ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ 30 ಗ್ರಾಮಗಳ ಜಮೀನುಗಳು ಅರೆನೀರಾವರಿ ಹಾಗೂ ಬಯಲು ಸೀಮೆಯಿಂದ ಕೂಡಿವೆ. ಶೇ 75ರಷ್ಟು ಜಮೀನುಗಳಲ್ಲಿ ಮಲಪ್ರಭಾ ನರಗುಂದ ಬ್ಲಾಕ್ ಕಾಲುವೆಯ ಹಂಚಿಕೆ, ಉಪಹಂಚಿಕೆ ಕಾಲುವೆ ನಿರ್ಮಿಸಲಾಗಿದೆ. ಆದರೆ, ಆ ಕಾಲುವೆಗಳನ್ನು ನೀರಾವರಿ ನಿಗಮ ನಿಯಮಿತವು (ನೀರಾವರಿ ಇಲಾಖೆ) ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಹೂಳು ತುಂಬಿಕೊಂಡು ಜಮೀನುಗಳಿಗೆ ನೀರು ಹರಿಯದಂತಾಗಿದೆ. ಇದರಿಂದಾಗಿ, ರೈತರು ತೀವ್ರ ತೊಂದರೆಯಾಗಿದೆ.
ಸವದತ್ತಿ ನವಿಲುತೀರ್ಥ ಜಲಾಶಯದ ನೀರನ್ನು ಜಮೀನುಗಳಿಗೆ ಹರಿಸಿ ಕೃಷಿಯನ್ನು ಬಲಪಡಿಸುವ ಸಲುವಾಗಿ ನರಗುಂದ ಬ್ಲಾಕ್ ಕಾಲುವೆಯನ್ನು ನಾಲ್ಕು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. 1,200 ಕಿ.ಮೀ. ಉದ್ದವಿರುವ ಈ ಕಾಲುವೆ ಮುಖ್ಯ, ಉಪ ಮುಖ್ಯ ಕಾಲುವೆಗಳನ್ನು ಒಳಗೊಂಡಿದೆ. ಸವದತ್ತಿ, ನರಗುಂದ, ರೋಣ ತಾಲ್ಲೂಕಿನವರೆಗೂ ಇದರ ವ್ಯಾಪ್ತಿ ಇದೆ. ಆದರೆ ಹೆಚ್ಚಿನ ಪ್ರಮಾಣ ನರಗುಂದ ತಾಲ್ಲೂಕಿನಲ್ಲಿದೆ.
ನಾಲ್ಕು ದಶಕಗಳಿಂದ ಹಾಳಾದ ಕಾಲುವೆಗೆ ಅಲ್ಪಸ್ವಲ್ಪ ಕಾಮಗಾರಿ ನಡೆಸಿದ್ದು ಬಿಟ್ಟರೆ ಆ ಕಾಲುವೆಗಳು ಪುನರ್ ನಿರ್ಮಾಣಗೊಂಡಿಲ್ಲ. ಇದರಿಂದಾಗಿ ಹಂಚಿಕೆ, ಉಪಹಂಚಿಕೆ ಕಾಲುವೆಗಳು ನಿರ್ವಹಣೆ ಇಲ್ಲದೇ ನೀರು ಹರಿಯದಂತಾಗಿದೆ. ಹಾಗಾಗಿ, ಇದು ಹೆಸರಿಗಷ್ಟೇ ನೀರಾವರಿ; ನೀರು ಮಾತ್ರ ಹರಿಯುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈಗ ಹಿಂಗಾರು ಬಿತ್ತನೆ ನಡೆದಿದೆ. ಎರಡು ವಾರ ಕಳೆದರೆ ಬೆಳೆಗಳಿಗೆ ನೀರು ಬೇಕಾಗುತ್ತದೆ. ಆದರೆ, ನೀರು ಹರಿಯಬೇಕಾದ ಕಾಲುವೆಗಳ ಸ್ಥಿತಿ ಮಾತ್ರ ಇನ್ನೂ ಅಯೋಮಯವಾಗಿದೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸವದತ್ತಿ ಬಳಿಯ ಮಲಪ್ರಭಾ ನದಿಗೆ ಕಟ್ಟಲಾಗಿರುವ ನವಿಲುತೀರ್ಥ ಜಲಾಶಯವೇ ತಾಲ್ಲೂಕಿನ ಜಮೀನುಗಳಿಗೆ ಆಧಾರ. ಆದರೆ ಇಲ್ಲಿ ಸಂಗ್ರಹವಾಗುವ ನೀರಿನ ಸಾಮರ್ಥ್ಯ ಕಡಿಮೆ. ಇಲ್ಲಿಂದಲೇ ನಗರ ಮತ್ತು ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತದೆ. ಇದರಿಂದ ಮುಂಗಾರು ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುವುದಿಲ್ಲ. ಜತೆಗೆ ಮುಂಗಾರು ಹಂಗಾಮಿನಲ್ಲಿ ಮಳೆ ಆಗುವುದರಿಂದ ನೀರಿನ ಅವಶ್ಯಕತೆ ಅಷ್ಟಕ್ಕಷ್ಟೆ.
ಕಾಲುವೆಗೆ ನೀರು ಹರಿಸಿದರೆ ಹಿಂಗಾರು ಹಂಗಾಮಿಗೆ ನೀರು ಇರುವುದಿಲ್ಲ. ಆದ್ದರಿಂದ ಹಿಂಗಾರು ಹಂಗಾಮಿನಲ್ಲಿ ಬೆಳೆಯುವ ಕಡಲೆ, ಗೋಧಿ, ಸೂರ್ಯಕಾಂತಿ, ಗೋವಿನಜೋಳ ಬೆಳೆಗಳಿಗೆ ನೀರು ಬೇಕು. ನೀರಾವರಿ ಇಲಾಖೆ ಡಿಸೆಂಬರ್ ಸುಮಾರಿಗೆ ರೈತರ ಬೇಡಿಕೆಗೆ ಅನುಗುಣವಾಗಿ ಕಾಲುವೆಗಳಿಗೆ ನವಿಲುತೀರ್ಥ ಜಲಾಶಯದಿಂದ 640 ಕ್ಯುಸೆಕ್ ನೀರು ಹರಿಸುತ್ತದೆ. ಆದರೆ ಆ ಕಾಲುವೆಗಳು ಸರಿಯಾಗಿ ನಿರ್ವಹಣೆಯಾಗದೇ ನೀರು ಸರಾಗವಾಗಿ ಹರಿಯದಂತಾಗಿದೆ. ಮುಖ್ಯ ಕಾಲುವೆ ಸಮೀಪದ ಆರಂಭದ ಜಮೀನುಗಳಿಗೆ ಮಾತ್ರ ನೀರು ಹರಿಯುತ್ತದೆ. ಆದರಿಂದ ಮುಂದಕ್ಕೆ ನೀರು ಸರಾಗವಾಗಿ ಹರಿಯುವುದಿಲ್ಲ.
ಪ್ರತಿ ವರ್ಷ ಕಾಲುವೆಗಳನ್ನು ಸ್ವಚ್ಛಗೊಳಿಸಿ, ಮುಳ್ಳು ಕಂಟಿ ಹಾಗೂ ಹೂಳು ತೆಗೆಯಬೇಕು. ಆದರೆ ಈ ಪ್ರಕ್ರಿಯೆ ಪ್ರತಿವರ್ಷ ಸಮರ್ಪಕವಾಗಿ ನಡೆಯದ ಕಾರಣ ಸುರಕೋಡ, ಹದ್ಲಿ ಗ್ರಾಮಗಳು ಸೇರಿದಂತೆ ಕೆಳಹಂತದ ಕಾಲುವೆಗಳ ರೈತರ ಜಮೀನುಗಳಿಗಂತೂ ನೀರು ಹರಿಯದೇ ಬೆಳೆಗಳು ಒಣಗುವುದು ಸಾಮಾನ್ಯವಾಗಿದೆ.
‘ಡಿಸೆಂಬರ್ ಕಾಲುವೆಗೆ ನೀರು ಬಿಡುವ ಸಮಯ. ಆದರೆ, ಇರುವ ಅನುದಾನದಲ್ಲಿ ನವೆಂಬರ್ ಕೊನೆಯಲ್ಲಿ ಕಾಲುವೆ ಸ್ವಚ್ಛತೆಗೆ ಮುಂದಾಗುವ ಇಲಾಖೆ ತರಾತುರಿಯಲ್ಲಿ ಕೆಲಸ ಮುಗಿಸುತ್ತದೆ. ಇದರಿಂದ ಕೆಲವು ಕಾಲುವೆಗಳು ಸ್ವಚ್ಛಗೊಂಡರೆ, ಕೆಲವು ನೆಪಕ್ಕೆ ಮಾತ್ರ ಸ್ವಚ್ಛಗೊಂಡಂತೆ ಕಾಣುತ್ತವೆ. ಈ ವ್ಯವಸ್ಥೆ ಸರಿಪಡಿಸಿ ನೀರು ಹರಿಸುವುದು ಯಾವಾಗ?’ ಎಂದು ರೈತರು ನೀರಾವರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನೀರಾವರಿ ಇಲಾಖೆಯವರು ಒಂದು ತಿಂಗಳು ಮುಂಚಿತವಾಗಿಯೇ ಕಾಲುವೆಗಳ ನಿರ್ವಹಣೆ ಕಾಮಗಾರಿ ಆರಂಭಿಸಿ, ನೀರು ಹರಿಸುವ ವೇಳೆಗೆ ಕೆಲಸ ಮುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘1,200 ಕಿ.ಮೀ. ವ್ಯಾಪ್ತಿಯ ಕಾಲುವೆಗಳ ನಿರ್ವಹಣೆಗೆ ಪ್ರತಿ ವರ್ಷ ₹50 ಲಕ್ಷ ಬಿಡುಗಡೆಯಾಗುತ್ತದೆ. ಆದರೆ, ಅದು ಸಾಲದು’ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಕಾಲುವೆ ನಿರ್ವಹಣೆ, ಸ್ವಚ್ಛತೆ ಕಾಮಗಾರಿ ಇನ್ನೂ ಆರಂಭಗೊಳ್ಳದೇ ಇರುವುದು ಒಂದೆಡೆಯಾದರೆ; ಅದರ ಉಸ್ತುವಾರಿ ಮಾಡಬೇಕಾದ ಪಟ್ಟಣದ ನರಗುಂದ ಬ್ಲಾಕ್ ನೀರಾವರಿ ಕಚೇರಿಯಲ್ಲಿ ಎಂಜಿನಿಯರ್‌ಗಳು ಸೇರಿದಂತೆ 40ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಇಲ್ಲಿ ಕಿರಿಯ ಎಂಜಿನಿಯರ್‌ಗಳು ಇಲ್ಲವೇ ಇಲ್ಲ. ಇದರಿಂದ ಕಾಲುವೆಗಳ ವೀಕ್ಷಣೆಗೆ ಇರುವ ಒಬ್ಬರೇ ಕಾರ್ಯನಿರ್ವಾಹಕ ಎಂಜಿನಿಯರ್ ತೆರಳಬೇಕು. ಇಬ್ಬರು ಪ್ರಭಾರ ಎಂಜಿನಿಯರ್ ಇದ್ದಾರೆ. ಆದರೆ, ಎರಡು ಕಡೆ ಕೆಲಸ ಮಾಡಬೇಕಾಗಿದ್ದು, ಎಲ್ಲಿಯೂ ಕೆಲಸ ಮಾತ್ರ ಆಗುತ್ತಿಲ್ಲ. ಇದರಿಂದ ತಾಲ್ಲೂಕಿನಲ್ಲಿ ನೀರಾವರಿ ಇಲಾಖೆ ಸಂಪೂರ್ಣ ಸೊರಗಿದಂತಾಗಿದ್ದು, ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ಹರಿಯುವುದು ಕನಸಿನ ಮಾತಾಗಿದೆ.
ತಾಲ್ಲೂಕಿನ ಬೆಣ್ಣೆ ಹಳ್ಳ ಹಾಗೂ ಕಾಲುವೆಗಳ ನೀರನ್ನು ತ್ವರಿತವಾಗಿ ಮೇಲೆತ್ತಿ ಜಮೀನುಗಳಿಗೆ ಹರಿಸಲು ವಿವಿಧ ಗ್ರಾಮಗಳಲ್ಲಿ 10 ಜಾಕ್‌ವೆಲ್ ನಿರ್ಮಿಸಲಾಗಿದೆ. ಆದರೆ, ಅವು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದ ರೈತರು ಹಿಂಗಾರು ಹಂಗಾಮಿನಲ್ಲಿ ತೊಂದರೆಗೆ ಒಳಗಾಗುವುದು ಸಾಮಾನ್ಯವಾಗಿದೆ.
ಈಚೆಗೆ ಸುರಿದ ಅತಿಯಾದ ಮಳೆಯಿಂದಾಗಿ ನೀರಾವರಿ ಕಾಲುವೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಹೂಳು ತುಂಬಿಕೊಂಡಿದೆ. ದಾರಿಗಳೂ ಹಾಳಾಗಿವೆ. ಈ ವರ್ಷ ನೀರಾವರಿ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಗಬೇಕಿದೆ ಎಂದು ರೈತರು ಒತ್ತಾಯಿಸಿದ್ದಾರೆ.
‘ನಿರ್ವಹಣೆ ಕೊರತೆಯಿಂದಾಗಿ ರೈತರಿಗೆ ನೀರಾವರಿ ಯೋಜನೆಯ ಫಲ ಸಿಗುತ್ತಿಲ್ಲ. ಆದಕಾರಣ, ಸರ್ಕಾರ ಕಾಲುವೆಗಳ ದುರಸ್ತಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಜತೆಗೆ ನೀರಾವರಿ ಇಲಾಖೆ ಈ ಬಗ್ಗೆ ಗಂಭೀರ ಕ್ರಮವಹಿಸಿ ನೀರು ಹರಿಸುವ ತಿಂಗಳ ಮುಂಚೆಯೇ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು’ ಎಂದು ಹದ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯವೇ ಕಾರಣ ಮಲಪ್ರಭಾ ಕಾಲುವೆಗಳು ಇದ್ದೂ ಇಲ್ಲದಂತಾಗಿವೆ. ಕಾಲುವೆಗಳ ಸರಿಯಾದ ನಿರ್ವಹಣೆ ಸ್ವಚ್ಛತೆ ಇಲ್ಲದ ಪರಿಣಾಮ ನವಿಲುತೀರ್ಥ ಜಲಾಶಯ ಭರ್ತಿಯಾದರೂ ಅದರ ನೀರು ನಮ್ಮ ಜಮೀನುಗಳಿಗೆ ಹರಿಯುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ. ನವೆಂಬರ್ ಒಳಗಾಗಿ ಸ್ವಚ್ಛತೆ ಮಾಡದಿದ್ದರೆ ರೈತರ ಹೋರಾಟ ಅನಿವಾರ್ಯಎಸ್.ಬಿ.ಜೋಗಣ್ಣವರ ರೈತ ಹೋರಾಟಗಾರ
ಮೊಂಡ ಸರ್ಕಾರ ಮೊಂಡ ಜನಪ್ರತಿನಿಧಿಗಳು. ಇದರಿಂದ ರೈತರ ಗೋಳು ಅವರಿಗೆ ಕೇಳದು. ಪ್ರತಿ ವರ್ಷ ಕೆಳಹಂತದ ಕಾಲುವೆಗಳಿಗೆ ನೀರು ಹರಿಯದೇ ಇರುವುದು ಸಾಮಾನ್ಯ. ಇದನ್ನು ಪರಿಹರಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರಕ್ಕೆ ಮತ್ತೊಮ್ಮೆ ರೈತ ಬಂಡಾಯ ಬೇಕಾದಂತೆ ಕಾಣುತ್ತಿದೆ.ವಿಜಯ ಕುಲಕರ್ಣಿ ರೈತ ಹೋರಾಟಗಾರ
ಹೋರಾಟವೇ ಎಲ್ಲದಕ್ಕೂ ಮದ್ದು ನೀರಾವರಿ ಕಾಲುವೆಗಳು ಸರಿಯಾಗಿ ನಿರ್ವಹಣೆಯಾಗದೇ ಎಲ್ಲ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದಕ್ಕಾಗಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಸಾಕಾರಗೊಳ್ಳುತ್ತಿಲ್ಲ. ಈ ವ್ಯವಸ್ಥೆ ನೋಡಿದರೆ ಪ್ರತಿಯೊಂದನ್ನೂ ಹೋರಾಟದ ಮೂಲಕ ಪಡೆಯಬೇಕಾಗಿದೆ.ಬಸವರಾಜ ಸಾಬಳೆ ರೈತ ಸಂಘದ ಮುಖಂಡ ನರಗುಂದ
ತೋರಿಕೆಗಾಗಿ ಕೆಲಸ ಗಡ್ಡಕ್ಕ ಬೆಂಕಿ ಹತ್ತಿದಾಗ ಬಾವಿ ತೋಡುವಂತೆ ನೀರಾವರಿ ಇಲಾಖೆ ಕಾಲುವೆಗೆ ನೀರು ಹರಿಸಲು ಕೆಲವೇ ದಿನಗಳು ಬಾಕಿ ಇದ್ದಾಗ ಹೂಳು ತೆಗೆಯಲು ಮುಂದಾಗುತ್ತದೆ. ಅದು ಸುಮ್ಮನೆ ತೋರಿಕೆಯಾಗಿ ಅಷ್ಟೇ. ಇದರಿಂದಾಗಿ ಕೆಳ ಹಂತದ ಕಾಲುವೆಗಳಿಗೆ ನೀರು ಹರಿಯುವುದೇ ಇಲ್ಲ.ಯಲ್ಲಪ್ಪ ಚಲುವಣ್ಣವರ ಕುರ್ಲಗೇರಿ
ಹೆಸರಿಗಷ್ಟೇ ನೀರಾವರಿ ಹೆಸರಿಗಷ್ಟೇ ನೀರಾವರಿ. ಆದರೆ ಕಾಲುವೆಯಲ್ಲಿ ನೀರು ಹರಿಯುವುದಿಲ್ಲ. ನೀರು ಬಿಟ್ಟರೂ ಜಮೀನುಗಳಿಗೆ ನೀರು ಸಿಗದಂತಾಗಿದೆ.ಎಂ.ಎಸ್.ಗೋಲಪ್ಪನವರ ಸುರಕೋಡ ರೈತರ ಜಮೀನಿಗೆ ನೀರು ಹರಿಸಿ ಮುಂಗಾರು ಅತಿವೃಷ್ಟಿ ಪ್ರವಾಹದಿಂದ ಹಾಳಾಗೇತಿ. ಉಳಿದಿರೋದು ಹಿಂಗಾರು ಬೆಳೆ ಮಾತ್ರ. ಅದಕರ ನೀರು ಸಿಗದಿದ್ದರೆ ನಮ್ಮ ಜೀವನ ಬೀದಿಗೆ ಬರತೈತಿ. ಇದನ್ನು ಅರಿತು ನೀರಾವರಿ ಇಲಾಖೆ ಎಲ್ಲ ರೈತರ ಜಮೀನುಗಳಿಗೆ ನೀರು ಹರಿಸಬೇಕು.ವಿಠಲ ಜಾಧವ ರೈತ ನರಗುಂದ
ನೀರು ತಲುಪಿಸಲು ಕ್ರಮ
‘1200 ಕಿ.ಮೀ. ಉದ್ದದ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿಗೆ ನೀರುಣಿಸುವ ಸಲುವಾಗಿ ನರಗುಂದ ಬ್ಲಾಕ್ ಕಾಲುವೆ ನಿರ್ಮಾಣಗೊಂಡಿದೆ. ಈ ಕಾಲುವೆಯ 6ರಿಂದ 26 ಹಂಚಿಕೆಗಳಲ್ಲಿ ತಾಲ್ಲೂಕಿನ ಕಾಲುವೆಗೆ ನೀರು ಹರಿಸಲಾಗುತ್ತದೆ’ ಎಂದು ನೀರಾವರಿ ಇಲಾಖೆಯ ನರಗುಂದ ವಿಭಾಗ ನಂ 1ರ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಕುರಿ ತಿಳಿಸಿದ್ದಾರೆ. ‘ಪ್ರತಿವರ್ಷ ಕಾಲುವೆಗಳ ಹೂಳು ತೆಗೆಯಲಾಗುತ್ತದೆ. ನವೆಂಬರ್ ಕೊನೆಗೆ ಕೆಲಸ ಆರಂಭವಾಗುತ್ತದೆ. ಡಿಸೆಂಬರ್ ಮಧ್ಯ ಭಾಗದಿಂದ ನಾಲ್ಕು ತಿಂಗಳವರೆಗೆ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಆದರೆ ನರಗುಂದದ ಮೂರು ವಿಭಾಗದ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಇದರ ನಡುವೆ ರೈತರ ಜಮೀನುಗಳಿಗೆ ನೀರು ಹರಿಸುವುದೇ ಒಂದು ದೊಡ್ಡ ಸವಾಲಾಗಿದೆ. ವಾರಕ್ಕೊಮ್ಮೆಯಾದರೂ ಎಲ್ಲ ಉಪ ಹಂಚಿಕೆ ಕಾಲುವೆಗಳಿಗೆ ನೀರು ತಲುಪಿಸಲು ಕ್ರಮವಹಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.