ADVERTISEMENT

ಮುಂಡರಗಿಗೆ ಬೇಕಿದೆ ವೃತ್ತಿಯಾಧಾರಿತ ಕಾಲೇಜು

ಎಂಜಿನಿಯರಿಂಗ್‌, ಡಿಪ್ಲೊಮಾ ಕಾಲೇಜುಗಳನ್ನು ತೆರೆಯುವಂತೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:48 IST
Last Updated 16 ಡಿಸೆಂಬರ್ 2025, 2:48 IST
ವೃತ್ತಿಯಾಧಾರಿತ ಸರ್ಕಾರಿ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿ ಈಚೆಗೆ ಸರ್ಕಾರಿ ವೃತ್ತಿಯಾಧಾರಿತ ಕಾಲೇಜು ಹೋರಾಟ ಸಮಿತಿ ಕಾರ್ಯಕರ್ತರು ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ವೃತ್ತಿಯಾಧಾರಿತ ಸರ್ಕಾರಿ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿ ಈಚೆಗೆ ಸರ್ಕಾರಿ ವೃತ್ತಿಯಾಧಾರಿತ ಕಾಲೇಜು ಹೋರಾಟ ಸಮಿತಿ ಕಾರ್ಯಕರ್ತರು ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಮುಂಡರಗಿ: ಮುಂಡರಗಿಯು ಹಿಂದುಳಿದ ತಾಲ್ಲೂಕಾಗಿದ್ದು, ಹಲವು ಅಗತ್ಯ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡಿದೆ.

ಕೌಶಲ್ಯ ಹಾಗೂ ವೃತ್ತಿಯಾಧಾರಿತ ಶಿಕ್ಷಣವು ಇಂದಿನ ಅಗತ್ಯವಾಗಿದ್ದು, ತಾಲ್ಲೂಕಿನಲ್ಲಿ ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್  ಮೊದಲಾದ ವೃತ್ತಿಯಾಧಾರಿತ ಕಾಲೇಜುಗಳು ಇಲ್ಲವಾದ್ದರಿಂದ, ಬಡ ವಿದ್ಯಾರ್ಥಿಗಳು ಅಂತಹ ಶಿಕ್ಷಣ ಪಡೆದುಕೊಳ್ಳಲು ದೂರದಲ್ಲಿರುವ ಕಾಲೇಜುಗಳಿಗೆ ತೆರಳಬೇಕಿದೆ. ಸರ್ಕಾರ ಪಟ್ಟಣದಲ್ಲಿಯೇ ವೃತ್ತಿಯಾಧಾರಿಕ ಕಾಲೇಜುಗಳನ್ನು ತೆರೆಯಬೇಕು ಎನ್ನುವುದು ಪಾಲಕರ ಬಹುದಿನಗಳ ಒತ್ತಾಸೆ ಇನ್ನೂ ಈಡೇರಿಲ್ಲ.

ಪಟ್ಟಣವು ಸೇರಿದಂತೆ ತಾಲ್ಲೂಕಿನಾದ್ಯಂತ ಹಲವಾರು ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳಿವೆ. ಪ್ರತಿ ವರ್ಷ ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ಎಸ್‌ಎಸ್‌ಎಸ್‌ಸಿ ಹಾಗೂ ಪಿಯುಸಿ ವ್ಯಾಸಂಗ ಪೂರ್ಣಗೊಳಿಸುತ್ತಿದ್ದಾರೆ.

ADVERTISEMENT

ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಹಾಗೂ ವೃತ್ತಿಪರ ವ್ಯಾಸಂಗ ಪೂರೈಸಿದರೆ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಸುಲಭವಾಗಿ ಉದ್ಯೋಗ ದೊರೆಯುತ್ತದೆ. ಉದ್ಯೋಗ ದೊರೆಯದಿದ್ದರೂ ಸ್ವಯಂ ಉದ್ಯೋಗ ಕೈಗೊಳ್ಳಲು ಆ ಶಿಕ್ಷಣ ನೆರವಾಗುತ್ತದೆ. ಆದ್ದರಿಂದ ಪಟ್ಟಣದಲ್ಲಿ ವೃತ್ತಿಯಾಧಾರಿಕ ಕಾಲೇಜುಗಳನ್ನು ತೆರೆಯಲು ಸರ್ಕಾರ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿದ್ದು, ಕೃಷಿಕರು ತಮ್ಮ ಮಕ್ಕಳ ಪ್ರೌಢಶಿಕ್ಷಣದ ನಂತರ ಸ್ಥಳೀಯವಾಗಿ ದೊರೆಯುವ ಪಿಯು ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸೇರಿದಂತೆ ಅಲ್ಲೊಂದು ಇಲ್ಲೊಂದು ಸಣ್ಣ, ಪುಟ್ಟ ಕೈಗಾರಿಕಾ ಘಟಕಗಳಿದ್ದು, ಅಲ್ಲಿ ವೃತ್ತಿ ಅಥವಾ ಕೌಶಲ್ಯ ತರಬೇತಿ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಇಲ್ಲಿಯ ಬಹುತೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ.

ಬಡ ಮಕ್ಕಳಿಗೆ ಇಲ್ಲಿ ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ನಂತಹ ಕೌಶಲ್ಯಾಧಾರಿತ ಕಾಲೇಜುಗಳು ಇಲ್ಲವಾದ್ದರಿಂದ ಅವರು ದೂರದ ಪಟ್ಟಣಗಳಿಗೆ ತೆರಳಬೇಕಿದೆ. ಸರ್ಕಾರ ಬರುವ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದಲ್ಲಿ ವೃತ್ತಿಯಾಧಾರಿತ ಕಾಲೇಜುಗಳನ್ನು ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಬಡ ಮಕ್ಕಳು ವೃತ್ತಿಯಾಧಾರಿತ ಶಿಕ್ಷಣದಿಂದ ವಂಚಿತವಾಗಿದ್ದು ಆಸಕ್ತ ವಿದ್ಯಾರ್ಥಿಗಳ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಸರ್ಕಾರ ತಕ್ಷಣವೇ ಪಟ್ಟಣದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು

-ದೇವಪ್ಪ ಇಟಗಿ ಅಧ್ಯಕ್ಷ ಸರ್ಕಾರಿ ವೃತ್ತಿಯಾಧಾರಿತ ಕಾಲೇಜು ಹೋರಾಟ ಸಮಿತಿ

ಮುಂಡರಗಿಯಲ್ಲಿ ವೃತ್ತಿಯಾಧಾರಿತ ಕಾಲೇಜು ಆರಂಭಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು.

- ಡಾ.ಚಂದ್ರು ಲಮಾಣಿ ಶಾಸಕ

ಸ್ಥಳಾವಕಾಶಕ್ಕೆ ಕೊರತೆಯಿಲ್ಲ ಪಟ್ಟಣದಲ್ಲಿ ಮೂರು ಅಂತಸ್ತುಗಳನ್ನು ಒಳಗೊಂಡಿರುವ ಒಂದು ಸರ್ಕಾರಿ ಐಟಿಐ ಕಾಲೇಜಿದ್ದು ಅಲ್ಲಿ ತುಂಬಾ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಹಲವಾರು ಕೊಠಡಿಗಳು ಪ್ರಯೋಗಾಲಯಗಳು ವಿಶಾಲವಾದ ಮೈದಾನ ಮೊದಲಾದ ಅಗತ್ಯ ಸೌಲಭ್ಯಗಳಿವೆ. ಅದೇರೀತಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಆದರ್ಶ ವಿದ್ಯಾಲಯವು ಮೂರು ಅಂತಸ್ಥಿನ ಬೃಹತ್ ಕಟ್ಟಡವನ್ನು ಹೊಂದಿದ್ದು ಅಲ್ಲಿಯೂ ಸಾಕಷ್ಟು ಕೊಠಡಿಗಳು ಖಾಲಿ ಬಿದ್ದಿವೆ. ಸರ್ಕಾರ ಅಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.