
ಮುಂಡರಗಿ: ಅನಿಯಮಿತವಾಗಿ ರೈತರ ಮೆಕ್ಕೆಜೋಳ ಖರೀದಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸದ್ಯ ಸರ್ಕಾರವು ಕೇವಲ ಆನ್‌ಲೈನ್ ನೋಂದಣಿ ಮಾಡಿಕೊಂಡಿರುವ ರೈತರ ಮೆಕ್ಕೆಜೋಳವನ್ನು ಮಾತ್ರ ಖರೀದಿಸುತ್ತಿದೆ. ನೋಂದಣಿಗೆ ಕಡಿಮೆ ಕಾಲಾವಕಾಶ ನೀಡಿದೆ. ಇದರಿಂದ ಎಲ್ಲ ರೈತರಿಗೂ ಮೆಕ್ಕೆಜೋಳ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನೋಂದಣಿ ಕಾಲಾವಕಾಶವನ್ನು ವಿಸ್ತರಿಸಬೇಕು ಅಥವಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ರೈತರ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹600-800 ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಪವನ ವಿದ್ಯುತ್ ಘಟಕಗಳು ಯಥೇಚ್ಛವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಪವನ ಘಟಕ ಸ್ಥಾಪನೆಗೆ ಭಾರಿ ತೂಕದ ವಾಹನಗಳನ್ನು ಬಳಸುತ್ತಿದ್ದು, ವಾಹನಗಳಿಂದ ರಸ್ತೆಗಳೆಲ್ಲ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಪವನ ವಿದ್ಯುತ್ ಘಟಕಗಳ ಮಾಲೀಕರು ತಕ್ಷಣ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ಸೌರ ಹಾಗೂ ಪವನ ವಿದ್ಯುತ್ ಕಂಪನಿಯ ಅಧಿಕಾರಿಗಳು ರೈತರ ಜಮೀನುಗಳಲ್ಲಿ ಮನ ಬಂದಂತೆ ವಿದ್ಯುತ್ ಕಂಬಗಳನ್ನು ಹಾಕುತ್ತಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಮೋಸದಿಂದ ರೈತರಿಂದ ಕರಾರು ಪತ್ರಗಳಿಗೆ ಸಹಿ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ತಹಶೀಲ್ದಾರರು ರೈತರು ಹಾಗೂ ಪವನ ವಿದ್ಯುತ್ ಕಂಪನಿಗಳ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರಿಗೆ ಒಕ್ಕಲು ಮಾಡಿಕೊಳ್ಳಲು ಪ್ರತಿ ಗ್ರಾಮದಲ್ಲಿ ಮೂರ್ನಾಲ್ಕು ಎಕರೆ ಜಮೀನಿನಲ್ಲಿ ಸರ್ಕಾರ ಖಣ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
2026ನೇ ಸಾಲಿನಲ್ಲಿ ಮುಂಗಾರು ಬಿತ್ತನೆಗೆ ರೋಗ ನಿರೋಧಕ ಶಕ್ತಿಯಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಬೇಕು. ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.
ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಶಿವಾನಂದ ಇಟಗಿ, ಚಂದ್ರಪ್ಪ ಬಳ್ಳಾರಿ, ಅಶೋಕಪ್ಪ ಬನ್ನಿಕೊಪ್ಪ, ಹುಚ್ಚಪ್ಪ ಹಂದ್ರಾಳ, ರಾಘವೇಂದ್ರ ಕುರಿ, ಶರಣಪ್ಪ ಕಂಬಳಿ, ಭೀಮೇಶ ಬಂಡಿವಡ್ಡರ, ತಿಮ್ಮಣ್ಣ ಉಪ್ಪಾರ, ಸುವರ್ಣಾ ನೋಟಗಾರ, ಉಮೇಶ ಮತ್ತುಪುರ, ಶೇಖಪ್ಪ ಹಟ್ಟಿ, ದೇವಪ್ಪ ಕೋವಿ, ಮಂಜುನಾಥ ಹುಲಗೋಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.