ADVERTISEMENT

ಗದಗ | ಅಂಗಾಂಗ ದಾನ: 29 ದಿನಗಳಲ್ಲಿ 1,440 ಮಂದಿ ನೋಂದಣಿ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 17 ಆಗಸ್ಟ್ 2025, 5:43 IST
Last Updated 17 ಆಗಸ್ಟ್ 2025, 5:43 IST
ಸಚಿವ ಎಚ್‌.ಕೆ.ಪಾಟೀಲರ ಅಂಗಾಂಗ ದಾನ ಪ್ರತಿಜ್ಞಾ ಪ್ರಮಾಣಪತ್ರ      
ಸಚಿವ ಎಚ್‌.ಕೆ.ಪಾಟೀಲರ ಅಂಗಾಂಗ ದಾನ ಪ್ರತಿಜ್ಞಾ ಪ್ರಮಾಣಪತ್ರ         

ಗದಗ: ಅಂಗಾಂಗ ದಾನ ಕುರಿತು ಎಚ್‌.ಕೆ.ಪಾಟೀಲ ಸೇವಾ ತಂಡ ಗದಗ ಬೆಟಗೇರಿ ನಗರದಲ್ಲಿ ನಡೆಸಿದ ಜಾಗೃತಿ ಅಭಿಯಾನದಿಂದ 29 ದಿನಗಳಲ್ಲಿ 1,440 ಜನರು ಸ್ವ–ಇಚ್ಛೆಯಿಂದ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಜುಲೈ 17ರಂದು ಈ ಅಭಿಯಾನ ಆರಂಭಗೊಂಡಿದ್ದು, 10 ದಿನಗಳೊಳಗೆ 720 ಮಂದಿ ನೋಂದಣಿ ಆಗಿದ್ದಾರೆ. ನಂತರದ ಒಂದು ವಾರದಲ್ಲಿ 1,072 ಮಂದಿಯ ನೋಂದಣಿ ಆಗಿದೆ. ಆಗಸ್ಟ್‌ 14ರ ವೇಳೆಗೆ 1,440 ಮಂದಿ ನೋಂದಣಿ ಆಗಿದ್ದಾರೆ.

‘29 ದಿನಗಳಲ್ಲಿ 1,440 ಮಂದಿ ತಮ್ಮ ಅಂಗಾಂಗ ದಾನಕ್ಕಾಗಿ ಹೆಸರು ನೋಂದಣಿ ಮಾಡಿರುವುದು ಸಮಾಜದ ಸಂವೇದನೆ ಮತ್ತು ಜಾಗೃತ ಮನಸ್ಸಿನ ಪ್ರತಿಬಿಂಬ. ಇದಕ್ಕೆ ನಾವು ಯಾರನ್ನೂ ಒತ್ತಾಯಿಸಿಲ್ಲ. ಬದಲಾಗಿ, ಅವರ ಮನಸ್ಸನ್ನು ಮುಟ್ಟುವ ಮೂಲಕ ಜಾಗೃತಿ ಮೂಡಿಸಿದೆವು. ಇದರಿಂದ ಪ್ರೇರಣೆಗೊಂಡು ಸ್ವಇಚ್ಛೆಯಿಂದ ಬಂದ ವ್ಯಕ್ತಿಗಳನ್ನು ಜೀವಸಾರ್ಥಕತೆ ವೆಬ್‌ಸೈಟ್‌ನಲ್ಲಿ (www.jeevasarthakathe.karnataka.gov.in) ನೋಂದಣಿ ಮಾಡಿಸಿದ್ದೇವೆ’ ಎಂದು ಎಚ್‌.ಕೆ.ಪಾಟೀಲ ಸೇವಾತಂಡದ ಅಧ್ಯಕ್ಷ ಪ್ರಭು ಬುರಬುರೆ ತಿಳಿಸಿದರು.

ADVERTISEMENT

‘ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಆದರೆ, ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡರು 3 ಲಕ್ಷ ಜನರು ಮಾತ್ರ. ಅಂಗಾಂಗ ದಾನದ ಬಗ್ಗೆ ಜನರಲ್ಲಿ ಮೂಢನಂಬಿಕೆ, ಭಯಗಳಿವೆ. ಅವುಗಳ ಬಗ್ಗೆ ಸರಿಯಾದ ತಿಳಿವಳಿಕೆ ನೀಡಿದ್ದರಿಂದ ಸ್ವಇಚ್ಛೆಯಿಂದ ಮುಂದೆ ಬಂದು ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ. ಈವರೆಗೆ ಗದಗ ಬೆಟಗೇರಿಯ ಶೇ 5ರಷ್ಟು ಜನರನ್ನು ಮಾತ್ರ ತಲುಪಿದ್ದು, ಇನ್ನಷ್ಟು ಅಭಿಯಾನ ಮಾಡುತ್ತೇವೆ’  ಎಂದರು.

ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿದವರಲ್ಲಿ ಯುವಕರು, ಮಧ್ಯವಯಸ್ಕರು, ಹಿರಿಯ ನಾಗರಿಕರು ಇದ್ದಾರೆ. ಸದ್ಯಕ್ಕೆ ಸೇವಾತಂಡದ ಗುರಿ ಗದಗ ಮತಕ್ಷೇತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆ, ರಾಜ್ಯಕ್ಕೂ ವಿಸ್ತರಿಸುವ ಯೋಚನೆ ತಂಡಕ್ಕಿದೆ.

‘ಸಚಿವ ಎಚ್‌.ಕೆ.ಪಾಟೀಲ ಅವರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಸಮಾಜಮುಖಿಯಾಗಿ ಆಚರಿಸಬೇಕು ಎಂಬ ಆಲೋಚಿಸಿದಾಗ, ಅಂಗಾಂಗ ದಾನ ಜಾಗೃತಿ ಮತ್ತು ನೋಂದಣಿ ವಿಷಯ ಹೊಳೆಯಿತು. ಅವರ 72ನೇ ಜನ್ಮದಿನಕ್ಕೆ 1,072 ಮಂದಿಯ ನೋಂದಣಿ ಗುರಿಯಿತ್ತು. ನಿರೀಕ್ಷೆ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಸೇವಾ ತಂಡದ ಸಂಚಾಲಕ ಡಾ. ಎಸ್‌.ಆರ್‌.ನಾಗನೂರ ತಿಳಿಸಿದರು.

72ನೇ ಜಜ್ಮದಿನದ ಅಂಗವಾಗಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅಂಗಾಂಗ ದಾನ ಮಾಡುವ ಪ್ರತಿಜ್ಞೆಯೊಂದಿಗೆ ನೋಂದಣಿ ಮಾಡಿಸಿದ್ದಾರೆ. ಇವರ ನಡೆ ಎಲ್ಲರಿಗೂ ಮಾದರಿಯಾಗಿದೆ
ಸಿದ್ದು ಪಾಟೀಲ, ಕಾಂಗ್ರೆಸ್‌ ಮುಖಂಡ
ಅಂಗಾಂಗಕ್ಕೆ ದಾನಕ್ಕೆ ನೋಂದಣಿ ಮಾಡಿಸುವುದು ಮೊದಲ ಹೆಜ್ಜೆ. ಅದರ ನಂತರ ಪ್ರಕ್ರಿಯೆಗಳು ಕಾನೂನು ಪ್ರಕಾರವಾಗಿಯೇ ನಡೆಯುತ್ತವೆ. ದೇಹಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ.
ಪ್ರಭು ಬುರಬುರೆ, ಅಧ್ಯಕ್ಷ, ಎಚ್‌.ಕೆ.ಪಾಟೀಲ ಸೇವಾ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.