ADVERTISEMENT

ಮುಂಡರಗಿ | ದುರಾಸೆಗಳಿಂದ ದೂರವಿರಿ: ತೋಂಟದ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:36 IST
Last Updated 6 ಫೆಬ್ರುವರಿ 2026, 6:36 IST
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವದ ರೊಟ್ಟಿ ಜಾತ್ರೆಗೆ ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ಚಾಲನೆ ನೀಡಿದರು
ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವದ ರೊಟ್ಟಿ ಜಾತ್ರೆಗೆ ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ಚಾಲನೆ ನೀಡಿದರು   

ಮುಂಡರಗಿ: ‘ದುರಾಸೆಯು ನಮ್ಮೆಲ್ಲರ ಅವನತಿಗೆ ಕಾರಣವಾಗಿದ್ದು, ನಾವೆಲ್ಲ ದುರಾಸೆಗಳಿಂದ ದೂರವಿರಬೇಕು. ದುರಾಸೆಗಳಿಂದ ದೂರಿವಿದ್ದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ’ ಎಂದು ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮದರ್ಧನಾರೀಶ್ವರರ 286ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಲಘು ರಥೋತ್ಸವ ಹಾಗೂ ಸುಪ್ರಸಿದ್ಧ ರೊಟ್ಟಿ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಾಮ ಮಾರ್ಗಗಳಿಂದ ಹಣ ಗಳಿಸಲು ಸಾಧ್ಯವಾದರೂ, ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾಯಕ ಮಾಡಿ ಗಳಿಸಿದ ಹಣ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ನಾವೆಲ್ಲ ನಿತ್ಯ ಸತ್ಯಶುದ್ಧ ಕಾಯಕ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ದುಡಿದ ಹಣವನ್ನು ತನ್ನೊಬ್ಬನ ಸ್ವಾರ್ಥಕ್ಕೆ ಬಳಸಿಕೊಳ್ಳದೆ, ದುಡಿದದ್ದರಲ್ಲಿ ದೀನರಿಗೆ, ಅಶಕ್ತರಿಗೆ, ದುರ್ಬಲರಿಗೆ, ಮಠ, ಮಾನ್ಯಗಳಿಗೆ, ಗುಡಿ, ಗುಂಡಾರಗಳಿಗೆ ನಿಡಬೇಕು. ಆ ಮೂಲಕ ಸಮಾಜದ ಋಣವನ್ನು ತೀರಿಸಬೇಕು’ ಎಂದು ಹೇಳಿದರು.

ಎಸ್.ಎಸ್.ಪಟ್ಟಣಶಟ್ಟರ, ಜಾತ್ರಾ ಕಮಿಟಿ ಮುಖಂಡರಾದ ಅದ್ಯಕ್ಷ ಎಲ್ಲಪ್ಪ ದಂಡಿನ, ಯಂಕಣ್ಣ ಗರಡಿ, ಬುಡ್ನೇಸಾಬ್ ಅತ್ತಾರ, ತಿಮ್ಮಪ್ಪ ವಡ್ಡರ, ಶಿವಪ್ಪ ಪ್ಯಾಟಿ, ಜಿ.ವಿ.ಹಿರೇಮಠ, ಸಿ.ಆರ್.ಹಿರೇಮಠ, ಮುದಿಯಪ್ಪ ಗದಗಿನ, ಗವಿಸಿದ್ದಪ್ಪ ಹಳ್ಳಾಕಾರ, ಮಲ್ಲಿಕಾರ್ಜುನ ಪ್ಯಾಟಿ, ರಾಘು ಹಡಪದ, ದುರಗಪ್ಪ ಹರಿಜನ, ರೇವಣಸಿದ್ದಪ್ಪ ಕರಿಗಾರ, ಬಸವರಾಜ ಹಮ್ಮಗಿ ಇದ್ದರು.

ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ಮಾತನಾಡಿದರು

ಗಮನ ಸೆಳೆದ ರೊಟ್ಟಿ ಜಾತ್ರೆ ರೊಟ್ಟಿ ಜಾತ್ರೆಯು ಡಂಬಳ ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿದ್ದು ಸಾವಿರಾರು ಭಕ್ತರು ಏಕಕಾಲದಲ್ಲಿ ರೊಟ್ಟಿಯೂಟದ ಸಹಭೋಜನ ಮಾಡುವುದು ಎಲ್ಲರ ಗಮನ ಸೆಳೆಯುತ್ತದೆ. ರೊಟ್ಟಿಜಾತ್ರೆಗಾಗಿ ಸುಮಾರು ಐದು ಸಾವಿರ ಬಿಳಿಜೋಳದ ಖಡಕ್ ರೊಟ್ಟಿಗಳನ್ನು ತಯಾರಿಸಲಾಗಿತ್ತು. ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ಸವತೆಕಾಯಿ ಬದನೆಕಾಯಿ ಗಜ್ಜರಿ ಹಸಿಮೆಣಸಿನಕಾಯಿ ಅಗಸಿ ಚಟ್ನಿ ಗುರೆಳ್ಳು ಚಟ್ನಿ ಮೊದಲಾದವುಗಳನ್ನು ಸೇರಿಸಿ ವಿಶೇಷವಾಗಿ ತಯಾರಿಸಲಾದ ಕರಿಹಿಂಡಿಯೊಂದಿಗೆ ಖಡಕ್ ರೊಟ್ಟಿಗಳನ್ನು ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.