ADVERTISEMENT

ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಪೊಲೀಸ್ ಅಧಿಕಾರಿ ಬಿ.ವಿ.ನ್ಯಾಮಗೌಡ

ರೂಟ್ ಮಾರ್ಚ್ ಕಾರ್ಯಕ್ರಮದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ಮನವಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:42 IST
Last Updated 5 ಫೆಬ್ರುವರಿ 2026, 2:42 IST
ಶಿರಹಟ್ಟಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಬುಧವಾರ ರೂಟ್ ಮಾರ್ಚ್ ನಡೆಸಲಾಯಿತು
ಶಿರಹಟ್ಟಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಬುಧವಾರ ರೂಟ್ ಮಾರ್ಚ್ ನಡೆಸಲಾಯಿತು   

ಶಿರಹಟ್ಟಿ: ‘ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಅವಶ್ಯಕವಾಗಿದೆ’ ಎಂದು ಶಿರಹಟ್ಟಿ ಪೊಲೀಸ್ ಠಾಣೆ ಸಿಪಿಐ ಬಿ.ವಿ.ನ್ಯಾಮಗೌಡ ಹೇಳಿದರು.

ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಆರ್‌ಎಎಫ್ ಬೆಟಾಲಿಯನ್-97 ವತಿಯಿಂದ ಬುಧವಾರ ನಡೆದ ರೂಟ್ ಮಾರ್ಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಶಿರಹಟ್ಟಿ ಪಟ್ಟಣ ಭಾವೈಕ್ಯದ ನಾಡಾಗಿದ್ದು, ಕೆಲವು ಜನರ ದುಷ್ಕೃತ್ಯದಿಂದಾಗಿ ಇತ್ತಿಚಿನ ದಿನಗಳಲ್ಲಿ ಅಪರಾಧಗಳು, ಅಹಿತಕರ ಘಟನೆಗಳು ಹೆಚ್ಚಾಗಿವೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸ್ನೇಹ ಕಾಯ್ದುಕೊಳ್ಳಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು. ಸಾರ್ವಜನಿಕರು ಯಾವುದೇ ಅಪರಾಧ ಕೃತ್ಯಗಳ ಸುಳಿವು ಗೊತ್ತಾದಲ್ಲಿ ಇಲಾಖೆಗೆ ನೇರವಾಗಿ ಮಾಹಿತಿ ನೀಡಬಹುದು’ ಎಂದರು.

ADVERTISEMENT

ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ ಅಪರಾಧ ತಡೆಗಟ್ಟಲು ಇರುವ ಮಾರ್ಗ ಮತ್ತು ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಅಪರಾಧ ಚಟುವಟಿಕೆ ತಡೆಗಟ್ಟುವುದು, ಭದ್ರತೆ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಪೊಲೀಸರ ಸೇವೆಯಿಂದ ಇಡೀ ಸಮುದಾಯ ನೆಮ್ಮದಿಯ ಬದುಕು ಸಾಗಿಸಲು ಕಾರಣವಾಗಿದೆ. ಆಂತರಿಕ ಭದ್ರತಾ ಕಾರ್ಯದಲ್ಲಿ ಜನರು ಪೊಲೀಸರೊಂದಿಗೆ ಕೈಜೋಡಿಸಿ ಸಹಕಾರ ನೀಡಿದರೆ ಎದುರಾಗಬಹುದಾದ ದೊಡ್ಡ ಅನಾಹುತ ತಡೆಯಲು ಸಾಧ್ಯ ಎಂದರು.

ರೂಟ್ ಮಾರ್ಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಹಶೀಲ್ದಾರ್‌ ಕೆ. ರಾಘವೇಂದ್ರ ರಾವ್‌ ಮಾತನಾಡಿ, ಸಮಾಜದಲ್ಲಿ ಅಪರಾಧಗಳನ್ನು ತಡಗಟ್ಟುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು ಅಪರಾಧ ತಡೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯುವಕರು ನಾಯಕತ್ವ ವಹಿಸಬೇಕು. ಯುವಕರು ಅಪರಾಧ ತಡೆಯನ್ನೂ ಒಳಗೊಂಡಂತೆ ಸಮಾಜದ ಒಟ್ಟಾರೆ ಧನಾತ್ಮಕ ಬದಲಾವಣೆಯ ರಾಯಭಾರಿಗಳಾಗಬೇಕು ಎಂದರು.

ಆರ್‌ಎಎಫ್ ಅಸಿಸ್ಟಂಟ್ ಕಮಾಂಡೆಂಟ್ ಅನಿಲಕುಮಾರ ಜಾಧವ, ಪಿಎಸ್‍ಐ ಐ.ಎಚ್.ರಿತ್ತಿ, ರವಿಂದ್ರ ಹಾಗೂ ಆರ್‌ಎಎಫ್ ಸಿಬ್ಬಂದಿ, ಶಿರಹಟ್ಟಿ ಪೊಲೀಸ್ ಠಾಣಾ ಸಿಬ್ಬಂದಿ ಇದ್ದರು.

ಕಾನೂನನ್ನು ಯಾರು ಗೌರವಿಸುತ್ತಾರೋ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಎಲ್ಲರ ರಕ್ಷಣೆಗಾಗಿಯೇ ಕಾನೂನುಗಳಿದ್ದು ಸುರಕ್ಷತೆಗಾಗಿ ಕಾನೂನು ಪಾಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕು
ಕೆ. ರಾಘವೇಂದ್ರ ರಾವ್‌ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.