ADVERTISEMENT

ಗಜೇಂದ್ರಗಡ: ಶಿಕ್ಷಣದ ಕನಸು ನನಸಾಗಿಸಿದ ನರೇಗಾ

ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲಾಗದ ವಿದ್ಯಾರ್ಥಿಗಳ ಕೈಹಿಡಿದ ಯೋಜನೆ

ಪ್ರಜಾವಾಣಿ ವಿಶೇಷ
Published 2 ಜೂನ್ 2023, 0:20 IST
Last Updated 2 ಜೂನ್ 2023, 0:20 IST
ಗಜೇಂದ್ರಗಡ ಸಮೀಪದ ಬೈರಾಪುರ ಗ್ರಾಮದಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಯುವಕರು
ಗಜೇಂದ್ರಗಡ ಸಮೀಪದ ಬೈರಾಪುರ ಗ್ರಾಮದಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಯುವಕರು   

ಶ್ರೀಶೈಲ ಕುಂಬಾರ

ಗಜೇಂದ್ರಗಡ: ಮುಂದಿನ ಶಿಕ್ಷಣಕ್ಕೆ ಹಣ ಹೊಂದಿಸುವ ಚಿಂತೆಯಲ್ಲಿದ್ದ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ನರೇಗಾ ಯೋಜನೆ ಕೈಹಿಡಿದಿದೆ. ಶುಲ್ಕ ಭರಿಸಲು ಹಾಗೂ ಶಿಕ್ಷಣ ಮುಂದುವರಿಸಲು ಯೋಜನೆ ಕಾರಣವಾಗಿದೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಹಾಗೂ ತೃತೀಯ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿರುವ ಬೈರಾಪೂರ ಗ್ರಾಮದ ವಿದ್ಯಾರ್ಥಿಗಳಾದ ಸುಭಾಸ್ ಗರೆಬಾಳ, ಯಶವಂತ ತಳವಾರ, ಸುನೀಲ್ ಗರೆಬಾಳ, ಕೃಷ್ಣಪ್ಪ ಬಾದಿಮನಾಳ, ಬಸವರಾಜ ಮಾಗಿ, ಶಿವಾನಂದ ಹೊಸಮನಿ ಅವರು, ಮುಂದಿನ ಶಿಕ್ಷಣಕ್ಕೆ ಹಣ ಹೊಂದಿಸಲಾಗದೆ ಸಮಸ್ಯೆ ಅನುಭವಿಸುತ್ತಿದ್ದರು. ಮನೆಯಲ್ಲಿ ಬಡತನವಿರುವಾಗಿ ಕಾಲೇಜು ಪ್ರವೇಶ ಹಾಗೂ ಮತ್ತಿತರ ಖರ್ಚಿಗೆ ಹಣ ಕೇಳಲಾಗದೆ ಒದ್ದಾಡುತ್ತಿದ್ದರು. ಆಗ ಅವರು ಮುಖಮಾಡಿದ್ದ ಗ್ರಾಮ ಪಂಚಾಯ್ತಿ ವತಿಯಿಂದ ನಡೆಯುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯತ್ತ.

ADVERTISEMENT

ನರೇಗಾ ಕಾಮಗಾರಿಗಳಲ್ಲಿ ಕೂಲಿ ಕೆಲಸ ಮಾಡಿ, ಕೂಲಿಯಾಗಿ ದೊರೆತ ಹಣವನ್ನು ಮುಂದಿನ ಶಿಕ್ಷಣಕ್ಕಾಗಿ ಕೂಡಿಟ್ಟಿದ್ದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ತೃತೀಯ ವರ್ಷದ ಪ್ರವೇಶಕ್ಕೆ ಹಣ ಬಳಸಿಕೊಂಡಿದ್ದರೆ, ತೃತೀಯ ವರ್ಷದ ವಿದ್ಯಾರ್ಥಿಗಳು ತಾವು ದುಡಿದ ಹಣದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಮುಂದಾಗಿದ್ದಾರೆ.  ಗದುಗಿನ ಕೆಎಸ್ಎಸ್ ಕಾಲೇಜಿನಲ್ಲಿ ಎಂ.ಎ ಓದುತ್ತಿರುವ ಪ್ರಭು ಪೂಜಾರ ಸಹ ನರೇಗಾ ಕೂಲಿ ಕೆಲಸ ಮಾಡಿ, ವಿದ್ಯಾಭ್ಯಾಸದ ಖರ್ಚು ನೀಗಿಸಿಕೊಳ್ಳುತ್ತಿದ್ದಾರೆ.

‘ನಮ್ಮದು ಬಡ ಕುಟುಂಬವಾಗಿದ್ದು, ಶಿಕ್ಷಣದ ಖರ್ಚಿಗಾ ಮನೆಯಲ್ಲಿ ಹಣ ಕೇಳಲು ಮನಸ್ಸಾಗುತ್ತಿರಲಿಲ್ಲ. ಗ್ರಾಮ ಪಂಚಾಯ್ತಿಯವರು ಉದ್ಯೋಗ ಖಾತ್ರಿ ಕೆಲಸ ನೀಡಿರುವುದರಿಂದ ಬಹಳಷ್ಟು ಅನುಕೂಲವಾಗಿದೆ. ಕೂಲಿ ಕೆಲಸದಿಂದ ಬಂದ ಹಣ ಓದಿಗೆ ಸಹಕಾರಿಯಾಗಿದೆ’ ಎಂದು ಶಿವಾನಂದ ಹೊಸಮನಿ ಹೇಳಿದರು.

‘ಗಜೇಂದ್ರಗಡ ತಾಲ್ಲೂಕಿನ ರಾಜೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೈರಾಪೂರು ಗ್ರಾಮ ಗುಡ್ಡದ ಮೇಲಿದ್ದು, ಅಲ್ಲಿರುವ ಬಹುತೇಕ ಕುಟುಂಬಗಳು ತಮ್ಮ ಅಲ್ಪ ಸ್ವಲ್ಪ ಜಮೀನಿನಲ್ಲೇ ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಬೇಸಿಗೆಯಲ್ಲಿ ಗುಳೆ ಹೋಗುತ್ತಿದ್ದನ್ನು ತಪ್ಪಿಸಿ, ಸ್ಥಳೀಯವಾಗಿ ಕೆಲಸ ನೀಡಿ ನರೇಗಾ ನೆರವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಹೆಮ್ಮೆಯ ಸಂಗತಿ’

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಪಾಲ್ಗೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ಕಾಲೇಜು ರಜೆ ಇದ್ದ ಕಾರಣ ವಿದ್ಯಾರ್ಥಿಗಳೂ ಪಾಲ್ಗೊಂಡು ಶಿಕ್ಷಣದ ಖರ್ಚು ಭರಿಸಿದ್ದಾರೆ. ಇದು ಹೆಮ್ಮೆಯ ಸಂಗತಿ’ ಎಂದು ಗಜೇಂದ್ರಗಡ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಬಸವರಾಜ ಬಡಿಗೇರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.