ADVERTISEMENT

ನರಗುಂದ: ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಬಸವರಾಜ ಹಲಕುರ್ಕಿ
Published 22 ಡಿಸೆಂಬರ್ 2025, 5:51 IST
Last Updated 22 ಡಿಸೆಂಬರ್ 2025, 5:51 IST
1871ರಿಂದಲೂ ಪುರಸಭೆ ಕಟ್ಟಡವಾಗಿದ್ದ ನರಗುಂದದ ಬಾಬಾಸಾಹೇಬರ ಅರಮನೆ
1871ರಿಂದಲೂ ಪುರಸಭೆ ಕಟ್ಟಡವಾಗಿದ್ದ ನರಗುಂದದ ಬಾಬಾಸಾಹೇಬರ ಅರಮನೆ   

ನರಗುಂದ: ಬಂಡಾಯದ ನೆಲ ಎಂದು ಕರೆಯಿಸಿಕೊಳ್ಳುವ ನರಗುಂದ ಪಟ್ಟಣವು ಅನೇಕ ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿ ನಿಂತಿದೆ.

ಬ್ರಿಟಿಷ್‌ ಸಾಮ್ರಾಜ್ಯದ ವಿರುದ್ಧ ಸಿಡಿದು ನಿಂತ ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ಅವರ ಬಂಡಾಯದಿಂದ ಆರಂಭವಾದ ಹೋರಾಟದ ಧಾರೆಯೇ, 1980ರ ನರಗುಂದ ರೈತ ಬಂಡಾಯಕ್ಕೂ, ಇಂದಿನ ಕಳಸಾ–ಬಂಡೂರಿ ಹಾಗೂ ಮಹದಾಯಿ ನೀರಿಗಾಗಿ ನಡೆಯುತ್ತಿರುವ ಹೋರಾಟಗಳಿಗೂ ಪ್ರೇರಣೆಯಾಗಿ ಮುಂದುವರಿದಿದೆ.

ಆದರೆ, ಬಂಡಾಯಕ್ಕೆ ಪ್ರೇರಣೆಯಾದ ನರಗುಂದದ ಭಾಸ್ಕರರಾವ್ ಭಾವೆ ಅವರು ನಿರ್ಮಿಸಿದ ಐತಿಹಾಸಿಕ ಅರಮನೆ, ಕೆಂಪಗಸಿ, ವೆಂಕಟೇಶ್ವರ ಗುಡಿ, ಮ್ಯಾನಸನ್‌ನ ಗೋರಿ, ಬೆಟ್ಟದ ಮೇಲಿನ ಪುಷ್ಕರಣಿ ಸೇರಿದಂತೆ ಕೋಟೆ, ದೇವಸ್ಥಾನಗಳಂತಹ ಐತಿಹಾಸಿಕ ಸ್ಮಾರಕಗಳು ಅವನತಿಯ ಅಂಚಿನಲ್ಲಿ ನಿಂತಿವೆ. ಮುಂದಿನ ಪೀಳಿಗೆಗೆ ಭಾವೆಯವರ ಬಂಡಾಯದ ಚರಿತ್ರೆ ತಿಳಿಯಬೇಕಿರುವುದು ಅವಶ್ಯ ಇರುವುದರಿಂದ ಅವುಗಳ ಸಂರಕ್ಷಣೆಗೆ ಜಿಲ್ಲಾಡಳಿತ ತ್ವರಿತವಾಗಿ ಮುಂದಾಗಬೇಕಿದೆ‌ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

ಅವನತಿಯತ್ತ ಇತಿಹಾಸ?

1858ರವರೆಗೂ ನರಗುಂದದಲ್ಲಿ ರಾಜ್ಯಭಾರ ನಡೆಸಿದ ಭಾಸ್ಕರರಾವ್ ಭಾವೆಯವರು, ಸ್ಥಳೀಯ ಕುತಂತ್ರದ ಪರಿಣಾಮ ನರಗುಂದ ತೊರೆದು ರಾಮದುರ್ಗದ ತೊರಗಲ್‌ನಲ್ಲಿ ಸೈನ್ಯ ಸಂಘಟನೆ ನಡೆಸುವ ಸಂದರ್ಭದಲ್ಲೇ ಬ್ರಿಟಿಷರ ಬಂಧನಕ್ಕೆ ಒಳಗಾದರು.

ಅವರು ಅರಮನೆಯಲ್ಲಿದ್ದು ಆಡಳಿತ ನಡೆಸಿದ ಆ ದಿನಗಳಿಗೆ ಸಾಕ್ಷಿಯಂತಿರುವ ಅರಮನೆ, ಕೆಂಪಗಸಿ, ವೆಂಕಟೇಶ್ವರ ದೇವಾಲಯ, ಮ್ಯಾನಸನ್‌ನ ಗೋರಿ, ಬೆಟ್ಟದ ಮೇಲಿನ ಪುಷ್ಕರಣಿ, ಕೋಟೆ ಹಾಗೂ ದೇವಸ್ಥಾನಗಳು ಇಂದು ಅವಸಾನದ ಅಂಚಿನಲ್ಲಿವೆ.  ಅವುಗಳ ಕಾಯಕಲ್ಪಕ್ಕೆ ಪುರಸಭೆ,ತಾಲ್ಲೂಕು ಆಡಳಿತ ಹಾಗೂ ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕಿದೆ.

ಕೀಲಿ ಹಾಕಿದ ಅರಮನೆ:

ನರಗುಂದ ಪಟ್ಟಣದ ಹೃದಯಭಾಗದಲ್ಲಿರುವ ಭಾವೆಯವರ ಅರಮನೆಯ ಅರ್ಧಭಾಗ 1871ರಿಂದಲೇ ಪುರಸಭೆಯಾಗಿ ಮಾರ್ಪಟ್ಟಿತ್ತು. 1943ರವರೆಗೆ ಅಂದಿನ ಬಾಂಬೆ ಸರ್ಕಾರಕ್ಕೆ ಬಾಡಿಗೆ ತುಂಬಲಾಗುತ್ತಿತ್ತು. 1943ರಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾದ ದಿ. ಎಫ್.ಎಂ.ಹಸಬಿಯವರು ₹4 ಸಾವಿರಕ್ಕೆ ಆ ಅರಮನೆ ಕಟ್ಟಡ ಖರೀದಿಸಿ ಪುರಸಭೆ ಸ್ವಾಯತ್ತತೆ ಸಾಧಿಸುವಂತೆ ಮಾಡಿದ್ದರು. ಅದರ ದಾಖಲೆ ಶಿಲಾಫಲಕದಲ್ಲಿ ಉಲ್ಲೇಖಿಸಲಾಗಿದೆ.

ಆದರೆ 2025ರ ಅಕ್ಟೋಬರ್‌ನಲ್ಲಿ ಪುರಸಭೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ, ಈ ಐತಿಹಾಸಿಕ ಅರಮನೆಗೆ ಕೀಲಿಹಾಕಲಾಗಿದೆ. ಒಳಗೆ ಭಾವೆಯವರ ಕಾಲದ ತೈಲವರ್ಣ ಚಿತ್ರಗಳು, ಖಡ್ಗಗಳು ಮತ್ತು ಅರಮನೆಯ ಹಳೆಯ ವಿನ್ಯಾಸ ಇನ್ನೂ ಉಳಿದಿದ್ದರೂ, ಅವುಗಳಿಗೆ ಕಾಳಜಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. 

ಆದ್ದರಿಂದ ಪುರಸಭೆಯಾಗಿದ್ದ ಅರಮನೆಯನ್ನುಭಾವೆಯವರ ಜೀವನ, ಬಂಡಾಯವನ್ನು ಪರಿಚಯಿಸುವ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇಲ್ಲವಾದರೆ, ಅರಮನೆ ಪಾಳು ಬಿದ್ದು ಹಾಳಾದರೂ ಆಶ್ಚರ್ಯವಿಲ್ಲ ಎಂದು ಇತಿಹಾಸಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. 

ಸಚಿವರ ಹೇಳಿಕೆ ಏನಾಯ್ತು?

ಪುರಸಭೆ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅರಮನೆಯನ್ನು ಯಥಾ ಸ್ಥಿತಿಯಾಗಿರಿಸಿ ಪ್ರಾಚ್ಯವಸ್ತು ಇಲಾಖೆ ಮೂಲಕ ವಸ್ತುಸಂಗ್ರಹಾಲಯ ಮಾಡುವುದಾಗಿ ಭರವಸೆ ನೀಡಿದ್ದರು. ಜತೆಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆದರೆ, ಒಂದು ತಿಂಗಳಾದರೂ ಯಾವುದೇ ಪ್ರಗತಿ ಕಾಣದಿರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿದೆ.

ನಡೆಯದ ಉತ್ಸವ: ಮರೆತ ಪುಣ್ಯಸ್ಮರಣೆ

ಪ್ರತಿ ವರ್ಷ ಜೂನ್ 12ರಂದು ಭಾಸ್ಕರರಾವ್ ಭಾವೆಯವರ ಪುಣ್ಯಸ್ಮರಣೆಯನ್ನು ‘ನರಗುಂದ ಉತ್ಸವ’ವಾಗಿ ಆಚರಿಸಬೇಕೆಂಬ ಸಾರ್ವಜನಿಕರ ಕನಸು ದಶಕಗಳಿಂದ ಕನಸಾಗಿಯೇ ಉಳಿದಿದೆ. ಸರ್ಕಾರಗಳ ಬದಲಾವಣೆ ನಡೆದರೂ, ಈ ಬೇಡಿಕೆ ಮಾತ್ರ ನಿರ್ಲಕ್ಷ್ಯಕ್ಕೊಳಗಾಗಿದೆ.

ಶಿಥಿಲಗೊಂಡ ವೆಂಕಟೇಶ್ವರ ದೇವಾಲಯ

ಭಾವೆಯವರ ಪೂರ್ವಜರು ತಿರುಪತಿ ಮಾದರಿಯಲ್ಲಿ ನಿರ್ಮಿಸಿದ ನರಗುಂದದ ವೆಂಕಟೇಶ್ವರ ದೇವಾಲಯವು ಒಮ್ಮೆ ನವರಾತ್ರಿ ದಸರಾ ವೈಭವಕ್ಕೆ ಹೆಸರಾಗಿತ್ತು. ಇಂದು ದೇವಾಲಯ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುವ ಸ್ಥಿತಿ ನಿರ್ಮಾಣವಾಗಿದೆ. ವೆಂಕಟೇಶ್ವರ ದೇವಾಲಯದ ಪಕ್ಕದಲ್ಲೇ ಇದ್ದ ಐತಿಹಾಸಿಕ ಆನೆ ಲಾಯದ ಕಟ್ಟಡ, ಕೋಣೆಗಳು ಖಾಸಗಿ ಶಾಲೆಯಾಗಿ ಮಾರ್ಪಟ್ಟಿವೆ. ಜತೆಗೆ ದೇವಸ್ಥಾನಕ್ಕೆ ಯಾವುದೇ ಆದಾಯವಿಲ್ಲದೇ ದೇವಸ್ಥಾನ ಸಮಿತಿಯವರು ಅದರ ನಿರ್ವಹಣೆಗೆ ತೊಂದರೆ ಪಡುವಂತಾಗಿದೆ.

ಈಚೆಗೆ ಸಚಿವ ಎಚ್. ಕೆ.ಪಾಟೀಲರು ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಕಾಯಕಲ್ಪದ ಭರವಸೆ ನೀಡಿದ್ದಾರೆ. ಆದರೆ, ಅದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮ್ಯಾನಸನ್ ಗೋರಿಗೆ ಬೇಕಿದೆ ಕಾಯಕಲ್ಪ:

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ನರಗುಂದ ಬಾಬಾಸಾಹೇಬ ಬ್ರಿಟಿಷ್‌ ಅಧಿಕಾರಿ ಮ್ಯಾನಸನ್‌ನ ರುಂಡ ಹಾರಿಸಿ ನರಗುಂದದ ಅಗಸಿಗೆ ತೂಗುಹಾಕಿದ್ದ. ಇದರಿಂದಾಗಿ ಅದು ಇಂದಿಗೂ ಕೆಂಪಗಸಿಯೆಂದೇ ಜನಜನಿತ. ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಶಾಸಕ ಸಿ.ಸಿ.ಪಾಟೀಲ ವಿಶೇಷ ಅನುದಾನ ತಂದು ಅದನ್ನು ಜೀರ್ಣೋದ್ಧಾರ ಮಾಡಿದ್ದರು. ಅದು ಇಂದಿಗೂ ನರಗುಂದಕ್ಕೆ  ಮುಕುಟಪ್ರಾಯ. ಆದರೆ, ಬಂಡಾಯದ ಕುರುಹುಗಳಲ್ಲಿ ಒಂದಾದ ಮ್ಯಾನಸನ್ ರುಂಡದ ಅಂತ್ಯಸಂಸ್ಕಾರಗೊಂಡ ಗೋರಿಗೆ ಕಾಯಕಲ್ಪ ಸಿಗಬೇಕಿದೆ.

1871ರಿಂದಲೂ ಪುರಸಭೆ ಕಟ್ಟಡವಾಗಿದ್ದ ನರಗುಂದದ ಬಾಬಾಸಾಹೇಬರ ಅರಮನೆ ಕದ ಮುಚ್ಚಿದ ದೃಶ್ಯ

ಮಾಹಿತಿ ಕೊರತೆ:

ಬಾಬಾಸಾಹೇಬರ ಅರಮನೆ ಸೇರಿದಂತೆ ಅವರ ಎಲ್ಲ ಐತಿಹಾಸಿಕ ಸ್ಮಾರಕಗಳ ಮುಂದೆ ಸಮಗ್ರ ಮಾಹಿತಿ ಫಲಕಗಳು ಇಲ್ಲ. ಗೋರಿ, ಕೆಂಪಗಸಿ ಐತಿಹಾಸಿಕ ಮಾಹಿತಿ ಪ್ರದರ್ಶಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಭಾಸ್ಕರರಾವ್ ಭಾವೆಯವರ ಬಂಡಾಯದ ಕುರುಹುಗಳು ಇಂದು ಬೆಟ್ಟದ ಮೇಲೆ ನಿಂತಿವೆ. ಇದಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ನರಗುಂದದ ಸ್ವಾತಂತ್ರ್ಯ ಪ್ರೇಮಿಗಳು ಕೈಜೋಡಿಸಬೇಕು. ಪುರಸಭೆಯ ಹಳೆಯ ಅರಮನೆ ಕಟ್ಟಡದಲ್ಲಿ ತ್ವರಿತವಾಗಿ ಭಾವೆಯವರ ಇತಿಹಾಸ ಸಾರುವ ಮ್ಯೂಸಿಯಂ ಸ್ಥಾಪನೆಯಾದಾಗ ಮಾತ್ರ, ಬಂಡಾಯದ ನೆಲ ನರಗುಂದ ತನ್ನ ಐತಿಹಾಸಿಕ ಗತವೈಭವವನ್ನು ಮರಳಿ ಪಡೆಯಲಿದೆ ಎಂಬುದು ಇಲ್ಲಿನ ಪ್ರಜ್ಞಾವಂತ ಜನರ ಅಭಿಪ್ರಾಯವಾಗಿದೆ. 

ಪುರಸಭೆ ಕಟ್ಟಡ ಭಾಸ್ಕರರಾವ್ ಭಾವೆಯವರ ಅರಮನೆಯಲ್ಲಿ 1871ರಿಂದ 2025 ಅಕ್ಟೋಬರ್ ಕೊನೆಯವರೆಗೂ ಕಾರ್ಯನಿರ್ವಹಿಸಿದೆ. ಪುರಸಭೆಗೆ ಸ್ವಂತ ಕಟ್ಟಡ ನಿರ್ಮಾಣವಾಗಿದ್ದರಿಂದ ಒಂದು ತಿಂಗಳ ಹಿಂದೆ ಅಲ್ಲಿಗೆ ಸ್ಥಳಾಂತರಗೊಂಡಿದೆ. ಆದರೆ ಅರಮನೆಯಲ್ಲಿ ಐತಿಹಾಸಿಕ ಅವಶೇಷಗಳಾದ ಖಡ್ಗ ವರ್ಣಚಿತ್ರಗಳು ವಿನ್ಯಾಸ ಹಾಗೆಯೇ ಇವೆ. ಆದ್ದರಿಂದ ಅದನ್ನು ಐತಿಹಾಸಿಕ ಕುರುಹಾಗಿ ಉಳಿಸುವ ಪ್ರಯತ್ನವನ್ನು ಪುರಸಭೆ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಪುರಸಭೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಮೇಲೆ ಪುರಸಭೆ ಸದಸ್ಯರ ಪ್ರಥಮ ಸಭೆಯಲ್ಲಿ ಅರಮನೆಯನ್ನು ಪ್ರಾಚ್ಯವಸ್ತು ಇಲಾಖೆಗೆ ವಹಿಸುವ ಸಲುವಾಗಿ ಠರಾವು ಪಾಸ್ ಮಾಡಲಾಯಿತು. ಅರಮನೆ ಹಿಂದಿನ ಕಟ್ಟಡ ಉಳಿದ ಜಾಗೆ ಸೇರಿದಂತೆ 15 ಗುಂಟೆ ಇದೆ. ಆದ್ದರಿಂದ ಅದನ್ನು ಈಗಾಗಲೇ ಪ್ರಾಚ್ಯ ವಸ್ತು ಇಲಾಖೆಗೆ ಅಗತ್ಯ ಮಾಹಿತಿ ಜೊತೆಗೆ ಮನವಿ ಸಲ್ಲಿಸಲಾಗಿದೆ. ಬೇಗನೆ ಐತಿಹಾಸಿಕ ಮ್ಯೂಸಿಯಂ ಆಗಿ ಆರಂಭಗೊಳ್ಳುವ ಭರವಸೆ ಹೊಂದಲಾಗಿದೆ.
ಸಂಗಮೇಶ ಬ್ಯಾಳಿ ಮುಖ್ಯಾಧಿಕಾರಿ ನರಗುಂದ
ಬಾಬಾಸಾಹೇಬ ಭಾವೆಯವರ ಅರಮನೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಕುರುಹು. ಅದನ್ನು ಆದಷ್ಟು ಬೇಗ ಪ್ರಾಚ್ಯವಸ್ತು ಇಲಾಖೆ ತನ್ನ ಸುಪರ್ದಿಗೆ ಪಡೆದು ಮ್ಯೂಸಿಯಂ ಮಾಡಬೇಕು. ಇಲ್ಲವಾದರೆ ಪಾಳು ಬೀಳುವುದು ನಿಶ್ಚಿತ. ಅದಕ್ಕೆ ಅವಕಾಶ ಕೊಡದೇ ಜನಪ್ರತಿನಿಧಿಗಳು ಗಮನಹರಿಸಬೇಕು.
–ಚನ್ನು ನಂದಿ, ಸಂಚಾಲಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ನರಗುಂದ
ನರಗುಂದ ಬಂಡಾಯದ ನಾಡು. ಇದಕ್ಕೆ ಕಾರಣರಾದ ನರಗುಂದ ಬಾಬಾಸಾಹೇಬರ ಅವಶೇಷಗಳಿಗೆ ನಿರ್ಲಕ್ಷ್ಯ ಸಲ್ಲದು. ಕೂಡಲೇ ಅವರ ಐತಿಹಾಸಿಕ ಅವಶೇಷಗಳನ್ನು ಪ್ರಾಚ್ಯವಸ್ತು ಇಲಾಖೆ ಕಾಯಕಲ್ಪ ನೀಡಿ ರಕ್ಷಿಸಬೇಕು–ಡಿ.ಬಿ.ಪಾಟೀಲ ಚಿತ್ರಕಲಾ ಶಿಕ್ಷಕ ನರಗುಂದ ವಸ್ತುಸಂಗ್ರಹಾಲಯವಾಗಲಿ ನರಗುಂದ ಬಂಡಾಯದ ಇತಿಹಾಸ ರೋಮಾಂಚನಕಾರಿಯಾಗಿದೆ. ಅದರ ರೂವಾರಿ ಭಾಸ್ಕರರಾವ್ ಭಾವೆ. ಅವರ ಅರಮನೆ ಅವಶೇಷಗಳು ಮುಂದಿನ ಪೀಳಿಗೆ ನೋಡುವಂತಾಗಲು ಅರಮನೆ ವಸ್ತು ಸಂಗ್ರಹಾಲಯವಾಗಬೇಕು.
–ರಮೇಶ ಐನಾಪುರ ಕನ್ನಡ ಪ್ರಾಧ್ಯಾಪಕ ಭೈರನಹಟ್ಟಿ
ಬಂಡಾಯವೆಂದರೆ ನರಗುಂದ ನರಗುಂದವೆಂದರೆ ಬಂಡಾಯ. ಆದ್ದರಿಂದ ಸರ್ಕಾರ ಬಂಡಾಯಕ್ಕೆ ಕಾರಣರಾದ ಬಾಬಾಸಾಹೇಬರ ಅರಮನೆಯನ್ನು ತುರ್ತಾಗಿ ಐತಿಹಾಸಿಕ ಪ್ರವಾಸಿ ಸ್ಥಳವಾಗಿಸಬೇಕು.
–ಯಶೋದಾ ಬಡಿಗೇರ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.