ಮುಂಡರಗಿ: ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿರುವ ಮುಂಡರಗಿ ಪಟ್ಟಣ ಹಾಗೂ ಕೆಲಸ ಕಾರ್ಯಗಳಿಗೆ ನಿತ್ಯ ಪಟ್ಟಣಕ್ಕೆ ಆಗಮಿಸುವ ಸಾವಿರಾರು ಜನರು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸೂಕ್ತ ಶೌಚಾಲಯಗಳಿಲ್ಲದೆ ನಿತ್ಯ ಪರದಾಡುತ್ತಿದ್ದಾರೆ.
ಮುಂಡರಗಿ ಪಟ್ಟಣ ಜಿಲ್ಲೆಯಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಶೌಚಾಲಯದಂತಹ ಮೂಲಸೌಕರ್ಯವಿಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪುರಸಭೆಯ ದಾಖಲೆಗಳ ಪ್ರಕಾರ ಪಟ್ಟಣದಲ್ಲಿ ಸ್ತ್ರೀ ಹಾಗೂ ಪುರುಷರಿಗಾಗಿ ಒಟ್ಟು 13 ಸಮುದಾಯ ಶೌಚಾಲಯ ಹಾಗೂ ಪುರುಷರಿಗಾಗಿ ಮೂರು ಮೂತ್ರಾಲಯಗಳಿವೆ. ಆದರೆ, ಬಹುತೇಕ ಶೌಚಾಲಯಗಳಿಗೆ ನೀರು, ವಿದ್ಯುತ್ ಮೊದಲಾದ ಅಗತ್ಯ ಸೌಲಭ್ಯಗಳಿಲ್ಲವಾದ್ದರಿಂದ ಕೆಲವು ಶೌಚಾಲಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಪಟ್ಟಣದ ಬೃಂದಾವನ ವೃತ್ತ, ಮುಖ್ಯ ಮಾರುಕಟ್ಟೆ ಹಾಗೂ ಅನ್ನದಾನೀಶ್ವರ ಕಾಲೇಜು ಬಳಿ ಮಾತ್ರ ಪುರುಷರ ಮೂತ್ರಾಲಯಗಳಿದ್ದು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಗಬ್ಬೆದ್ದು ನಾರುತ್ತಿವೆ. ಹಲವು ತಿಂಗಳಿಂದ ಪಟ್ಟಣದ ಮುಖ್ಯ ಮಾರುಕಟ್ಟೆಯ ಬಳಿ ಕೆಜಿಎಸ್ ಸರ್ಕಾರಿ ಶಾಲೆಯ ಆವರಣಗೋಡೆಗೆ ಅಂಟಿಕೊಂಡಂತೆ ಪುರುಷರ ಏಕೈಕ ಮೂತ್ರಾಲಯವಿದ್ದು, ಹಲವು ದಿನಗಳಿಂದ ಅದಕ್ಕೆ ಮುಳ್ಳು, ಕಂಟಿಗಳನ್ನು ಹಚ್ಚಿ ಅದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಯಾರು, ಯಾವ ಕಾರಣಕ್ಕೆ ಮುಳ್ಳು ಕಂಟಿಗಳನ್ನು ಹಚ್ಚಿದ್ದಾರೆ ಎನ್ನುವುದು ತಿಳಿಯದಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕೆಲವು ಶೌಚಾಲಯದೊಳಗಿನ ಕಲ್ಲುಗಳು ಒಡೆದು ಹೋಗಿದ್ದು, ಅಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಬೃಂದಾವನ ವೃತ್ತದಲ್ಲಿರುವ ಮೂತ್ರಾಲಯ ಹೊರತುಪಡಿಸಿ ಸಾರ್ವಜನಿಕರು ಅನಿವಾರ್ಯವಾಗಿ ಮೂತ್ರಾಲಯಗಳಲ್ಲಿ ಮೂಗು ಮುಚ್ಚಿಕೊಂಡು ಅಲ್ಲಿ ಮೂತ್ರ ಮಾಡಬೇಕಿದೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿರುವ ಮಹಿಳಾ ಸಮುದಾಯ ಶೌಚಾಲಯಗಳು ನೀರು, ವಿದ್ಯುತ್ ಮೊದಲಾದ ಮೂಲಸೌಲಭ್ಯಗಳಿಂದ ವಂಚಿತಗೊಂಡಿದ್ದು, ಮಹಿಳೆಯರು ಶೌಚಕ್ಕಾಗಿ ಪರದಾಡಬೇಕಿದೆ. ಬಹುತೇಕ ಶೌಚಾಲಯಗಳಿಗೆ ನೀರಿನ ಪೂರೈಕೆ ಇಲ್ಲವಾದ್ದರಿಂದ ಮಹಿಳೆಯರು ಮನೆಯಿಂದಲೇ ನೀರು ಕೊಂಡೊಯ್ಯಬೇಕಿದೆ. ಮನೆಯಿಂದ ಕೊಂಡೊಯ್ಯುವ ಸ್ವಲ್ಪ ನೀರಿನಿಂದ ಶೌಚಾಲಯ ಸ್ವಚ್ಛತೆ ಕಷ್ಟಸಾಧ್ಯವಾಗಿದ್ದು, ಈ ಕಾರಣಕ್ಕೆ ಶೌಚಾಲಯಗಳು ಗಬ್ಬೆದ್ದುನಾರುತ್ತಿವೆ.
ಸಮುದಾಯ ಶೌಚಾಲಯಗಳ ಸ್ವಚ್ಛತೆ ದೃಷ್ಟಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪಟ್ಟಣದ ಕೆಲವು ಮಹಿಳಾ ಸಮುದಾಯ ಶೌಚಾಲಯಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿತ್ತು. ಇಲ್ಲಿ ಶೌಚಕ್ಕೆ ತೆರಳುವ ಮಹಿಳೆಯರು ಹಣ ನೀಡಿ ಶೌಚಾಲಯ ಬಳಸಬೇಕಿತ್ತು. ಯೂಸ್ ಆ್ಯಂಡ್ ಪೇ ಪದ್ಧತಿಗೆ ಪಟ್ಟಣದ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ಕಾರಣದಿಂದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಗುತ್ತಿಗೆದಾರರು ಅದರಿಂದ ಹಿಂದೆ ಸರಿಯುವಂತಾಯಿತು.
ಪಟ್ಟಣದ ಕೋಟೆ ಭಾಗ, ಕಡ್ಲಿಪೇಟೆ, ಮಾಬುಸುಬಾನಿ ನಗರ, ಹೆಸರೂರು ಪ್ಲಾಟ್, ಎಸ್.ಎಸ್.ಪಾಟೀಲ ನಗರ, ಹುಡ್ಕೊ ಕಾಲೊನಿ, ಅಂಬೇಡ್ಕರ್ ನಗರ ಮೊದಲಾದ ಭಾಗಗಳಲ್ಲಿ ಸಾಮಾನ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಿಸುತ್ತಿದ್ದಾರೆ. ಅಲ್ಲಿ ಬಹುತೇಕರ ಮನೆಗಳಲ್ಲಿ ಖಾಸಗಿ ಶೌಚಾಲಯಗಳಿಲ್ಲದ ಕಾರಣ ಶೌಚಕ್ಕೆ ಸಮುದಾಯ ಶೌಚಾಲಯಗಳನ್ನೇ ಅವಲಂಬಿಸಿದ್ದಾರೆ. ಸಮುದಾಯ ಶೌಚಾಲಯಗಳಲ್ಲಿ ಮೂಲಸೌಲಭ್ಯ ಕೊರತೆಯಿಂದ ಅನಿವಾರ್ಯವಾಗಿ ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಿದೆ.
‘ಸಮುದಾಯ ಶೌಚಾಲಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ನೀರು, ಪೈಪ್ ಲೈನ್, ವಿದ್ಯುತ್ ಮೊದಲಾದ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆದರೆ ಕೆಲಕಾಲದ ನಂತರ ಕಿಡಿಗೇಡಿಗಳು ಅವುಗಳನ್ನು ನಾಶ ಮಾಡುತ್ತಾರೆ. ಹೀಗಾಗಿ ಸಮುದಾಯ ಶೌಚಾಲಯ ನಿರ್ವಹಣೆ ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಲಭ್ಯವಿರುವ ಸಿಬ್ಬಂದಿಯ ನೆರವಿನಿಂದ ಶೌಚಾಲಯ ನಿರ್ವಹಿಸಬೇಕಿದೆ’ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಶೌಚಾಲಯ ಧ್ವಂಸ: ಆಕ್ರೋಶ
ಮುಂಡರಗಿ ಪಟ್ಟಣದ 11ನೇ ವಾರ್ಡ್‌ನಲ್ಲಿ (ಜಗದ್ಗುರು ತೋಂಟದಾರ್ಯ ಶಾಖಾ ಮಠದ ಬಳಿ) ದಶಕಗಳಿಂದ ಸುಸಜ್ಜಿತ ಮಹಿಳಾ ಸಮುದಾಯ ಭವನ ಕಾರ್ಯನಿರ್ವಹಿಸುತ್ತಿತ್ತು. ಪಟ್ಟಣದ ಹಲವು ವಾರ್ಡ್‌ಗಳ ನೂರಾರು ಮಹಿಳೆಯರಿಗೆ ಶೌಚಾಲಯವು ತುಂಬಾ ಅನಕೂಲವಾಗಿತ್ತು. ಆದರೆ ಯಾರೋ ದುಷ್ಕರ್ಮಿಗಳು ಕಳೆದ ವರ್ಷ ಉದ್ದೇಶಪೂರ್ವಕವಾಗಿ ಶೌಚಾಲಯವನ್ನು ಜೆಸಿಬಿಯಿಂದ ಧ್ವಂಸಗೊಳಿಸಿದರು. ಈ ಕುರಿತು ಪುರಸಭೆಯವರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಶೌಚಾಲಯ ಧ್ವಂಸಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಲಿಯೇ ಪುನಃ ಮಹಿಳಾ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿ ವಿಶ್ವ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರೊಂದಿಗೆ ಅ.6ರಂದು ಪುರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದು ವಿಶ್ವ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಮಧುಮತಿ ಮಡಿವಾಳರ ತಿಳಿಸಿದ್ದಾರೆ.
ಸ್ಥಳ ಗುರುತು ಸವಾಲಿನ ಕೆಲಸ
ಪುರಸಭೆ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಆರು ನೂತನ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಹೇಳಲಾಗುತ್ತಿದ್ದು ನೂತನ ಶೌಚಾಲಯ ನಿರ್ಮಾಣಕ್ಕೆ ಪುರಸಭೆಯ ಅಧಿಕಾರಿಗಳು ಸ್ಥಳ ಗುರುತಿಸತೊಡಗಿದ್ದಾರೆ. ಪುರಸಭೆಯವರು ಗುರುತಿಸುತ್ತಿರುವ ಸ್ಥಳಕ್ಕೆ ಅಕ್ಕಪಕ್ಕದವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮನೆಯ ಹತ್ತಿರ ಸಾರ್ವಜನಿಕ ಶೌಚಾಲಯ ಬೇಡ ಎಂದು ಒತ್ತಾಯಿಸುತ್ತಾರೆ. ಹೀಗಾಗಿ ನೂತನ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸುವುದು ಕಷ್ಟಸಾಧ್ಯವಾಗಿದೆ ಎಂದು ಅಧಿಕಾರಿಗಳು ಅಲವತ್ತುಕೊಂಡಿದ್ದಾರೆ.
ಯಾರು ಏನಂತಾರೆ?
ಶೌಚಾಲಯ ದುರಸ್ತಿಗೆ ಕ್ರಮ
ಪಟ್ಟಣದ ಕಡ್ಲಿಪೇಟೆ ಹೆಸರೂರು ಪ್ಲಾಟ್ ಹಾಗೂ ಮತ್ತಿತರ ಭಾಗಗಳ ಮಹಿಳಾ ಸಮುದಾಯ ಶೌಚಾಲಯಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು ಹಂತ ಹಂತವಾಗಿ ಎಲ್ಲ ಶೌಚಾಲಯಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಪಟ್ಟಣದ ಪ್ರಮುಖ ಭಾಗಗಳಲ್ಲಿ ನೂತನ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ–ಶಂಕ ಸಮಸ್ಯೆ ಬಗೆಹರಿಸಲು ಪ್ರಯತ್ನರ ಹುಲ್ಲಮ್ಮನವರ ಪುರಸಭೆ ಮುಖ್ಯಾಧಿಕಾರಿ
ನೂತನ ಶೌಚಾಲಯ ನಿರ್ಮಾಣಕ್ಕೆ ಅನುದಾನದ ಕೊರತೆಯಿದ್ದು ತೆರಿಗೆಯ ಹಣದಲ್ಲಿ ಶೌಚಾಲಯಗಳನ್ನು ನಿರ್ವಹಿಸಬೇಕಾಗಿದೆ. ನಗರೋತ್ಥಾನ ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದ್ದು ಸಾಧ್ಯವಾದಷ್ಟು ಬೇಗನೆ ಪಟ್ಟಣದ ಶೌಚಾಲಯ ಸಮಸ್ಯೆಗಳನ್ನು ನಿವಾರಿಸಲಾಗುವುದು.–ನಾಗೇಶ ಹುಬ್ಬಳ್ಳಿ ಪುರಸಭೆ ಉಪಾಧ್ಯಕ್ಷ
ಶೌಚಾಲಯ ನಿರ್ಮಾಣಕ್ಕೆ ನಿರ್ಲಕ್ಷ್ಯ
ಪಟ್ಟಣದ 16ನೇ ವಾರ್ಡ್‌ನಲ್ಲಿರುವ ಶೌಚಾಲಯವು ಮೂಲಸೌಲಭ್ಯಗಳಿಂದ ವಂಚಿತಗೊಂಡಿದ್ದು ವಾರ್ಡ್‌ನ ಮಹಿಳೆಯರು ಶೌಚಾಲಯಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. 16ನೇ ವಾರ್ಡ್‌ಗೆ ನೂತನ ಮಹಿಳಾ ಶೌಚಾಲಯ ಮಂಜೂರಾಗಿದ್ದು ನಿರ್ಮಾಣಕ್ಕೆ ಪುರಸಭೆ ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ.–ರಾಜಾಭಕ್ಷಿ ಬೆಟಗೇರಿ ಪುರಸಭೆ 16ನೇ ವಾರ್ಡ್ ಸದಸ್ಯ
ಅಸರ್ಮಪಕ ನಿರ್ವಹಣೆ ಪಟ್ಟಣದಲ್ಲಿ ಬೆರಳೆಣಿಕೆಯಷ್ಟು ಶೌಚಾಲಯಗಳಿದ್ದು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೌಚಾಲಯವು ಮೂಲಭೂತ ಅಗತ್ಯವಾಗಿದ್ದು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನೂತನ ಶೌಚಾಲಯಗಳನ್ನು ನಿರ್ಮಿಸಬೇಕು–ಮಾಬುಸಿ ಶಬಾಯಿ ಕಾರ್ಮಿಕ ಮುಖಂಡ
ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಿ ಪಟ್ಟಣದ ಕೊಪ್ಪಳ ವೃತ್ತ ಗಾಂಧಿ ವೃತ್ತ ಜಾಗೃತ ವೃತ್ತ ಸರ್. ಸಿದ್ದಪ್ಪ ಕಂಬಳಿ ವೃತ್ತ ಕಿತ್ತೂರು ಚನ್ನಮ್ಮ ವೃತ್ತ ಕೇಂದ್ರ ಬಸ್ ನಿಲ್ದಾಣ ಮೊದಲಾದ ಭಾಗಗಳಲ್ಲಿ ಶೌಚಾಲಯಗಳಿಲ್ಲವಾದ್ದರಿಂದ ಸಾರ್ವಜನಿಕರು ಪರದಾಡಬೇಕಿದೆ. ಪುರಸಭೆಯವರು ತಕ್ಷಣ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಬೇಕು.–ಧ್ರುವಕುಮಾರ ಹೂಗಾರ ಅಧ್ಯಕ್ಷ ಕಿಸಾನ್ ಜಾಗೃತಿ ವಿಕಾಸ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.