ಗದಗ: ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ ₹25 ಲಕ್ಷ ದುಬಾರಿ ಶುಲ್ಕದೊಂದಿಗೆ ಶೇ 15ರಷ್ಟು ಎನ್‌ಆರ್‌ಐ ಕೋಟಾ ಆರಂಭಿಸಲು ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಈ ನಡೆಯನ್ನು ಎಐಡಿಎಸ್ಒ ಖಂಡಿಸುತ್ತದೆ’ ಎಂದು ಎಐಡಿಎಸ್ಒ ಗದಗ ಜಿಲ್ಲಾ ಸಂಚಾಲಕಿ ಎಂ. ಶಾಂತಿ ತಿಳಿಸಿದ್ದಾರೆ.
‘ವೈದ್ಯಕೀಯ ಕಾಲೇಜುಗಳನ್ನು ಬಲಪಡಿಸಲು ರಾಜ್ಯದ ಬೊಕ್ಕಸದಿಂದ ಅವಶ್ಯಕ ಹಣವನ್ನು ಮಂಜೂರು ಮಾಡುವ ಬದಲು, ಸರ್ಕಾರವು ನಾಚಿಕೆಯಿಲ್ಲದೆ ಈ ಹೊರೆಯನ್ನು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ವರ್ಗಾಯಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡುವ ಮೂಲಕ, ಸರ್ಕಾರವು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವ ನೂರಾರು ಶ್ರಮಜೀವಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ಮುಚ್ಚುತ್ತಿದೆ’ ಎಂದು ಟೀಕಿಸಿದ್ದಾರೆ.
‘ಈಗಾಗಲೇ, ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವು ದೇಶದಲ್ಲಿಯೇ ಅತಿ ಹೆಚ್ಚಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಭಾರತದ ಹಲವು ರಾಜ್ಯಗಳ ಶುಲ್ಕಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚಾಗಿದೆ. ಈ ಅನ್ಯಾಯದ ಹೊರೆಯನ್ನು ಕಡಿಮೆ ಮಾಡುವ ಬದಲು, ಸರ್ಕಾರವು ವಿದ್ಯಾರ್ಥಿಗಳಿಂದ ಇನ್ನಷ್ಟು ಹಣವನ್ನು ವಸೂಲಿ ಮಾಡಲು ನಿರ್ಲಜ್ಜವಾಗಿ ಪ್ರಯತ್ನಿಸುತ್ತಿದೆ’ ಎಂದು ಹರಿಹಾಯ್ದಿದ್ದಾರೆ.
‘ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಬೋಧಕ ಹುದ್ದೆಗಳು ಖಾಲಿ ಇರುವ ಸಂದರ್ಭದಲ್ಲಿ, ಸರ್ಕಾರವು ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಮೂಲಸೌಕರ್ಯವನ್ನು ಖಾತ್ರಿಪಡಿಸಲು ಆದ್ಯತೆ ನೀಡಬೇಕಿದೆ. ಸಂಪನ್ಮೂಲ ಕ್ರೋಡೀಕರಣದ ನೆಪದಲ್ಲಿ ಶ್ರೀಮಂತರಿಗೆ ಸೀಟುಗಳನ್ನು ಮಾರಾಟ ಮಾಡುವುದಲ್ಲ’ ಎಂದು ಹೇಳಿದ್ದಾರೆ.
‘ಸರ್ಕಾರದ ಈ ಬಗೆಯ ವಿದ್ಯಾರ್ಥಿ ವಿರೋಧಿ ಕ್ರಮ ಖಂಡಿಸಿ ಸೆ. 10ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.