ನರಗುಂದ: ‘ನನ್ನ ಐವತ್ತು ವರ್ಷಗಳ ಜೀವನದಲ್ಲಿ ಮುಂಗಾರು ಕೈಕೊಟ್ಟು, ಈ ರೀತಿ ರೈತರನ್ನು ತೊಂದರೆಗೆ ಈಡು ಮಾಡಿದ್ದನ್ನು ನೋಡಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಹಬ್ಬಗಳನ್ನು ನೆಪಕ್ಕೋಸ್ಕರ ಆಚರಿಸುವಂತಾಗಿದೆ’ ಎಂದು ಹೇಳುವ ಸುರಕೋಡದ ರೈತ ಶಿವಾನಂದ ಗೋಲಪ್ಪನವರ ಅವರ ಅಭಿಪ್ರಾಯ ತಾಲ್ಲೂಕಿನ ಎಲ್ಲ ರೈತರದ್ದೂ ಆಗಿದೆ.
ಮೂರು ದಿನಗಳ ಬೆಳಕಿನ ಹಬ್ಬದ ಸಂಭ್ರಮ ರೈತ ಸಮುದಾಯದಲ್ಲಿ ಕಾಣುತ್ತಿಲ್ಲ. ದೀಪಾವಳಿ ಹಬ್ಬವೆಂದರೆ ಎಲ್ಲರ ಮನೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳು ಕಾಣುತ್ತಿದ್ದವು. ಆದರೆ, ಈ ವರ್ಷ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ರೈತರು ಸಂಪ್ರದಾಯದಂತೆ ಆಚರಣೆಗೆ ಮುಂದಾಗಿದ್ದಾರೆ.
ಕೃಷಿಯನ್ನೇ ನಂಬಿದ ಈ ಭಾಗದ ರೈತರು ಉತ್ತಮ ಬೆಳೆ ಪಡೆಯಬೇಕೆಂದು ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ.ಹತ್ತಿ, ಈರುಳ್ಳಿ, ತೊಗರಿ, ಕಬ್ಬು ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಬೆಳೆ ಕಟಾವು ಹಂತಕ್ಕೂ ಬಂದಿತ್ತು. ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿ ಗೆ ಜಮೀನುಗಳಲ್ಲೇ ಬೆಳೆ ಹಾನಿಗೊಂಡು ಕೈಗೆ ಬಂದ ತುತ್ತು ಬಾಯಿಗೆ ಬರಲೇ ಇಲ್ಲ. ಇದರಿಂದ ಪ್ರಮುಖ ವಾಣಿಜ್ಯ ಬೆಳೆಗಳು ಕೈಗೆ ಸಿಗದೇ ಹಣವಿಲ್ಲದೇ ಹಬ್ಬ ಹೇಗೆ ಆಚರಿಸಬೇಕೆಂಬ ತೊಂದರೆಗೆ ಸಿಲುಕಿಕೊಂಡಿದ್ದಾರೆ.
ಅಳಿದುಳಿದ ಹೆಸರು ಕಾಳು ಮಾರಾಟಕ್ಕೆ ಇನ್ನೂ ಬೆಂಬಲ ಬೆಲೆ, ಖರೀದಿ ಕೇಂದ್ರ ಆರಂಭಿಸಿಲ್ಲ. ಬೆಳೆಹಾನಿ ಪರಿಹಾರವೂ ಸಿಕ್ಕಿಲ್ಲ. ಇದರಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ರೈತರು ಕತ್ತಲಲ್ಲಿ ಆಚರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳೆಹಾನಿಯಾಗಿ ತಿಂಗಳು ಗತಿಸಿದರೂ ಬೆಳೆವಿಮೆಯಾಗಲಿ, ಬೆಳೆಹಾನಿ ಪರಿಹಾರವಾಗಲಿ ಬಂದಿಲ್ಲ. ದೀಪಾವಳಿಗೆ ಅಗತ್ಯವಿರವ ಹೂವು, ಹಣ್ಣು, ಅಲಂಕಾರಿಕ ಸಾಮಗ್ರಿಗಳ ದರ ಗಗನಕ್ಕೇರಿದೆ. ಇದರಿಂದ ರೈತರ ಬಾಳು ಗೋಳಾಗಿದೆ. ಹಬ್ಬದ ಸಂಭ್ರಮ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದರಿಂದ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ವ್ಯಾಪಾರ ವಹಿವಾಟು ಕೂಡ ಕುಸಿದಿದೆ.
‘ರೈತರು ದೀಪಾವಳಿ ಹಬ್ಬದಲ್ಲಿ ಜಾನುವಾರುಗಳಿಗೆ ಮತ್ತು ವಾಹಗಳಗೆ ರಿಬ್ಬನ್, ಗೊಂಡೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಈ ಹಬ್ಬದಲ್ಲಿ ₹1ರಿಂದ ₹2 ಲಕ್ಷ ವ್ಯಾಪಾರ ಮಾಡುತ್ತಿದ್ದೆವು. ಆದರೆ, ಈ ವರ್ಷ ವ್ಯಾಪಾರವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ’ ಎಂದು ಗೊಂಡೆ ವ್ಯಾಪಾರಸ್ಥ ಸಲೀಂ ಅತ್ತಾರ ಹೇಳಿದರು.
ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಬೆಳೆಯಬೇಕೆಂಬ ಉದ್ದೇಶ ಹೊಂದಿದ್ದೆವು. ಆದರೆ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿ ಹಬ್ಬ ಆಚರಿಸಲು ಹಣವಿಲ್ಲದಂತಾಗಿದೆ.ಬೆಳೆಹಾನಿ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ ನಿಂಗಪ್ಪ ಹಾದಿಮನಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.