ADVERTISEMENT

ರೋಣ | ಅಧಿಕ ತೇವಾಂಶ: 3,500 ಹೆಕ್ಟರ್ ಉಳ್ಳಾಗಡ್ಡಿ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:52 IST
Last Updated 15 ಅಕ್ಟೋಬರ್ 2025, 5:52 IST
ಅಧಿಕ ತೇವಾಂಶದ ಕಾರಣ ಕೊಳೆತು ಹೋಗಿರುವ ಈರುಳ್ಳಿ
ಅಧಿಕ ತೇವಾಂಶದ ಕಾರಣ ಕೊಳೆತು ಹೋಗಿರುವ ಈರುಳ್ಳಿ   

ರೋಣ: ತಾಲ್ಲೂಕಿನ ಪ್ರಮುಖ ತೋಟಗಾರಿಕಾ ಬೆಳೆಯಾದ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಸತತವಾಗಿ ಸುರಿದ ಮುಂಗಾರು ಮಳೆಯಿಂದ ಹಾನಿಗೊಳಗಾಗಿವೆ, ಒಂದೆಡೆ ಅತಿವೃಷ್ಟಿಯಿಂದ ಬೆಳೆ ಹೊಲದಲ್ಲೇ ಕೊಳೆತು ಹಾಳಾದರೆ, ಮತ್ತೊಂದೆಡೆ ಅಳಿದುಳಿದ ಬೆಳೆಗೆ ದರ ಕುಸಿತದಿಂದ ಬೆಳಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉತ್ತಮ ಬೆಳೆ ನಿರೀಕ್ಷೆಯಲ್ಲಿ ತಾಲ್ಲೂಕಿನ ರೈತರು ಈ ಮುಂಗಾರಿಗೆ ಅತಿ ಹೆಚ್ಚು ಉಳ್ಳಾಗಡ್ಡಿ ಬೆಳೆ ಬಿತ್ತನೆ ಮಾಡಿದ್ದರು, ತೋಟಗಾರಿಕೆ ಇಲಾಖೆಯ ಮಾಹಿತಿಯಂತೆ ತಾಲ್ಲೂಕಿನಲ್ಲಿ ಈ ಬಾರಿ ಒಟ್ಟು 5,500 ಹೆಕ್ಟರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದ್ದು, ಅತಿವೃಷ್ಟಿಯಿಂದ 3,500 ಹೆಕ್ಟರ್ ಪ್ರದೇಶದ ಉಳ್ಳಾಗಡ್ಡಿ ಬೆಳೆ ಹಾನಿಯಾಗಿದೆ.

ಈ ಬಾರಿ ಮುಂಗಾರಿಗೆ ಬಹಳ ನಿರೀಕ್ಷೆಯಿಟ್ಟು ಉಳ್ಳಾಗಡ್ಡಿ ಬೆಳೆದಿದ್ದೇವು, ಬಿತ್ತನೆ ಬೀಜ ಮತ್ತು ರಸಗೊಬ್ಬರ, ಉಳುಮೆ ಖರ್ಚು,ಕಳೆ ತಗೆಯಲು ಕೂಲಿ, ಟ್ರ್ಯಾಕ್ಟರ್ ಬಾಡಿಗೆ ಹೀಗೆ ಎಕರೆ ಉಳ್ಳಾಗಡ್ಡಿ ಬೆಳೆಯಲು ಅಂದಾಜು ₹ 35 ರಿಂದ ₹ 40 ಸಾವಿರ ಖರ್ಚು ಮಾಡಿದ್ದೇವೆ, ಆದರೆ, ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆ ಹೊಲದಲ್ಲಯೇ ಕೊಳೆತು ಹಾಳಾಗಿದೆ. ಜೊತೆಗೆ ಮಿಶ್ರಬೆಳೆಯಾಗಿ ಬೆಳೆದ ಮೆಣಸಿನಕಾಯಿ ಗಿಡಗಳೂ ಸಹ ಬೆಳವಣಿಗೆ ಕುಂಟಿತಗೊಂಡಿದ್ದು, ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ ಎಂದು ಪ್ರಗತಿಪರ ರೈತರಾದ ಮುಗಳಿ ಗ್ರಾಮದ ಶರಣಪ್ಪ ಮಲ್ಲಾಪೂರ ತಮ್ಮ ನೋವು ಹಂಚಿಕೊಂಡರು.

ADVERTISEMENT

ಕಷ್ಟಪಟ್ಟು ಬೆಳೆದ ಬೆಳೆಗೆ ಲಾಭವಿರಲಿ, ಬೆಳೆಗೆ ಖರ್ಚು ಮಾಡಿದ ಹಣವೂ ಬರುತ್ತಿಲ್ಲ. ಹಾಗಾಗಿ ಉಳ್ಳಾಗಡ್ಡಿ ಬೆಳೆಗಾರರ ಸಂಕಷ್ಟ, ವಸ್ತುಸ್ಥಿತಿ ಅರಿತು ಸರ್ಕಾರ ಘೋಷಿಸಿರುವ ಬೆಳೆ ಹಾನಿ ಪರಿಹಾರ ಮೊತ್ತವನ್ನು ಮರು ಪರಿಶೀಲಿಸಿ ಹೆಚ್ಚಿನ ಪರಿಹಾರಧನ ನೀಡಬೇಕು ಎಂದು ಬೆಳವಣಕಿ ಗ್ರಾಮದ ರೈತ ಸೋಮು ಚರೇದ ಒತ್ತಾಯಿಸಿದ್ದಾರೆ.

ಬೆಳೆ ಹಾನಿ ಸಮೀಕ್ಷೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪೂರ್ಣಗೊಂಡ ಬಳಿಕ ಬೆಳೆಹಾನಿ ರೈತರ ಮಾಹಿತಿ ಪ್ರಚುರಪಡಿಸಲಾಗುವುದು. ಸಂಬಂಧಪಟ್ಟ ರೈತರು ಅದನ್ನು ಗಮನಿಸಿ ಏನಾದರೂ ತಿದ್ದುಪಡಿಗಳಿದ್ದಲ್ಲಿ ಗಮನಕ್ಕೆ ತಂದರೆ ಪರಿಗಣಿಸಲಾಗುವುದು ಎಂದು ಹಿರಿಯ ತೋಟಗಾರಿಕೆಯ ಅಧಿಕಾರಿ ಗಿರೀಶ್ ಹೊಸೂರ ಹೇಳಿದರು.

ಪಟ್ಟಣದ ಜಕ್ಕಲಿ ರಸ್ತೆಯ ಪಕ್ಕದಲ್ಲಿ ಕೊಳೆಯುತ್ತಿರುವ ಈರುಳ್ಳಿ ಪ್ರದರ್ಶಿಸುತ್ತಿರುವ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.