ADVERTISEMENT

ಕೃಷಿ ಲಾಭದಾಯಕವಾಗಿಸುವ ಯೋಜನೆ ರೂಪಿಸಿ: ಸಚಿವ ಎಚ್‌.ಕೆ. ಪಾಟೀಲ

ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 15:57 IST
Last Updated 3 ಮಾರ್ಚ್ 2025, 15:57 IST
ಗದಗ ತಾಲ್ಲೂಕಿನ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು
ಗದಗ ತಾಲ್ಲೂಕಿನ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಸಚಿವ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು   

ಗದಗ: ‘ಕೃಷಿಯನ್ನು ಲಾಭದಾಯಕ ಆಗಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸೂಕ್ತ ನಿರ್ಣಯಗಳನ್ನು ಕೈಗೊಂಡರೆ ಅವುಗಳನ್ನು ಈಡೇರಿಸಲು ರಾಜಕೀಯವಾಗಿ ಮತ್ತು ಕಾನೂನಾತ್ಮಕ ನೀತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಸಹಕಾರ ರಂಗದ ಭೀಷ್ಮ ಕೆ.ಎಚ್‌. ಪಾಟೀಲ ಅವರ ಜನ್ಮಶತಮಾನೋತ್ಸವದ ಅಂಗವಾಗಿ ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಕ್ಷೇತ್ರದಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೃಷಿ ಲಾಭದಾಯಕವಾಗಲು ನೈಸರ್ಗಿಕ ಕೃಷಿ ಮಾಡಲು ರೈತರು ಮುಂದಾಗಬೇಕು’ ಎಂದು ತಿಳಿಸಿದರು.

ADVERTISEMENT

‘ನಾವು ನೀವೆಲ್ಲರೂ ವಿಷಮುಕ್ತ ಆಹಾರ ಸೇವಿಸುವಂತಾಗಬೇಕು. ರೈತರು ನೈಸರ್ಗಿಕ ಕೃಷಿ ಅಳವಡಿಸಿಕೊಂಡು, ಬದುಕಿನಲ್ಲಿ ಸಕರಾತ್ಮಕ ಬದಲಾವಣೆ ತರಬೇಕು. ಹಾಗಾದಾಗ ಮಾತ್ರ, ರೈತರ ಬಹು ದೊಡ್ಡ ಕೊಡುಗೆ ಇಡೀ ಜಗತ್ತಿಗೆ ಸಿಗಲಿದೆ’ ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ‘ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡಲು ನೈಸರ್ಗಿಕ ಕೃಷಿ ಒಂದು ಉತ್ತಮ ಮಾರ್ಗವಾಗಿದೆ. ಈ ದಿಸೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಇನ್ನೂ ಹೆಚ್ಚು ಕೆಲಸ ಆಗಬೇಕಿದೆ’ ಎಂದರು.

ತುಮಕೂರಿನ ನೈಸರ್ಗಿಕ ಕೃಷಿ ತಜ್ಞ ಪ್ರಸನ್ನ ಮೂರ್ತಿ ಮಾತನಾಡಿ, ‘ನಮ್ಮ ಹೊಲದ ಮಣ್ಣು ಹೊಲದಿಂದ ಹೊರಗೆ ಹೋಗದಂತೆ ತಡೆಯಬೇಕು. ಬಿದ್ದ ನೀರು ಇಂಗುವಂತೆ ಮಾಡಬೇಕು. ನಮ್ಮ ಹೊಲದ ಬೀಜವನ್ನು ತಾವೇ ಉಪಯೋಗಿಸಬೇಕು. ಒಂದು ಜವಾರಿ ಆಕಳನ್ನು ಬೆಳೆಸಿ ಅದರಿಂದ ಬರುವಂತಹ ಗಂಜಲು ಮತ್ತು ಸಗಣಿ ಉಪಯೋಗಿಸಿ ಆರು ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಇಂಡಿ ಪ್ರಗತಿಪರ ರೈತ ರಾಜಶೇಖರ ನಿಂಬರಗಿ ಮಾತನಾಡಿ, ‘ಪ್ರಸನ್ನ ಮೂರ್ತಿ ಅವರ ಮಾರ್ಗದರ್ಶನದಂತೆ 10 ವರ್ಷಗಳಿಂದ ನೈಸರ್ಗಿಕ ಕೃಷಿ ಮಾಡಿ ಒಂದು ನಿಂಬೆ ಗಿಡದಿಂದ 5,000 ಉತ್ತಮ ನಿಂಬೆ ಕಾಯಿಗಳನ್ನು ಪಡೆಯುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರಗತಿಪರ ರೈತರಾದ ಸಿದ್ದಪ್ಪ ಕರಿಕಟ್ಟಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ.ಎಲ್.ಜಿ. ಹಿರೇಗೌಡರ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಸುಧಾ ವಿ. ಮಂಕಣಿ ವೇದಿಕೆಯಲ್ಲಿ ಇದ್ದರು.

ರಾಜ್ಯದ 18 ಜಿಲ್ಲೆಗಳಿಂದ ಬಂದಿದ್ದ, 230 ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.