯಮಯ ಬೆಳೆ ಬೆಳೆಯುತ್ತಾ ನಿರಂತರ ಆದಾಯ ಪಡೆದುಕೊಳ್ಳುತ್ತಿದ್ದಾರೆ.
ತರಕಾರಿ ಬೀಜೋತ್ಪಾದನೆಯಲ್ಲಿ ಅಪಾರ ಅನುಭವ ಹೊಂದಿರುವ ಚಂದ್ರಶೇಖರ ಮಜ್ಜಿಗಿ ಸಹೋದರರು ಹೀರೇಕಾಯಿ, ಕುಂಬಳ, ಹಾಗಲ, ಟೊಮೊಟೊ, ಸವತೆಕಾಯಿ, ಕಲ್ಲಂಗಡಿ ಮೊದಲಾದ ಬೀಜೋತ್ಪಾದನೆಯಲ್ಲಿ ಅಪಾರ ಆದಾಯ ಪಡೆದುಕೊಂಡಿದ್ದಾರೆ.
ಉತ್ಕೃಷ್ಟ ಹಾಗೂ ಉತ್ತಮ ಗುಣಮಟ್ಟದ ಬೀಜೋತ್ಪಾದನೆಗೆ ಹೆಸರುವಾಸಿಯಾಗಿರುವ ಚಂದ್ರಶೇಖರ ಮಜ್ಜಿಗಿ ಅವರು ಸ್ವಂತಕ್ಕೆ ಬೀಜ ವಿಂಗಡಣೆಯ ಘಟಕವನ್ನು ಹೊಂದಿದ್ದಾರೆ. ತಾವು ಬೆಳೆದ ವಿವಿಧ ತರಕಾರಿಗಳ ಬೀಜಗಳನ್ನು ದೂರದ ಕೋಲ್ಕತ್ತ, ಹರಿಯಾಣ, ತೆಲಂಗಾಣ ಮೊದಲಾದ ಹೊರ ರಾಜ್ಯಗಳಿಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಆದಾಯ ಪಡೆದುಕೊಳ್ಳುತ್ತಿದ್ದಾರೆ.
ಚಂದ್ರಶೇಖರ ಮಜ್ಜಿಗಿ ಅವರು ಕಳೆದ ಹಂಗಾಮಿನಲ್ಲಿ 30 ಎಕರೆ ಜಮೀನಿನಲ್ಲಿ 1,200 ಚೀಲ ಭತ್ತ ಬೆಳೆದಿದ್ದು, ಅದರಿಂದ ₹3 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಖರ್ಚು ಕಳೆದು ಅವರಿಗೆ ನಿವ್ವಳ ₹2 ಲಕ್ಷ ಉಳಿತಾಯವಾಗಿದೆ.
ತೋಟದ ಮನೆಯಲ್ಲಿ ಬೀಜ ಬೇರ್ಪಡಿಸುವ ಘಟಕ ಸ್ಥಾಪಿಸಿದ್ದು, ಅವರೇ ನಿರ್ವಹಿಸುತ್ತಿದ್ದಾರೆ. ವಾರಕ್ಕೊಂದು ಬಗೆಯ ಬೀಜ ಕೊಯ್ಲಿಗೆ ಬರುವಂತೆ ಯೋಜನಾ ಬದ್ಧವಾಗಿ ಬೆಳೆ ಬೆಳೆಯುತ್ತಿದ್ದಾರೆ. ಹೀಗಾಗಿ ಅವರ ಜಮೀನಿನಲ್ಲಿ ನಿರಂತರ ಬೀಜೋತ್ಪಾದನೆ ನಡೆಯುತ್ತಿರುತ್ತದೆ.
ಮಜ್ಜಿಗಿ ಅವರ ಕೃಷಿ ಸಾಧನೆಯನ್ನು ಪರಿಗಣಿಸಿ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳು ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಗಳು ಅವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿವೆ.
ಉತ್ತಮ ಗುಣಮಟ್ಟದ ಬೀಜಗಳಿಗೆ ಇಂದು ಭಾರಿ ಬೇಡಿಕೆಯಿದ್ದು ರೈತರು ಸಾಂಪ್ರದಾಯಿಕ ಬೆಳೆಯ ಜೊತೆಗೆ 10-20ಗುಂಟೆ ಜಮೀನಿನಲ್ಲಿ ಬೀಜೋತ್ಪಾದನೆ ಕೈಗೊಳ್ಳಬಹುದುಚಂದ್ರಶೇಖರ ಮಜ್ಜಿಗಿ ಯುವ ರೈತ ಕೊರ್ಲಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.