ADVERTISEMENT

ರೋಣ | ನಿಲ್ಲದ ಬಯಲು ಬಹಿರ್ದೆಸೆ: ವಿದ್ಯಾರ್ಥಿಗಳಿಗೆ ನಿತ್ಯ ಹಿಂಸೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:48 IST
Last Updated 27 ಅಕ್ಟೋಬರ್ 2025, 2:48 IST
ಬಯಲು ಬಹಿರ್ದೆಸೆಯ ತಾಣವಾಗಿರುವ ಮಾಡಲಗೇರಿ ಗ್ರಾಮದ ಸರ್ಕಾರಿ ಶಾಲೆಯ ಮುಂದಿನ ರಸ್ತೆ
ಬಯಲು ಬಹಿರ್ದೆಸೆಯ ತಾಣವಾಗಿರುವ ಮಾಡಲಗೇರಿ ಗ್ರಾಮದ ಸರ್ಕಾರಿ ಶಾಲೆಯ ಮುಂದಿನ ರಸ್ತೆ   

ರೋಣ: ಸ್ವಚ್ಛ ಭಾರತ್ ಮಿಷನ್ ಅಡಿ ತಾಲ್ಲೂಕಿನ ಬಹುತೇಕ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದೆ. ಆದರೆ, ವಾಸ್ತವದಲ್ಲಿ ಬಯಲು ಬಹಿರ್ದೆಸೆಯಿಂದ ಮುಕ್ತಗೊಳ್ಳದೆ ಸರ್ಕಾರಿ ಶಾಲೆಗಳ ಮುಂದೆಯೇ ಅನೈರ್ಮಲೀಕರಣ ವಾತಾವರಣ ಸೃಷ್ಟಿಯಾಗಿದೆ.

ತಾಲ್ಲೂಕಿನ ಸವಡಿ, ಮುದೇನಗುಡಿ, ಕುರಹಟ್ಟಿ, ಮಾಡಲಗೇರಿ, ಯಾವಗಲ್, ಕೃಷ್ಣಾಪುರ ಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳ ಮುಂದಿರುವ ಪ್ರಮುಖ ರಸ್ತೆಗಳ ಇಕ್ಕೆಲಗಳೇ ಗ್ರಾಮಸ್ಥರ ಬಯಲು ಬಹಿರ್ದೆಸೆ ತಾಣಗಳಾಗಿದ್ದು, ವಿದ್ಯಾರ್ಥಿಗಳು ಇಂತಹ ಅಶುಚಿತ್ವದ ವಾತಾವರಣದಲ್ಲಿ ಶಾಲೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಬೆಳಗಿನ ಜಾವ ಮತ್ತು ರಾತ್ರಿಯ ಸಮಯದಲ್ಲಿ, ಮತ್ತೆ ಕೆಲವೆಡೆ ಶಾಲಾ ಸಮಯದಲ್ಲಿಯೂ ಈ ರಸ್ತೆಗಳು ಬಯಲು ಬಹಿರ್ದೆಸೆಗಳಿಗೆ ಬಳಕೆಯಾಗುತ್ತಿವೆ.

ನೈರ್ಮಲ್ಯ ಕಾಪಾಡಬೇಕಾದ ಸ್ಥಳೀಯ ಸಂಸ್ಥೆಗಳು ಈ ಕುರಿತು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ಬಾರಿ ತಾಲ್ಲೂಕಿನಾದ್ಯಂತ ಮಳೆ ಅಧಿಕವಾಗಿದ್ದು ಮಳೆ ಬಂದ ಸಂದರ್ಭದಲ್ಲಿ ರಸ್ತೆಯ ನೀರು ಹಲವು ಕಡೆ ಶಾಲೆಯ ಆವರಣದೊಳಗೂ ಪ್ರವೇಶಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಭೀತಿಗೆ ಎದುರಾಗಿದೆ ಎಂದು ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸಿದ್ದಾರೆ. 

ADVERTISEMENT

ಸಾರ್ವಜನಿಕ ಶೌಚಾಲಯಗಳ ಕೊರತೆ:

ಬಯಲು ಬಹಿರ್ದೆಸೆ ಪದ್ಧತಿಯ ನಿರ್ಮೂಲನೆಗೆ ಸಾರ್ವಜನಿಕ ಶೌಚಾಲಯದ ಕೊರತೆಗಳು ಕೂಡ ಪ್ರಮುಖ ಕಾರಣವಾಗಿದ್ದು, ಹಲವು ಗ್ರಾಮಗಳಲ್ಲಿ ಮಹಿಳೆಯರು ಅಥವಾ ಪುರುಷರಿಗೆ ಸಾರ್ವಜನಿಕ ಶೌಚಾಲಯಗಳನ್ನು ಸ್ಥಳೀಯ ಸಂಸ್ಥೆಗಳು ನಿರ್ಮಿಸಿಲ್ಲ.

ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುದಾನದ ಕೊರತೆಯ ನೆಪವಾದರೆ; ಮತ್ತೆ ಕೆಲವು ಕಡೆ ಜಾಗದ ಕೊರತೆಯ ನೆಪ ಹೇಳಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರ ಅಗತ್ಯಕ್ಕೆ ತಕ್ಕಷ್ಟು ಸಾರ್ವಜನಿಕ ಶೌಚಾಲಯಗಳು ನಿರ್ಮಾಣಗೊಂಡಿಲ್ಲ. ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಶೌಚಾಲಯಗಳು ನಿರ್ಮಾಣಗೊಂಡಿದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಅಂತಹ ಗ್ರಾಮಗಳಲ್ಲಿಯೂ ಶಾಲೆಯ ಮುಂದಿನ ರಸ್ತೆಯೇ ಶೌಚದ ತಾಣವಾಗಿ ಬಳಕೆಯಾಗುತ್ತಿದೆ.

ಶೌಚಾಲಯಗಳ ನಿರ್ವಹಣೆ ಕಷ್ಟ: 

ಕಸ ಕಡ್ಡಿಗಳಿಂದ ತುಂಬಿ ಹೋಗಿರುವ ಸರ್ಕಾರಿ ಶಾಲೆಯ ಶೌಚಾಲಯ

ಹಲವು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದ್ದರೂ ವಿದ್ಯಾರ್ಥಿಗಳ ಉಪಯೋಗಕ್ಕೆ ಮಾತ್ರ ದೊರಕುತ್ತಿಲ್ಲ. ಶೌಚಾಲಯ ನಿರ್ವಹಣೆಗೆ ಬೇಕಾದ ಅನುದಾನ ಸರ್ಕಾರದಿಂದ ದೊರೆಯುತ್ತಿಲ್ಲ ಎಂಬುದು ಒಂದೆಡೆಯಾದರೆ; ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡವರು ಅವುಗಳನ್ನು ನಿರ್ವಹಣೆ ಮಾಡಲಾಗದೇ ಉಪಯೋಗಿಸುವುದನ್ನೇ ಕೈಬಿಟ್ಟಿದ್ದಾರೆ. ಹಲವೆಡೆ ಶೌಚಾಲಯಗಳನ್ನು ಉರುವಲು ಕಟ್ಟಿಗೆ ಸಂಗ್ರಹಿಸಲು, ಮೇಕೆಗಳಿಗೆ ಮೇವು ಸಂಗ್ರಹಿಸಲು ಬಳಸುತ್ತಿದ್ದಾರೆ.

ಬಯಲು ಬಹಿರ್ದೆಸೆ ಪೀಡಿತವಾದ ಬಹುತೇಕ ಶಾಲೆಗಳು ಪ್ರಾಥಮಿಕ ಮತ್ತು ಅಂಗನವಾಡಿ ಶಾಲೆಗಳಾಗಿದ್ದು, ಇಲ್ಲಿ ಚಿಕ್ಕ ವಯಸ್ಸಿನ ಮಕ್ಕಳೇ ಹೆಚ್ಚಾಗಿ ಈ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇಂತಹ ಶಾಲೆಗಳ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕಿದ್ದ ಸ್ಥಳೀಯ ಸಂಸ್ಥೆಗಳು ವಿಫಲವಾಗಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಥಿಲಾವಸ್ಥೆ ತಲುಪಿರುವ ಅಂಗನವಾಡಿ ಶಾಲೆಯ ಶೌಚಾಲಯ

ಯಾರು ಏನಂತಾರೆ?

ಬಯಲು ಬಹಿರ್ದೆಸೆಯಿಂದ ಆಮಶಂಕೆ ಕಾಮಾಲೆ ವಾಂತಿ ಭೇದಿ ಸೇರಿದಂತೆ ಎಂಟು ಬಗೆಯ ಕಾಯಿಲೆಗಳು ಬಾಧಿಸುವ ಸಾಧ್ಯತೆ ಇದ್ದು ಇಂತಹ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿಯೇ ಕಂಡುಬರುತ್ತವೆ. ವಿಶೇಷವಾಗಿ ಜಂತುಹುಳು ಸೋಂಕು ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಕಂಡುಬರುತ್ತದೆ. ಜಂತುಹುಳು ನಿವಾರಣೆಗೆ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಿಲಾಗಿದ್ದರೂ ಬಯಲು ಬಹಿರ್ದೆಸೆಯಿಂದ ಅದನ್ನು ನಿವಾರಿಸಲು ಸಾಧ್ಯವಾಗುತ್ತಿಲ್ಲ
ಬಿ.ಎಸ್.ಭಜಂತ್ರಿ ತಾಲ್ಲೂಕು ಆರೋಗ್ಯ ಅಧಿಕಾರಿ ರೋಣ
ಸ್ವಚ್ಛತೆ ಕಾಪಾಡಿಕೊಳ್ಳಲು ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿದರೂ ಅದರ ಯಶಸ್ಸಿಗೆ ಜನತೆಯ ಸಹಕಾರ ಮುಖ್ಯ. ಪ್ರಜ್ಞಾವಂತ ಜನತೆ ಅದನ್ನು ಅರಿಯಬೇಕು
ಅಬ್ದುಲ್ ಸಾಬ್ ಹೊಸಮನಿ ಸಾಮಾಜಿಕ ಕಾರ್ಯಕರ್ತರು ರೋಣ
ಬಯಲು ಬಹಿರ್ದೆಸೆ ಪದ್ಧತಿ ನಿರ್ಮೂಲನೆಗೆ ವಿವಿಧ ಸಂಘ-ಸಂಸ್ಥೆಗಳ ಜತೆಗೂಡಿ ಅನೇಕ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿದ್ದೇವೆ. ಆದರೂ ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಕೊರತೆಯಿಂದ ಇಂದಿಗೂ ಈ ಪದ್ಧತಿ ಮುಂದುವರೆದಿರುವುದು ದುರಂತ. ತಕ್ಷಣವೇ ಸ್ಥಳೀಯ ಸರ್ಕಾರಗಳು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು.
ಲೀಲಾವತಿ ಚಿತ್ರಗಾರ ಉಪಾಧ್ಯಕ್ಷೆ ಕರ್ನಾಟಕ ರಾಜ್ಯ ರೈತ ಸಂಘ
ಶೌಚಾಲಯ ಬಳಕೆ ಉತ್ತೇಜಿಸಿ ಸರ್ಕಾರಗಳು ಪಂಚಾಯಿತಿ ಮೂಲಕ ವೈಯಕ್ತಿಕ ಶೌಚಾಲಯಗಳು ನಿರ್ಮಿಸಲು ಅನುಕೂಲ ಕಲ್ಪಿಸಿದೆ. ಆದರೆ ಅವುಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಶೌಚಾಲಯಗಳ ಸಮರ್ಪಕ ಬಳಕೆ ಉತ್ತೇಜಿಸಲು ಸರ್ಕಾರ ಪಡಿತರ ವ್ಯವಸ್ಥೆಯೊಂದಿಗೆ ಟಾಯ್ಲೆಟ್ ಕ್ಲೀನರ್ ಪಡೆಯುವುದನ್ನು ಕಡ್ಡಾಯಗೊಳಿಸಬೇಕು.
ಮಲ್ಲಿಕಾರ್ಜುನ ನಾಯ್ಕರ ಕುರಹಟ್ಟಿ ಗ್ರಾಮಸ್ಥರು
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಜನತೆಯ ಬೆಂಬಲವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ವೈಯಕ್ತಿಕ ಶೌಚಾಲಯಗಳನ್ನು ಪ್ರತಿಯೊಬ್ಬರು ಹೊಂದುವಂತೆ ಸೂಚಿಸಿದೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಈಗಾಗಲೇ ಶೌಚಾಲಯ ನಿರ್ಮಿಸಲು ಅವಕಾಶ ಕಲ್ಪಿಸಿದ್ದರೂ ಅವುಗಳನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ.
ಚಂದ್ರಶೇಖರ ಕಂದಕೂರ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.