ADVERTISEMENT

ಮುಂಡರಗಿ | ಶಿವಲಿಂಗ ಮೂರ್ತಿ ಭಗ್ನ: ದುಷ್ಕರ್ಮಿಗಳ ಬಂಧನಕ್ಕೆ ಶಾಸಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:40 IST
Last Updated 17 ಫೆಬ್ರುವರಿ 2026, 6:40 IST
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ರಾಮಲಿಂಗೇಶ್ವರ ದೇವಾಲಯಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು
ಮುಂಡರಗಿ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ರಾಮಲಿಂಗೇಶ್ವರ ದೇವಾಲಯಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು   

ಮುಂಡರಗಿ: ಮಹಾಶಿವರಾತ್ರಿಯಂದು  ಭಾನುವಾರ ದುಷ್ಕರ್ಮಿಗಳಿಂದ ಭಗ್ನಗೊಂಡಿದ್ದ ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ರಾಮಲಿಂಗೇಶ್ವರ ದೇವಾಲಯಕ್ಕೆ ಶಾಸಕ ಡಾ.ಚಂದ್ರು ಲಮಾಣಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಶಿವರಾತ್ರಿಯಂದೇ ದುಷ್ಕರ್ಮಿಗಳು ಪುರಾತನ ಕಾಲದ ಶಿವಲಿಂಗ, ನಂದಿ, ಹೊನ್ನತ್ತೆಮ್ಮ ಮೂರ್ತಿಗಳನ್ನು ಭಗ್ನಗೊಳಿಸಿರುವುದು ಹಿಂದುಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದೆ ಎಂದು ತಿಳಿಸಿದರು.

ಶಿಂಗಟಾಲೂರ ಗ್ರಾಮವು ಸೌಹಾರ್ದತೆಗೆ ಹೆಸರಾಗಿದ್ದು, ಇಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ದುಷ್ಕರ್ಮಿಗಳು ವಿಗ್ರಹ ಧ್ವಂಸದಂತಹ ಹೀನ ಕೃತ್ಯವೆಸಗಿದ್ದಾರೆ. ಅಂತಹ ದುಷ್ಟರನ್ನು ತ್ವರಿತವಾಗಿ ಬಂಧಿಸದಿದ್ದಲ್ಲಿ ನಾಡಿನಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅತಂಕ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಈ ಕುರಿತು ವಿಶೇಷ ಗಮನ ಹರಿಸಬೇಕು. ಭಗ್ನಗೊಂಡಿರುವ ವಿಗ್ರಹಳು ಹಾಗೂ ರಾಮಲಿಂಗೇಶ್ವರ ದೇವಾಲಯದ ಜಿರ್ಣೋದ್ಧಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸದಿದ್ದರೆ ನಾಡಿನಾದ್ಯಂತ ಇಂತಹ ಹೀನ ಕೃತ್ಯಗಳ ಮರುಕಳಿಸಲಿವೆ ಎಂದರು.

ಗ್ರಾಮ ಪಮಚಾಯಿತಿ ಅಧ್ಯಕ್ಷ ಸುನೀಲ ನೀರಲಗಿ, ಮುಖಂಡರಾದ ಗುಡದೀರಯ್ಯ ನವಲಿಹಿರೆಮಠ, ಬಸವರಾಜ ಬಿಳಿಮಗ್ಗದ, ಪ್ರಶಾಂತ ಗುಡದಪ್ಪನವರ, ಆನಂದಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಹಣಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.