ADVERTISEMENT

ಮುಂಡರಗಿ: ಮೂಲಸೌಲಭ್ಯ ವಂಚಿತ ಕೇಂದ್ರ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:19 IST
Last Updated 4 ಆಗಸ್ಟ್ 2025, 5:19 IST
ಮುಂಡರಗಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣಲ್ಲಿ ಸಂಗ್ರಹವಾಗಿರುವ ಕಟ್ಟಡದ ತ್ಯಾಜ್ಯ
ಮುಂಡರಗಿ ಪಟ್ಟಣದ ಕೇಂದ್ರ ಬಸ್ ನಿಲ್ದಾಣಲ್ಲಿ ಸಂಗ್ರಹವಾಗಿರುವ ಕಟ್ಟಡದ ತ್ಯಾಜ್ಯ   

ಮುಂಡರಗಿ: ಪಟ್ಟಣದ ಹೊರವಲಯದಲ್ಲಿ ಸುಮಾರು ಐದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಕೇಂದ್ರ ಬಸ್ ನಿಲ್ದಾಣವು ಆಸನಗಳು, ಸೂಕ್ತ ಶೌಚಾಲಯ ಮೊದಲಾದ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ.

ಬಸ್ ನಿಲ್ದಾಣದ ಆವರಣದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಎರಡು ಪ್ರತ್ಯೇಕ ಶೌಚಾಲಯಗಳಿದ್ದು, ಅವುಗಳ ಸೂಕ್ತ ನಿರ್ವಹಣೆ ಇಲ್ಲವಾದ್ದರಿಂದ ಪ್ರಯಾಣಿಕರು ಹಾಗೂ ಕೇಂದ್ರ ಬಸ್ ನಿಲ್ದಾಣದ ಸಿಬ್ಬಂದಿ ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಿದೆ. ಬಸ್ ನಿಲ್ದಾಣದ ಆವರಣ ವಿಶಾಲವಾಗಿದ್ದು, ಎಲ್ಲರೂ ಶೌಚಕ್ಕೆ ಬಯಲಿಗೇ ತೆರಳುತ್ತಿದ್ದಾರೆ.

ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಶೌಚಾಲಯವಿದ್ದರೂ, ಅದನ್ನು ಸೂಕ್ತವಾಗಿ ನಿರ್ವಹಿಸದೆ ಇರುವುದರಿಂದ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸದಿರುವುದರಿಂದ ಬಹುತೇಕ ಮಹಿಳಾ ಪ್ರಯಾಣಿಕರು ಶೌಚಕ್ಕೆ ಬಸ್ ನಿಲ್ದಾಣದ ಆವರಣದಲ್ಲಿ ಬೆಳೆದಿರುವ ಗಿಡದ ಮರೆಯನ್ನು ಆಶ್ರಯಿಸಬೇಕಿದೆ. ಮಹಿಳಾ ಪ್ರಯಾಣಿಕರಿಗೆ ಇದು ಬಹುದೊಡ್ಡ ಸಮಸ್ಯೆಯಾಗಿದ್ದು, ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಕೇಂದ್ರ ಬಸ್ ನಿಲ್ದಾಣದ ಕಟ್ಟಡದಲ್ಲಿ ಮಹಿಳೆಯರಿಗಾಗಿ ಪತ್ಯೇಕ ಮಹಿಳಾ ವಿಶ್ರಾಂತಿಗೃಹ ಹಾಗೂ ಶಿಶುಪಾಲನಾ ಕೇಂದ್ರವಿದ್ದು, ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಅಲ್ಲಿಯೇ ಮಹಿಳೆಯರಿಗಾಗಿ ಸುಸಜ್ಜಿತ ಮಹಿಳಾ ಶೌಚಾಲಯ ನಿರ್ಮಿಸಬೇಕು’ ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ನಾಲ್ಕು ದಶಕಗಳ ಹಿಂದೆ ನಿರ್ಮಿಸಿರುವ ಬೃಹತ್ ಕೇಂದ್ರ ಬಸ್ ನಿಲ್ದಾಣದ ವಿಶಾಲವಾದ ಚಾವಣಿಯು ಶಿಥಿಲಾವಸ್ಥೆಯಲ್ಲಿದ್ದು ಅಲ್ಪಸ್ವಲ್ಪ ಮಳೆ ಬಂದರೂ ಭಾಗಶಃ ಚಾವಣಿಯಿಂದ ಮಳೆಯ ನೀರು ಸೋರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಆಶ್ರಯಕ್ಕೆ ಪರದಾಡಬೇಕಾಗುತ್ತದೆ. ಪ್ರಯಾಣಿಕರೆಲ್ಲ ಮಳೆಯ ನೀರಿನಲ್ಲಿ ನೆನೆದು ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಸಂತೆ ದಿನವಾದ ಸೋಮವಾರ ಹಾಗೂ ಮತ್ತಿತರ ಹಬ್ಬ, ಹರಿದಿನಗಳಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತದೆ. ಈಚೆಗೆ ಬಸ್ ನಿಲ್ದಾಣದಲ್ಲಿ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಅವು ಕೂಡ ಸಾಲದಾಗಿವೆ.

ಬಸ್ ನಿಲ್ದಾಣದ ಮುಂಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅಲ್ಲಿ ಅಧಿಕೃತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೀಗಾಗಿ ನಿಲ್ದಾಣದ ಮುಂಭಾಗವು ದ್ವಿಚಕ್ರ ವಾಹನಗಳಿಂದ ಭರ್ತಿಯಾಗಿರುತ್ತದೆ. ವಾಹನ ಸವಾರರು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ನಿಲ್ಲಿಸುವುದರಿಂದ ಬಸ್ ನಿಲ್ದಾಣದ ಒಳ ಹೋಗುವ ಹಾಗೂ ಹೊರ ಹೋಗುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತದೆ. ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ನಿರ್ವಹಿಸಲು ಗುತ್ತಿಗೆಗಾರರೊಬ್ಬರನ್ನು ನೇಮಿಸಲಾಗಿತ್ತು. ನಿರ್ವಹಣೆಯ ವೆಚ್ಚ ಸಾಲದೆಂದು ಅವರು ಪಾರ್ಕಿಂಗ್ ನಿರ್ವಹಣೆಯನ್ನು ಕೈಬಿಟ್ಟರು ಎಂದು ಹೇಳಲಾಗುತ್ತಿದೆ.

ಆವರಣ ಸದ್ಬಳಕೆಗೆ ನಿರಾಸಕ್ತಿ

ಕೇಂದ್ರ ಬಸ್ ನಿಲ್ದಾಣದ ಕೇಂದ್ರ ಕಟ್ಟಡ ಹಾಗೂ ಪ್ಲಾಟ್ ಫಾರ್ಮ್ ಹೊರತುಪಡಿಸಿ ಬಸ್ ನಿಲ್ದಾಣದ ಮುಂದೆ ಸಾಕಷ್ಟು ವಿಶಾಲವಾದ ಜಾಗ ಇದ್ದು, ಅದು ಗಿಡ, ಕಂಟಿಗಳಿಂದ ಆವೃತ್ತವಾಗಿದೆ. ಹೀಗಾಗಿ ಅದು ಪ್ರಯಾಣಿಕರ ಬಯಲು ಮೂತ್ರಾಲಯವಾಗಿ ಪರಿವರ್ತನೆಯಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಸ್ಥಳೀಯ ಪುರಸಭೆಯೊಂದಿಗೆ ಚರ್ಚಿಸಿ ಅಲ್ಲಿ ಒಂದು ಸುಂದರ ಕಿರು ಉದ್ಯಾನ ನಿರ್ಮಿಸಬಹುದಾಗಿದೆ. ಅಲ್ಲಿ ಉದ್ಯಾನ ನಿರ್ಮಾಣವಾದರೆ ಪ್ರಯಾಣಿಕರಿಗೆ ಅನುಕೂಲವಾಗುವುದರ ಜತೆಗೆ ಸ್ವಚ್ಛತೆಯನ್ನೂ ಸುಲಭವಾಗಿ ನಿರ್ವಹಿಸಬಹುದಾಗಿದೆ ಎಂಬುದು ಪ್ರಜ್ಞಾವಂತ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸೋರುತ್ತಿರುವ ಚಾವಣಿ

ಇಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು ನಾಲ್ಕು ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಅಂದಿನ ಹಾಗೂ ಇಂದಿನ ಜನಸಂಖ್ಯೆಗೆ ಭಾರಿ ವ್ಯತ್ಯಾಸವಿದೆ. ಇಂದು ಪ್ರಯಾಣಿಕರ ಒತ್ತಡ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ.

ಈಚೆಗೆ ಶಾಸಕರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದ ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ.

‘ಬಸ್ ನಿಲ್ದಾಣದ ಚಾವಣಿಗೆ ಶೀಟ್ ಹೊದಿಸುವುದು ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳೀಯ ಘಟಕ ವ್ಯವಸ್ಥಾಪಕ ಶೇಖರ್ ನಾಯಕ ತಿಳಿಸಿದ್ದಾರೆ.

ಯಾರು ಏನಂತಾರೆ?

ಮಹಿಳೆಯರಿಗಿರಲಿ ಪ್ರತ್ಯೇಕ ಶೌಚಾಲಯ

ಬಸ್ ನಿಲ್ದಾಣದಲ್ಲಿರುವ ಶೌಚಾಲಯವು ಗಬ್ಬೆದ್ದು ನಾರುತ್ತಿದ್ದು, ಮಹಿಳೆಯರು ಶೌಚಕ್ಕೆ ಪರದಾಡುವಂತಾಗಿದೆ. ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿಗೃಹದಲ್ಲಿಯೇ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಅಲ್ಲಿ ನೀರು, ಬೆಳಕು ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

- ಹನುಮವ್ವ ತಳಕಲ್ಲ, ಹಟ್ಟಿ ಗ್ರಾಮದ ಪ್ರಯಾಣಿಕರು

ಸ್ವಚ್ಛತೆಗೆ ಕ್ರಮವಹಿಸಿ

ಕೇಂದ್ರ ಬಸ್ ನಿಲ್ದಾಣದ ಸುತ್ತಲೂ ಚರಂಡಿಗಳನ್ನು ನಿರ್ಮಿಸಲಾಗಿದ್ದು, ನಿಯಮಿತವಾಗಿ ಅವುಗಳನ್ನು ಸ್ವಚ್ಛಗೊಳಿಸದೆ ಇರುವುದರಿಂದ ಅವೆಲ್ಲ ತುಂಬಿ, ಹೊಲಸು ನಾರುತ್ತಿವೆ. ಬಸ್ ನಿಲ್ದಾಣದವರಾಗಲಿ ಪುರಸಭೆಯವರಾಗಲಿ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಆ ಮೂಲಕ ಬಸ್ ನಿಲ್ದಾಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.

- ಬಸವರಾಜ ನರೇಗಲ್ಲ, ಕೇಂದ್ರ ಬಸ್ ನಿಲ್ದಾಣದ ಹೂವಾಡಿಗ, ಮುಂಡರಗಿ

ಗ್ರಾಮೀಣ ಬಸ್‌ ನಿಲ್ದಾಣ ಕಟ್ಟಿಸಿ

ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಇತ್ತೀಚೆಗೆ ತುಂಬಾ ಹೆಚ್ಚಾಗಿದ್ದು, ಬಸ್ ನಿಲ್ದಾಣದ ಮುಂದಿರುವ ಬಯಲಿನಲ್ಲಿ ಪ್ರತ್ಯೇಕವಾಗಿ ಗ್ರಾಮೀಣ ಬಸ್ ನಿಲ್ದಾಣ ನಿರ್ಮಿಸಬೇಕು. ಇದರಿಂದ ಪ್ರಯಾಣಿಕರ ಒತ್ತಡ ಕಡಿಮೆಯಾಗಲಿದ್ದು, ಮೂಲಸೌಲಭ್ಯ ಒದಗಿಸಲು ಹಾಗೂ ಬಸ್ ನಿಲ್ದಾಣವನ್ನು ಸೂಕ್ತವಾಗಿ ನಿರ್ವಹಿಸಲು ಅನಕೂಲವಾಗುತ್ತದೆ.

- ಮಂಜುನಾಥ ಮುಧೋಳ, ಯುವ ಮುಖಂಡ ಮುಂಡರಗಿ

ಹೆಚ್ಚು ಬಸ್‌ಗಳನ್ನು ಓಡಿಸಿ

ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೌಕರರ ಪ್ರಯಾಣದ ಕಾರಣದಿಂದಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ಒತ್ತಡ ವಿಪರೀತವಾಗಿರುತ್ತದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಸಮಯದಲ್ಲಿ ಪ್ರಮುಖ ಸ್ಥಳಗಳಿಗೆ ಹೆಚ್ಚು ಬಸ್‌ಗಳನ್ನು ಓಡಿಸಬೇಕು. ಪ್ರಯಾಣಿಕರು ಸಕಾಲದಲ್ಲಿ ತಮ್ಮ ಊರು ಸೇರಲು ಅನುಕೂಲ ಮಾಡಿಕೊಡಬೇಕು.

- ರವಿಗೌಡ ಪಾಟೀಲ, ಅತಿಥಿ ಶಿಕ್ಷಕ, ಮುಂಡರಗಿ

ಶೌಚಾಲಯ ನಿರ್ವಹಣೆ ಸರಿಯಾಗಿರಲಿ

ಕೇಂದ್ರ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದೆ ಇರುವುದರಿಂದ ಪ್ರಯಾಣಿಕರು ಅವುಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿರುವ ಶೌಚಾಲಯಗಳನ್ನು ಸೂಕ್ತವಾಗಿ ನಿರ್ವಹಿಸಿದರೆ ಪ್ರಯಾಣಿಕರು ಅವುಗಳನ್ನು ಸುಲಭವಾಗಿ ಬಳಸುತ್ತಾರೆ.

- ಜಯಶ್ರೀ ಹುಯಿಲಗೋಳ, ಸಾಮಾಜಿಕ ಕಾರ್ಯಕರ್ತೆ, ಮುಂಡರಗಿ

ಮುಂಡರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಎಲ್ಲೆಂದರಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳು
ಮುಂಡರಗಿಯ ಕೇಂದ್ರ ಬಸ್ ನಿಲ್ದಾಣದ ಕಟ್ಟಡದ ಮುಂದಿರುವ ವಿಶಾಲವಾದ ಆವರಣ ಗಿಡ ಕಂಟಿಗಳಿಂದ ಆವೃತ್ತವಾಗಿದೆ
ಕುಳಿತೊಕೊಳ್ಳಲೂ ಸಾಕಷ್ಟು ಅಸನಗಳಿಲ್ಲದ್ದರಿಂದ ಮುಂಡರಗಿ ಬಸ್ ನಿಲ್ದಾಣದಲ್ಲಿ ನಿಂತುಕೊಂಡಿರುವ ಪ್ರಯಾಣಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.