
ಶಿರಹಟ್ಟಿಯ ಪೊಲೀಸ್ ಠಾಣೆ ಎದುರು ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಅವರ ಬೆಂಬಲಿಗರು ನಡೆಸಿದ್ದ ಅಹೋರಾತ್ರಿ ಧರಣಿ ಹೋರಾಟವನ್ನು ಬುಧವಾರ ರಾತ್ರಿ ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅವರಿಗೆ ಮನವಿ ನೀಡಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು
ಶಿರಹಟ್ಟಿ: ಲಂಬಾಣಿ ಸಮಾಜದ ವ್ಯಕ್ತಿಗಳಿಬ್ಬರ ಮೇಲೆ ವಿನಾಕಾರಣ ಥಳಿಸಿರುವ ಆರೋಪಿ ಪಿಎಸ್‌ಐ ಈರಣ್ಣ ರಿತ್ತಿ ಹಾಗೂ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಬೇಕೆಂದು ಶಾಸಕ ಚಂದ್ರು ಲಮಾಣಿ ಹಾಗೂ ಬೆಂಬಲಿಗರು ನಡೆಸಿದ್ದ ಅಹೋರಾತ್ರಿ ಪ್ರತಿಭಟನೆ ಬುಧವಾರ ರಾತ್ರಿ ಅಂತ್ಯಗೊಂಡಿತು.
ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ನ.17ರೊಳಗೆ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಶಾಸಕರು ಹೇಳಿದರು.
ಅಹೋರಾತ್ರಿ ಧರಣಿ:
ಪೊಲೀಸರ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆ ಎದುರು ಟೆಂಟ್ ಹಾಕಿಕೊಂಡು ಪ್ರತಿಭಟನಾಕಾರರು ಧರಣಿ ನಡೆಸಿದರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ‘ಪಿಎಸ್‌ಐ ಮತ್ತು ಇಬ್ಬರು ಸಿಬ್ಬಂದಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅದರನ್ವಯ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು. ಅವರನ್ನು ಬಂಧಿಸಬೇಕು. ಅಲ್ಲಿಯವರೆಗೆ ಈ ಅಹೋರಾತ್ರಿ ಧರಣಿ ಮುಂದುವರೆಯಲಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.
ಎಫ್‌ಐಆರ್ ಗೊಂದಲ: ಮಂಗಳವಾರ ರಾತ್ರಿಯೇ ಹಲ್ಲೆಗೊಳಗಾದವರ ದೂರಿನನ್ವಯ ಪಿಎಸ್‌ಐ ಮತ್ತು ಇಬ್ಬರು ಸಿಬ್ಬಂದಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಎಫ್‌ಐಆರ್ ನಲ್ಲಿ ಪಿಎಸ್‌ಐ ಮತ್ತು ಸಿಬ್ಬಂದಿ ಇಬ್ಬರ ಹೆಸರನ್ನು ಬರೆದಿರಲಿಲ್ಲ. ಉದ್ದೇಶಪೂರಕವಾಗಿಯೇ ಹೆಸರು ಬಿಡಲಾಗಿದೆ ಎಂದು ಶಾಸಕ ಚಂದ್ರು ಲಮಾಣಿ ಮತ್ತು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಎಸ್ಪಿ ಭೇಟಿ:
ಪ್ರತಿಭಟನಾಕಾರರು ಎಸ್‌ಪಿ ಅವರು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಎಸ್ಪಿ ರೋಹನ್ ಜಗದೀಶ್ ಅವರು ಮಧ್ಯರಾತ್ರಿ 1.30ರ ಸುಮಾರಿಗೆ ಶಿರಹಟ್ಟಿ ಪೋಲಿಸ್ ಠಾಣೆಗೆ ಆಗಮಿಸಿದರು. ತಾಲ್ಲೂಕು ಆಸ್ಪತ್ರೆಗೆ ತೆರಳಿ ಗಾಯಾಳು ವ್ಯಕ್ತಿಯನ್ನು ಭೇಟಿ ಮಾಡಿ ಠಾಣೆಗೆ ಮರಳಿ ಬಂದರು.
‘ಗಾಯಾಳು ವ್ಯಕ್ತಿಗಳು ದೂರು ನೀಡಿದಂತೆಯೇ ನಾವು ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಎಸ್‌ಐ ಹಾಗೂ ಸಿಬ್ಬಂದಿ ಹೆಸರು ಸೇರಿಸುವ ಬಗ್ಗೆ ಡಿವೈಎಸ್ಪಿ ಅವರು ವಿಚಾರಣೆ ನಡೆಸಿ ಫಿರ್ಯಾದಿ ಅವರಿಂದ ಇನ್ನೊಂದು ಹೇಳಿಕೆ ಪಡೆಯಬಹುದು. ನಂತರ ತಪ್ಪತಸ್ಥರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು’ ಎಂದರು.
ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಸಿಪಿಐ ಬಿ.ವಿ. ನ್ಯಾಮಗೌಡ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ನಾಗರಾಜ ಲಕ್ಕುಂಡಿ, ಶಂಕರ ಮರಾಠಾ ಫಕ್ಕಿರೇಶ ರಟ್ಟಿಹಳ್ಳಿ, ಜಾನೂ ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೇಮ್ಮನವರ, ರಮೇಶ ಲಮಾಣಿ, ಗಂಗಾಧರ ಮೇಣಶಿನಕಾಯಿ. ಪುಂಡಲಿಕ ಲಮಾಣಿ, ಅಶೋಕ ಶಿರಹಟ್ಟಿ, ಬಿ.ಡಿ.ಪಲ್ಲೇದ, ನಂದಾ ಪಲ್ಲೇದ, ಶಿವು ಲಮಾಣಿ, ಕುಮಾರಸ್ವಾಮಿ ಹಿರೇಮಠ, ಸೋಮರಡ್ಡಿ ಲಮಾಣಿ, ವಿಠ್ಠಲ ಬಿಡವೆ, ಸಂತೋಷ ತೋಡೆಕರ, ತಿಪ್ಪಣ್ಣ ಲಮಾಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.