
ನರೇಗಲ್: ಮಕರ ಸಂಕ್ರಾಂತಿ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಹಿಳೆಯರು ಮರದ ಬಾಗಿನ ನೀಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಅಕ್ಕಿ, ಕಡಲೆ, ಗೋಧಿ ಹಿಟ್ಟು, ತುಪ್ಪ, ಬೆಣ್ಣೆ, ಮೊಸರು, ಕಾಯಿಪಲ್ಯೆ, ಕಡಲೆ ಗಿಡ, ಕಬ್ಬು, ಕೊಬ್ಬರಿ ಎಣ್ಣೆ, ಅಡುಗೆ ಎಣ್ಣೆ, ಕಡಲೆ ಹಿಟ್ಟು ಮುಂತಾದ ಖಾದ್ಯಗಳನ್ನು ಸೇರಿಸಿ ಮಹಿಳೆಯರಿಗೆ ಮರದ ಬಾಗಿನ ಅರ್ಪಿಸಿದರು.
ಮಹಿಳೆಯರು ಮರದ ಬಾಗಿನ ಅರ್ಪಿಸಿದ ನಂತರ ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುಗ್ಗಿ, ಗೊಜ್ಜು, ಸಜ್ಜೆ ರೊಟ್ಟಿ, ಅವರಿಕಾಯಿ ಪಲ್ಯೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯವಾಗಿ ಅರ್ಪಿಸಿದರು.
‘ಪೂರ್ವಜರು ದೇಹದ ಉಷ್ಣಾಂಶ ಸಮತೋಲನ ಕಾಪಾಡುವ ಉದ್ದೇಶದಿಂದ ಎಳ್ಳು ಮಿಶ್ರಿತ ಆಹಾರ ಪದ್ದತಿ ಅಳವಡಿಸಿಕೊಂಡಿದ್ದರು. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ’ ಎಂದು ನಿವೃತ್ತ ಶಿಕ್ಷಕ ಅರುಣ ಕುಲಕರ್ಣಿ ತಿಳಿಸಿದರು.
‘ಭೋಗಿ ಹಬ್ಬದ ಸುಗ್ಗಿಯಲ್ಲಿ ಹುಗ್ಗಿ’ ಎಂಬ ಮಾತು ಇಂದಿಗೂ ಗ್ರಾಮೀಣ ಭಾಗದಲ್ಲಿ ಚಾಲ್ತಿಯಲ್ಲಿದ್ದು, ಅದನ್ನು ಈಗಲೂ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.