ADVERTISEMENT

ರೈಲ್ವೆ ಮಾರ್ಗ: ₹640 ಕೋಟಿ ಅನುದಾನ ಘೋಷಣೆ; ಶೀಘ್ರ ಅನುಷ್ಠಾನಕ್ಕೆ ಒತ್ತಡ

₹640 ಕೋಟಿ ಅನುದಾನ ಘೋಷಣೆ; ಶೀಘ್ರ ಅನುಷ್ಠಾನಕ್ಕೆ ಒತ್ತಡ

ನಾಗರಾಜ ಎಸ್‌.ಹಣಗಿ
Published 10 ಫೆಬ್ರುವರಿ 2021, 3:25 IST
Last Updated 10 ಫೆಬ್ರುವರಿ 2021, 3:25 IST
ಗದಗ- ಯಲವಗಿ ರೈಲ್ವೆ ಮಾರ್ಗದ ನಕ್ಷೆ
ಗದಗ- ಯಲವಗಿ ರೈಲ್ವೆ ಮಾರ್ಗದ ನಕ್ಷೆ   

ಲಕ್ಷ್ಮೇಶ್ವರ: ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆಯೇ ಗದಗ- ಯಲವಗಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಂದಾಜು ₹640 ಕೋಟಿ ಅನುದಾನ ಘೋಷಣೆ ಮಾಡಿದೆ. ಆದರೆ, ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದಾಗಿ ಈ ಭಾಗದ ಜನ ಬಹುದಿನಗಳ ಕನಸು ಕನಸಾಗೇ ಉಳಿದಿದೆ ಎಂದು ಸ್ಥಳೀಯರು ದೂರಿದ್ದಾರೆ.

55 ಕಿ.ಮೀ. ಅಂತರದ ಗದಗ-ಯಲವಗಿ ರೈಲ್ವೆ ಮಾರ್ಗ ನಿರ್ಮಾಣವಾದರೆ ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ಜನ ಹುಬ್ಬಳ್ಳಿ ಮತ್ತು ಹೊಸಪೇಟೆ ಮಾರ್ಗದ ಬದಲಾಗಿ ಗದಗ-ಯಲವಗಿ-ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ತಲುಪಬಹುದು.

ಈ ಮಾರ್ಗದ ನಿರ್ಮಾಣದಿಂದ ಬಡವರು, ನೌಕರ ವರ್ಗ, ವಿದ್ಯಾರ್ಥಿಗಳು, ಕೂಲಿಕಾರರಿಗೆ 100 ಕಿ.ಮೀ ಅಂತರದೊಂದಿಗೆ ಸಮಯ ಮತ್ತು ಹಣ ಉಳಿತಾಯ ಆಗುತ್ತದೆ. ಮಾರ್ಗ ನಿರ್ಮಾಣದಿಂದ ವ್ಯಾಪಾರ, ವಹಿವಾಟಿನ ಜೊತೆಗೆ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲ ಆಗಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಘೋಷಿಸಿದ ನಂತರ ಎರಡು ವರ್ಷಗಳ ಹಿಂದೆ ರಾಜ್ಯ ರೈಲ್ವೆ ಮುಖ್ಯ ಎಂಜಿನಿಯರ್‌ ₹675 ಕೋಟಿ ಮೊತ್ತದ ಯೋಜನಾ ವರದಿಯನ್ನು ಕೇಂದ್ರ ರೈಲ್ವೆ ಕಚೇರಿಗೆ ಕಳುಹಿಸಿದ್ದಾರೆ. ರಾಜ್ಯ ಸರ್ಕಾರ ಬಜೆಟ್‍ನಲ್ಲಿ ತನ್ನ ಪಾಲಿನ ಅನುದಾನ ಘೋಷಿಸಬೇಕು ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಿರುವುದು ಬಾಕಿ ಉಳಿದಿದೆ.

‘ಗದಗ-ಯಲವಗಿ ರೈಲ್ವೆ ಮಾರ್ಗದಿಂದ ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಗದಗ ತಾಲ್ಲೂಕುಗಳ ಜನರಿಗೆ ಹೆಚ್ಚಿನ ಅನಕೂಲವಾಗಲಿದೆ. ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಹಸಿರು ನಿಶಾನೆ ತೋರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು’ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.

ಪ್ರಸ್ತುತ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲದೇ ಮುಖ್ಯವಾಗಿ ಮುಖ್ಯಮಂತ್ರಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಪ್ರಭಾವಿ ನಾಯಕರೂ ಇದ್ದಾರೆ. ಅವರೆಲ್ಲ ಮನಸ್ಸು ಮಾಡಿದರೆ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳುವುದರಲ್ಲಿ ಸಂಶಯವೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಒತ್ತಡ

ಸಂಸದ ಶಿವಕುಮಾರ ಉದಾಸಿ ಪ್ರಯತ್ನದಿಂದಾಗಿ ಗದಗ-ಯಲವಗಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಒಪ್ಪಿಗೆ ಸೂಚಿಸಿ ಅನುದಾನ ಕಾಯ್ದಿರಿಸಿದೆ. ಬಜೆಟ್‍ನಲ್ಲಿ ಯೋಜನೆಯ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಶಾಸಕ ರಾಮಣ್ಣ ಲಮಾಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.