
ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿ ಗ್ರಾಮದ ಯುವಕ ಮಹಮದ್ ಫಾರೂಕ್ ಶೇಖ್ ಸನದಿ (29) ಕೊಲೆ ಪ್ರಕರಣವನ್ನು 12 ತಾಸಿನೊಳಗೆ ಭೇದಿಸಿರುವ ಲಕ್ಷ್ಮೇಶ್ವರ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆ ಅಣ್ಣಿಗೇರಿಯ ಗಣೇಶನಗರದ ದಾವಲಸಾಬ್ ಮಕಾನದಾರ (22), ಮಕ್ತುಂಹುಸೇನ್ ಹುಸೇನಸಾಬ ತಹಶೀಲ್ದಾರ್ (23) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರು ಬಂಧಿತರು.
ಕೊಲೆಯಾದ ಯುವಕ ಮಹಮದ್ ಫಾರೂಕ್ ಶೇಖ್ ಸನದಿಗೆ ತಿಂಗಳ ಹಿಂದಷ್ಟೇ ಮದುವೆ ನಿಶ್ಚಯವಾಗಿತ್ತು. ಆದರೆ, ಸನದಿಗೆ ನಿಶ್ಚಯವಾಗಿದ್ದ ಹುಡುಗಿಯನ್ನು ಪ್ರಕರಣದ ಎ1 ಆರೋಪಿ ದಾವಲಸಾಬ ಮಕಾನದಾರ ಪ್ರೀತಿಸುತ್ತಿದ್ದ.
ಏಕಾಏಕಿ ಮದುವೆ ನಿಶ್ಚಿಯ ಆಗಿದ್ದರಿಂದ ಕೋಪಗೊಂಡಿದ್ದ ದಾವಲಸಾಬ ಉಳಿದ ಮೂವರ ಜತೆಗೂಡಿ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿಂದ ಮಹಮದ್ ಫಾರೂಕ್ ಶೇಖ್ ಸನದಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿದ್ದ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಬ್ಬಿಣದ ಕೊಡ್ಲಿ, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಪಿಐ ಬಿ.ವಿ.ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡದ ಹಾಗೂ ಸಿಬ್ಬಂದಿಯಾದ ಆರ್.ಎಸ್.ಯರಗಟ್ಟಿ, ಎಂ.ಎ.ಶೇಖ್, ಎ.ಆರ್.ಕಮ್ಮಾರ, ಎಂ.ಎಸ್.ಬಳ್ಳಾರಿ, ಅಪರಾಧ ವಿಭಾಗದ ಸಿಬ್ಬಂದಿ ಡಿ.ಎಸ್. ನದಾಫ್, ಪಾಂಡುರಂಗರಾವ್. ಮಧುಚಂದ್ರ ಧಾರವಾಡ, ಎಂ.ವೈ. ಉಪ್ಪಾರ, ಬಸವರಾಜ ಮುಳಗುಂದ, ಸೋಮು ವಾಲ್ಮೀಕಿ, ಕೃಷ್ಣ ಹುಲಗೂರ, ಅಪ್ಪಣ್ಣ ರಾಠೋಡ ಹಾಗೂ ಗದಗ ಜಿಲ್ಲೆಯ ತಾಂತ್ರಿಕ ವಿಭಾಗದ ಗುರು ಬೂದಿಹಾಳ, ಸಂಜು ಕೊರಡೂರ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.