ADVERTISEMENT

ರೋಣ | ಕೊರೊನಾ ಪರಿಣಾಮ ಶೇಂಗಾ ಖರೀದಿಗೆ ನಿರಾಕಾರ

ಗಜೇಂದ್ರಗಡ ಎಪಿಎಂಸಿ: ಶೇಂಗಾ ಖರೀದಿಸದೆ ರೈತರನ್ನು ವಾಪಸ್‌ ಕಳುಹಿಸಿದರು

​ಪ್ರಜಾವಾಣಿ ವಾರ್ತೆ
Published 10 ಮೇ 2020, 19:45 IST
Last Updated 10 ಮೇ 2020, 19:45 IST
ಶೇಂಗಾ ಖರೀದಿಗೆ ವರ್ತಕರು ನಿರಾಕರಿಸಿದ್ದರಿಂದ ರೈತರು ಶೇಂಗಾ ತುಂಬಿದ ಟ್ರಾಕ್ಟರ್‌ ಗ್ರಾಮಕ್ಕೆ ವಾಪಾಸ್ ತಂದರು
ಶೇಂಗಾ ಖರೀದಿಗೆ ವರ್ತಕರು ನಿರಾಕರಿಸಿದ್ದರಿಂದ ರೈತರು ಶೇಂಗಾ ತುಂಬಿದ ಟ್ರಾಕ್ಟರ್‌ ಗ್ರಾಮಕ್ಕೆ ವಾಪಾಸ್ ತಂದರು   

ರೋಣ: ‘ನಿಮ್ಮೂರಲ್ಲಿ ಕೊರೊನಾ ಸೋಂಕೀತರ ಬಂದು ಹೋಗಿದ್ದು, ಗ್ರಾಮಕ್ಕೆ ಕೊರೊನಾ ನಂಟಿದೆ. ನಿಮ್ಮೂರಿನ ಶೆಂಗಾ ಖರೀದಿಸುವುದಿಲ್ಲ’ ಎಂದು ಗಜೇಂದ್ರಗಡ ಎಪಿಎಂಸಿಯ ವರ್ತಕರು ಮಾಡಲಗೇರಿ ಗ್ರಾಮದ ರೈತರ ಶೆಂಗಾ ಖರೀದಿಗೆ ನಿರಾಕರಿಸಿದ ಘಟನೆ ಶನಿವಾರ ನಡೆದಿದೆ.

ತಾಲ್ಲೂಕಿನ ಮಾಡಲಗೇರಿ ಗ್ರಾಮದಿಂದ ಶಂಕರಗೌಡ ಶಾಂತಗೇರಿ, ಭೀಮಪ್ಪ ಹಡಪದ, ತಿಪ್ಪನಗೌಡ ತಿಪ್ಪನಗೌಡ್ರ ಸೇರಿದಂತೆ ಆರು ಮಂದಿ ರೈತರು ಟ್ರಾಕ್ಟರ್‌ ಮೂಲಕ 55 ಕ್ಕೂ ಹೆಚ್ಚು ಶೆಂಗಾ ಚೀಲ ತಗೆದುಕೊಂಡು ಗಜೇಂದ್ರಗಡ ಪಟ್ಟಣದಲ್ಲಿನ ಎಪಿಎಂಸಿ ಮಾರುಕಟ್ಟೆಗೆ ತೆರಳಿದ್ದರು. ಮಾರಾಟ ಮಾಡಲೆಂದು ಅಲ್ಲಿನ ವರ್ತಕರ ಬಳಿ ತೆರಳಿದ್ದರು. ಕೊರೊನಾ ಸೋಂಕಿತರು ಬಂದು ಹೋಗಿರುವ ಮಾಡಲಗೇರಿ ಗ್ರಾಮದವರಾಗಿರುವುದರಿಂದ ನೀವು ತಂದಿರುವ ಶೇಂಗಾ ಖರೀದಿಸುವುದಿಲ್ಲ. ವಾಪಸ್ಸು ಹೋಗಬಹುದು ಎಂದು ವರ್ತಕರು ಹೇಳಿದ್ದಾರೆ. ಅದರಿಂದಾಗಿ ರೈತರು ಶೇಂಗಾವನ್ನು ವಾಪಸ್ಸು ಮನೆಗೆ ತಂದಿದ್ದಾರೆ.

ವರ್ತಕರ ನಡೆಗೆ ವ್ಯಾಪಕ ಖಂಡನೆ: ಎಪಿಎಂಸಿ ವರ್ತಕರ ನಡೆಗೆ ತಾಲ್ಲೂಕಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಹೀಗೆ ನಾನಾ ರೀತಿಯಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಾ ಬಂದಿರುವ ರೈತರ ಬದುಕಿಗೆ, ಕೊರೊನಾ ಸೋಂಕು ತೀವ್ರ ಸಂಕಷ್ಟ ತಂದೊಡ್ಡಿದೆ. ಹೀಗಿದ್ದಾಗ ಗಜೇಂದ್ರಗಡ ಎಪಿಎಂಸಿ ವರ್ತಕರು ರೈತರ ತಂದ ಶೇಂಗಾವನ್ನು ಖರೀದಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದು ಖಂಡನೀಯ. ಇಂತಹ ಘಟನೆ ಮರಕಳಿಸದಂತೆ ನೋಡಿಕೊಳ್ಳುವಲ್ಲಿ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಮಾಡಲಗೇರಿ ಗ್ರಾಮದ ಜಗದೀಶ ಅಮಾತಿಗೌಡ್ರ ಒತ್ತಾಯಿಸಿದ್ದಾರೆ.

ADVERTISEMENT

ವರ್ತಕರ ನಡೆ ನೋವುಂಟು ಮಾಡಿದೆ
ನಮ್ಮೂರಲ್ಲಿ ಕೊರೊನಾ ಸೋಂಕಿತರು ಯಾರೂ ಬಂದಿಲ್ಲ. ಶಂಕೀತರ ಆರೋಗ್ಯ ತಪಾಸಣೆ ಮಾಡಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಶೇಂಗಾದಲ್ಲಿ ಕೊರೊನಾ ಇರಲ್ಲ ಎಂದು ನಾನಾ ರೀತಿಯಾಗಿ ವಿನಂತಿಸಿದರೂ, ವರ್ತಕರು ಕೇಳಲಿಲ್ಲ. ಇದರಿಂದ ನಮಗೆ ತೀವ್ರ ನೋವಾಗಿದೆ ಎಂದು ಮಾಡಲಗೇರಿ ರೈತ ಸಂಕನಗೌಡ ತಮ್ಮನಗೌಡ್ರ ಅಳಲು ತೋಡಿಕೊಂಡರು.

*
ಕೊರೊನಾ ನೆಪ ಮುಂದಿಟ್ಟುಕೊಂಡು ಶೇಂಗಾ ಖರೀದಿಸದೆ ವಾಪಸ್ಸು ಕಳುಹಿಸಿರುವ ವರ್ತಕರ ವಿರುದ್ಧ ಕ್ರಮ ಕೈಗೊಳ್ಳಬೇಕು.
–ಭೀಮಪ್ಪ ಹಡಪದ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.